‘ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲಿ’
ದಾವಣಗೆರೆ: ‘ಶಾಸಕ ಸ್ಥಾನಕ್ಕೆ ವಿಜಯೇಂದ್ರ ರಾಜೀನಾಮೆ ನೀಡಿ ಶಿಕಾರಿಪುರ ಕ್ಷೇತ್ರದಲ್ಲಿ ಮರುಚುನಾವಣೆ ಎದುರಿಸಲಿ’ ಎಂದು ಹರಿಹರ ಶಾಸಕ ಬಿ.ಪಿ.ಹರೀಶ್ ಒತ್ತಾಯಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಜಯೇಂದ್ರ ಶಾಸಕ ಸ್ಥಾನ ಕಾಂಗ್ರೆಸ್ ಭಿಕ್ಷೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ಹೊಂದಾಣಿಕೆ ರಾಜಕಾರಣದ ಆರೋಪಕ್ಕೆ ಇದು ಪುಷ್ಟಿ ನೀಡಿದೆ. ಇಂತಹ ಬ್ಲ್ಯಾಕ್‌ಮೇಲ್‌ಗೆ ಬಿ.ಎಸ್.ಯಡಿಯೂರಪ್ಪ ಕುಟುಂಬ ಸರಿಯಾಗಿ ಪ್ರತಿಕ್ರಿಯಿಸಬೇಕು. ಕಾಂಗ್ರೆಸ್ ಭಿಕ್ಷೆಯಿಂದ ಶಾಸಕರಾಗುವ ಅನಿವಾರ್ಯ ಬಿಜೆಪಿ ನಾಯಕರಿಗೆ ಇಲ್ಲ ಎಂಬುದನ್ನು ತೋರಿಸಬೇಕು’ ಎಂದರು. ‘ಹೋರಾಟ, ಪಕ್ಷ ಸಂಘಟನೆಯಿಂದ ವಿಮುಖರಾಗಿರುವ ಯಡಿಯೂರಪ್ಪ ಶ್ರೀಮಂತ ಕುಟುಂಬಗಳ ಸಖ್ಯ ಬಯಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಶಾಮನೂರು ಶಿವಶಂಕರಪ್ಪ ಕುಟುಂಬದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಸಂಸದ ಬಸವರಾಜ ಬೊಮ್ಮಾಯಿ ಕೂಡ ಇವರೊಂದಿಗೆ ಕೈಜೋಡಿಸಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಹೇಳಿದರು. ‘ರಾಜ್ಯದಲ್ಲಿ ನಡೆಯುತ್ತಿರುವ ಹೊಂದಾಣಿಕೆ ರಾಜಕಾರಣ ಅಸಹ್ಯ ಹುಟ್ಟಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಭ್ರಷ್ಟಾಚಾರ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ಮುಖಂಡರಿಗೆ ತಕ್ಕ ಪಾಠ ಕಲಿಸಲಿದ್ದೇವೆ’ ಎಂದರು. ‘ವಿಜಯೇಂದ್ರ ಮಾಡಿರುವ ತಪ್ಪುಗಳನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುತ್ತದೆ. ಪಕ್ಷಕ್ಕೆ ಪರ್ಯಾಯ ನಾಯಕರ ಅಗತ್ಯವಿದ್ದು, ಹೈಕಮಾಂಡ್ ಒಪ್ಪಿಗೆ ಪಡೆದು ಮುಂದುವರಿಯುತ್ತೇವೆ’ ಎಂದು ಹೇಳಿದರು.