ಬೆಂಗಳೂರು: ಉಡುಪಿಯ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು ಚಿತ್ರೀಕರಣ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಕೃತ್ಯ ಎಸಗಿದ ವಿದ್ಯಾರ್ಥಿನಿಯರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿರುವ ಬಿಜೆಪಿ, ಸಮಗ್ರ ತನಿಖೆಗೆ ಒತ್ತಾಯಿಸಿ ಇದೇ 27 ರಂದು ರಾಜ್ಯ ವ್ಯಾಪಿ ಹೋರಾಟ ನಡೆಸುವುದಾಗಿ ತಿಳಿಸಿದೆ.
ಈ ಕುರಿತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
‘ವಿಡಿಯೊವನ್ನು ಯಾರಿಗೆಲ್ಲ ಕಳುಹಿಸಿದ್ದಾರೆ ಎಂಬ ವಿವರವಾದ ತನಿಖೆ ಮಾಡಬೇಕು ಮತ್ತು ಈ ಕೃತ್ಯ ಎಸಗಿರುವ ವಿದ್ಯಾರ್ಥಿನಿಯರನ್ನು ಕೂಡಲೇ ಬಂಧಿಸಬೇಕು. ಈ ವಿದ್ಯಾರ್ಥಿನಿಯರು ಸ್ನಾನದ ಕೊಠಡಿಯಲ್ಲಿ ಮೊಬೈಲ್ ಕ್ಯಾಮೆರಾವನ್ನು ಗೋಪ್ಯವಾಗಿ ಇರಿಸಿ ಒಬ್ಬ ವಿದ್ಯಾರ್ಥಿನಿಯು ಸ್ನಾನ ಮಾಡುವುದನ್ನು ಚಿತ್ರೀಕರಣ ಮಾಡಿ, ಅದನ್ನು ಬೇರೆಯವರಿಗೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.
ಈ ಘಟನೆ ಇದೇ 19 ರಂದು ಬೆಳಕಿಗೆ ಬಂದಿದೆ. ಈ ಕೃತ್ಯ ನಡೆಸಿದ ವಿದ್ಯಾರ್ಥಿನಿಯರನ್ನು ಅಮಾನತು ಮಾಡಿದ್ದನ್ನು ಬಿಟ್ಟರೆ ಬೇರೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಕೃತ್ಯ ಬಯಲಿಗೆಳೆದ ರಶ್ಮಿ ಸಾಮಂತ್ ಎಂಬ ವಿದ್ಯಾರ್ಥಿನಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ ಎಂದು ಅವರು ಟೀಕಿಸಿದರು.
ವಿಧಾನಪರಿಷತ್ ಸದಸ್ಯೆ ತೇಜಸ್ವಿನಿಗೌಡ ಮಾತನಾಡಿ, ಗೃಹ ಸಚಿವ ಪರಮೇಶ್ವರ ಅವರು ಯಾವುದೇ ಕ್ರಮ ಕೈಗೊಳ್ಳದೇ ಕೈಕಟ್ಟಿ ಕುಳಿತಿದ್ದಾರೆ. ವಿಡಿಯೊ ಹರಿ ಬಿಡದಂತೆ ಸೂಚಿಸಿದ್ದಾರೆ. ಮಾನಹಾನಿ ಮಾಡುವ ಕೆಟ್ಟ ಆಲೋಚನೆಯ ದುರುದ್ದೇಶದ ವಿಡಿಯೊ ಚಿತ್ರೀಕರಣಕ್ಕೆ ಮರಣ ದಂಡನೆ ವಿಧಿಸುವುದು ಸೂಕ್ತ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.