ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದನ ಕಾಯುತ್ತ ಬಯಲಾಟ ಮಾಡುತ್ತಿದ್ದೆ: ಸಾಹಿತಿ ಚಂದ್ರಶೇಖರ ಕಂಬಾರ

ಪ್ರಜಾವಾಣಿ ಸೆಲೆಬ್ರಿಟಿ ಲೈವ್
Last Updated 10 ಅಕ್ಟೋಬರ್ 2021, 3:11 IST
ಅಕ್ಷರ ಗಾತ್ರ

ಬೆಂಗಳೂರು: ‘ನನಗೆ ಕಂಬಾರಿಕೆ ಹತ್ತಲಿಲ್ಲ. ಹೀಗಾಗಿ, ದನ ಕಾಯಲು ಹಚ್ಚಿದರು. ಆಗ ಚೇಷ್ಟೆ ಮಾಡಿಕೊಂಡು ಬಯಲಾಟ ಅನುಕರಣೆ ಮಾಡುತ್ತಿದ್ದೆ. ದೊಡ್ಡವನಾದ ಮೇಲೆ ಅಣ್ಣ ಶಾಲೆಗೆ ಹೋಗಲು ಒತ್ತಾಯಿಸಿದ. ಕೈಕಾಲು ಕಟ್ಟಿ ಶಾಲೆಗೆ ಎಸೆದು ಬಂದ...’

ಶನಿವಾರ ನಡೆದ ‘ಪ್ರಜಾವಾಣಿ’ ಸೆಲೆಬ್ರಿಟಿ ಲೈವ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಹಿತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರು, ತಮ್ಮ ಬಾಲ್ಯದ ಅನುಭವಗಳು, ಸಾಹಿತ್ಯ ಕೃಷಿ, ಕನ್ನಡ ಭಾಷೆಯ ಉಳಿವು, ಜಾನಪದ ಪರಂಪರೆಯ ಬೆಳವಣಿಗೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು.

‘ಪ್ರಾಥಮಿಕ ಶಾಲೆಯಲ್ಲಿ ದೇಶಪಾಂಡೆ ಮಾಸ್ತರ್‌ ಎನ್ನುವವರು ಅಕ್ಷರ ಕಲಿಸಿದರು. ಶುಲ್ಕ ಪಾವತಿಸಲು ಸಾಧ್ಯವಾಗದಿದ್ದರಿಂದ ಪ್ರೌಢಶಾಲೆಗೆ ಸಾವಳಗಿ ಮಠಕ್ಕೆ ಸೇರಿದೆ. ಈ ಮಠದಲ್ಲಿದ್ದುಕೊಂಡು ಎಸ್ಸೆಸ್ಸೆಲ್ಸಿ ಪಾಸಾದೆ. ಸಾವಳಗಿ ಮಠ ಹಿಂದೂ–ಮುಸ್ಲಿಂ ಮೈತ್ರಿಗೆ ಸಾಕ್ಷಿಯಾಗಿದೆ. ಬಂದೇ ನವಾಜರು ಈ ಮಠಕ್ಕೆ ಭೇಟಿ ನೀಡಿದಾಗ ಸ್ವಾಮೀಜಿಗಳ ಜತೆ 13 ದಿನ ಧರ್ಮಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತದೆ. ಅಂತಿಮವಾಗಿ ಧರ್ಮಗಳು ಒಂದೇ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಅಂದಿನಿಂದ ಸಾವಳಗಿ ಮಠದಲ್ಲಿ 13 ದಿನ ಸ್ವಾಮೀಜಿಗಳು ಹಸಿರು ಬಟ್ಟೆ ಧರಿಸುತ್ತಾರೆ. ಅವರು ಖಾವಿ ಬಟ್ಟೆ ಧರಿಸಿಕೊಳ್ಳುತ್ತಾರೆ. ಸಾವಳಗಿ ಮಠದ 360 ಶಾಖಾ ಮಠಗಳಲ್ಲೂ ಈ ಪದ್ಧತಿ ಅನುಸರಿಸಲಾಗುತ್ತದೆ’ ಎಂದು ವಿವರಿಸಿದರು.

‘ನಮ್ಮೂರು ಘಟಪ್ರಭಾ ನದಿ ದಂಡೆಯ ಮೇಲಿದೆ. ಪ್ರವಾಹ ಬಂದರೆ ಮನೆತನಕ ಬರುತ್ತಿತ್ತು. ನಮ್ಮ ಪ್ರದೇಶ ಆಗ ಕೊಲೆಗಳಿಗೆ ಹೆಸರುವಾಸಿಯಾಗಿತ್ತು. ಕೊಲೆಗಡುಕರಿಗೆ ಮಹಾಪೂರ ಬಂದರೆ ಅದೊಂದು ಸೀಸನ್‌. ಹೆಣಗಳು ನದಿಯಲ್ಲಿ ತೇಲಿ ಬರುತ್ತಿದ್ದವು. ಆಗ ಇಡೀ ಊರಲ್ಲಿ ಹೆಣಗಳ ಬಗ್ಗೆ ಕಟ್ಟುಕಥೆಗಳು ಹುಟ್ಟಿಕೊಳ್ಳುತ್ತಿದ್ದವು. ಅದೊಂದು ರೀತಿಯಲ್ಲಿ ಸೃಜನಶೀಲತೆಗೆ ಸಾಕ್ಷಿಯಾಗುತ್ತಿತ್ತು. ನಮ್ಮ ಊರು ಜನ ಧರ್ಮಿಷ್ಟರು. ರುದ್ರಯ್ಯ ಸ್ವಾಮಿ ಎನ್ನುವವರ ಮೂಲಕ ಸಂಸ್ಕಾರ ಮಾಡಿ ಹೂಳುತ್ತಿದ್ದರು’ ಎಂದು ತಮ್ಮ ಊರಿನ ಅನುಭವಗಳನ್ನು ಹಂಚಿಕೊಂಡರು.

’ನಾನು ದನ ಕಾಯುವ ದಿನಗಳಿಂದಲೂ ಜಾನಪದ ಸಾಹಿತ್ಯ, ಸಂಗೀತ ನನ್ನ ದೇಹದಲ್ಲಿತ್ತು. ದನಗಳನ್ನು ಕಾಯುತ್ತ 3–4 ಮಂದಿ ಸೇರಿ ಬಯಲಾಟ ಅನುಕರಣೆ ಮಾಡುತ್ತಿದ್ದೆವು. ಕಾಲೇಜು ಶಿಕ್ಷಣಕ್ಕಾಗಿ ಬೆಳಗಾವಿಗೆ ಹೋದೆ. ಅಲ್ಲಿನ ನಾಗನೂರು ಮಠದಲ್ಲಿದ್ದುಕೊಂಡು ಓದು ಮುಂದುವರಿಯಿತು. ಕಾಲೇಜಿನಲ್ಲಿದ್ದಾಗಲೂ ಬರೆಯುತ್ತಿದ್ದೆ’ ಎಂದು ಹೇಳಿದರು.

‘ಸೃಜನಶೀಲ ಲೇಖಕನಿಗೆ ಬಾಲ್ಯ ಬಹಳ ಮುಖ್ಯ. ಆದರೆ, ಇಂದಿನ ಮಕ್ಕಳ ಬಗ್ಗೆ ನನಗೆ ಕರುಣೆ ಬರುತ್ತದೆ. ನಮಗೆ ಇಂದು ಇಂಗ್ಲಿಷ್ ಮಾದರಿಯಾಗಿದೆ. ಇಂಗ್ಲಿಷ್‌ ಮೂಲಕವೇ ಶಿಕ್ಷಣ ನೀಡುತ್ತಿದ್ದೇವೆ. ನಮ್ಮತನ ಎನ್ನುವುದು ಯಾವುದು ಇಲ್ಲ. ಸರ್ಕಾರಗಳು ನಮ್ಮನ್ನು ಇಂಗ್ಲಿಷಮಯವನ್ನಾಗಿ ಮಾಡಲು ಪಣ ತೊಟ್ಟರೆ ಏನು ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಭಾರತಕ್ಕೆ ಬ್ರಿಟಿಷರು ಬಂದ ಮೇಲೆ ನಮ್ಮ ಪರಂಪರೆಯಿಂದ ದೂರವಿರಿಸಿ, ಕೀಳರಿಮೆ ಸೃಷ್ಟಿಸಿದರು. 33 ಕೋಟಿ ದೇವರುಗಳು, 64 ಸಾವಿರ ಜಾತಿಗಳು, 1020ಕ್ಕೂ ಹೆಚ್ಚು ಭಾಷೆಗಳನ್ನು ಹೊಂದಿರುವ ವೈವಿಧ್ಯಮಯ ದೇಶ ಇನ್ನೊಂದಿಲ್ಲ. ಇಂತಹ ಸಂಸ್ಕೃತಿ, ಪರಂಪರೆಯನ್ನು ಹೇಗೆ ಬಿಡಲು ಸಾಧ್ಯ. ಆದರೆ, ಬ್ರಿಟಿಷರು ನಮಗೆ ಕನಸುಗಳು ಇಲ್ಲದ ಹಾಗೆಯೇ ಮಾಡಿದರು’ ಎಂದು
ವಿವರಿಸಿದರು.

‘ಸಂಗ್ಯಾ ಬಾಳ್ಯಾ’ ನಿಷೇಧಿಸಿದ್ದ ಬ್ರಿಟಿಷ್‌ ಸರ್ಕಾರ
ಕೇವಲ ಒಂದು ಸಂಭಾಷಣೆಗಾಗಿ ‘ಸಂಗ್ಯಾ ಬಾಳ್ಯಾ’ ನಾಟಕವನ್ನು ನಿಷೇಧಿಸಿದ್ದ ಪ್ರಸಂಗವನ್ನು ಕಂಬಾರರು ಬಿಚ್ಚಿಟ್ಟರು.

ಈ ನಾಟಕದಲ್ಲಿ ಸಂಗ್ಯಾನ ಕೊಲೆಯಾಗುತ್ತದೆ. ಆಗ ವಿರೂಪಾಕ್ಷಿ ಸಹೋದರರು ‘ಈ ಕೆಟ್ಟ ಬ್ರಿಟಿಷ್‌ ಸರ್ಕಾರ ನಮಗೆ ಯಾವ ಶಿಕ್ಷೆ ಕೊಡುತ್ತದೆ’ ಎಂದು ಕೇಳುತ್ತಾರೆ. ಈ ಸಂಭಾಷಣೆಗಾಗಿ ಬ್ರಿಟಿಷರು ನಾಟಕ ನಿಷೇಧಿಸಿದ್ದರು. ಆದರೆ, ಜನರು ಸವಾಲಾಗಿ ಸ್ವೀಕರಿಸಿದರು. ಯಾವುದೇ ಬಯಲಾಟ ಮಾಡಿದರೂ ರಾಕ್ಷಸರ ಹಾಡುಗಳನ್ನು ಬ್ರಿಟಿಷರ ಧಾಟಿಯಲ್ಲಿ ಹಾಡುತ್ತಿದ್ದರು ಎಂದು ನೆನಪಿಸಿ
ಕೊಂಡರು.

ಕಂಬಾರರು ಪ್ರತಿಪಾದಿಸಿದ ಅಂಶಗಳು

*ಇಂಗ್ಲಿಷ್‌ ಭಾಷೆಯೇ ಮಾದರಿಯಾಗುತ್ತಿರುವ ಈ ಸಂದರ್ಭದಲ್ಲಿ ಶಿಕ್ಷಣ, ಆಡಳಿತ, ಕಲಿಕೆ, ವ್ಯಾಪಾರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ಬಳಸಬೇಕು. ಆಗ ಮಾತ್ರ ಕನ್ನಡಕ್ಕೆ ಭವಿಷ್ಯ ಇದೆ.

*ಮೌಖಿಕ ಪರಂಪರೆಯಿಂದ ಜಾನಪದ ಬದುಕಿದೆ. ಅದಕ್ಕೆ ಅಕ್ಷರ ತಾಕಿದರೆ ನಾಶವಾಗುತ್ತದೆ. ಬರವಣಿಗೆಯಿಂದ ಜಾನಪದ ಬೆಳೆಯುವುದಿಲ್ಲ. ಜಾನಪದ ಉಳಿವಿಗೆ ಹೊಸ ಮಾರ್ಗವನ್ನು ಹುಡುಕಬೇಕಾಗಿದೆ.

*ಅಸಮಾಧಾನಗಳನ್ನು ಹೊರಹಾಕಲು ನಾನು ಬರೆಯುತ್ತೇನೆ. ಬೇರೆಯವರನ್ನು ಅನುಕರಣೆ ಮಾಡಿಲ್ಲ. ನಮ್ಮತನವನ್ನೇ ಅನುಕರಣೆ ಮಾಡಿದ್ದೇನೆ.

*ಬಾಯಿ ಪಾಠ ಮಾಡುವ ಯಂತ್ರಗಳನ್ನು ಸೃಷ್ಟಿಸಬೇಕಾಗಿಲ್ಲ. ಸೃಜನಶೀಲತೆ ಸೃಷ್ಟಿಸಬೇಕು. ಇಂಗ್ಲಿಷ್‌ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT