ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನರ್ಹ ಬಿಪಿಎಲ್‌ ಕಾರ್ಡು‌ ರದ್ದು: ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

ಡಿಸಿ, ಸಿಇಒ ಜತೆ ಇಡೀ ದಿನ ಸಭೆ
Published 9 ಜುಲೈ 2024, 0:24 IST
Last Updated 9 ಜುಲೈ 2024, 0:24 IST
ಅಕ್ಷರ ಗಾತ್ರ

ಬೆಂಗಳೂರು: ‘ಅನರ್ಹ ಬಿಪಿಎಲ್‌ ಕಾರ್ಡುಗಳನ್ನು ರದ್ದುಪಡಿಸಿ, ಅರ್ಹರಿಗೆ ಬಿಪಿಎಲ್‌ ಕಾರ್ಡು ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಇಡೀ ದಿನ ನಡೆಸಿದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಅವರು ಈ ನಿರ್ದೇಶನ ನೀಡಿದರು.

‘ರಾಜ್ಯದಲ್ಲಿ ‌ಶೇ 80ರಷ್ಟು ಬಿಪಿಎಲ್‌ ಕುಟುಂಬಗಳಿದ್ದು (1.27 ಕೋಟಿ), 4.37 ಕೋಟಿ ಜನರು ಬಿಪಿಎಲ್‌ ಕಾರ್ಡ್‌ ಸೌಲಭ್ಯ ಪಡೆಯುತ್ತಿದ್ದಾರೆ. ಹೊಸ ಕಾರ್ಡ್‌ಗಳಿಗೆ ಸಲ್ಲಿಕೆಯಾದ 2.95 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿಯಿವೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿದ್ದರೂ, ಬಿಪಿಎಲ್‌ ಕಾರ್ಡ್‌ ಪ್ರಮಾಣ ಕಡಿಮೆ ಆಗದಿರಲು ಕಾರಣವೇನು’ ಎಂದು ಪ್ರಶ್ನಿಸಿದರು.

‘ತಮಿಳುನಾಡಿನಲ್ಲಿ ಬಿಪಿಎಲ್‌ ಕುಟುಂಬಗಳ ಪ್ರಮಾಣ ಶೇ 40ರಷ್ಟಿದೆ. ರಾಜ್ಯದಲ್ಲಿ ಈ ಕುರಿತು ಪರಿಶೀಲಿಸಿ, ಅನರ್ಹರನ್ನು ಕೈಬಿಡುವ ಕಾರ್ಯ ನಡೆಯಬೇಕು. ಕಾರ್ಡ್‌ಗಳಲ್ಲಿರುವ ಮೃತ ಸದಸ್ಯರ ಹೆಸರು ತೆಗೆದು ಹಾಕುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು’ ಎಂದರು.

ಇನ್ನು ಹಿರಿಯ ಅಧಿಕಾರಿಗಳು ಹೊಣೆ: ‘ಕೆಲಸದಲ್ಲಿನ ಉದಾಸೀನ, ನಿರ್ಲಕ್ಷ್ಯ, ಕರ್ತವ್ಯಲೋಪಕ್ಕೆ ಕೆಳಹಂತದ ಅಧಿಕಾರಿಗಳ ವಿರುದ್ಧ ಮಾತ್ರವಲ್ಲ, ಇನ್ನು ಮುಂದೆ ಹಿರಿಯ ಅಧಿಕಾರಿಗಳನ್ನೂ ಹೊಣೆ ಮಾಡಲಾಗುವುದು. ಜನರನ್ನು ಅನಗತ್ಯವಾಗಿ ಅಲೆದಾಡಿಸಬೇಡಿ. ಅವರ ದೂರುಗಳನ್ನು ಆಲಿಸಿ, ಅಗತ್ಯ ಪರಿಹಾರ ಒದಗಿಸಿ’ ಎಂದು ತಾಕೀತು ಮಾಡಿದರು.

ಡೆಂಗಿ ನಿಯಂತ್ರಿಸಿ: ರಾಜ್ಯದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿ, ‘ತಕ್ಷಣ ಡೆಂಗಿ ನಿಯಂತ್ರಣಕ್ಕೆ ತರಬೇಕು. ಜಿಲ್ಲಾಧಿಕಾರಿಗಳು, ಜಿಲ್ಲಾ ವೈದ್ಯಾಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ಮಾಡಿ ಕ್ಷಿಪ್ರವಾಗಿ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

‘ಜನಸಂಪರ್ಕ ಸಭೆಗಳಲ್ಲಿ 20 ಸಾವಿರ ಅರ್ಜಿಗಳು ಬರುತ್ತವೆ. ನೀವು ಸರಿಯಾಗಿ ಕೆಲಸ ಮಾಡಿದ್ದರೆ ಇಷ್ಟೊಂದು ಸಂಖ್ಯೆಯ ಅರ್ಜಿಗಳು ನನ್ನ ಬಳಿಗೆ ಏಕೆ ಬರುತ್ತವೆ? ನಿಮ್ಮಿಂದ ಪರಿಹಾರ ಸಿಕ್ಕಿಲ್ಲವೆಂದು ಜನ ನನ್ನ ಬಳಿಗೆ ಬಂದಿದ್ದಾರೆ. ಜನರ ಸಮಸ್ಯೆಗಳ ಅರ್ಜಿಗಳು ಸಕಾರಾತ್ಮಕವಾಗಿ, ಗುಣಾತ್ಮಕವಾಗಿ ವಿಲೇವಾರಿ ಆಗದೇ ಇದ್ದರೆ, ನಿಮ್ಮ ‌ವಿರುದ್ಧ ಕ್ರಮ ಖಚಿತ’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಪಿಂಚಣಿ ಅರ್ಜಿಗಳು ಬಾಕಿ ಇವೆ ಎನ್ನುವ ಪಟ್ಟಿ ಪ್ರಸ್ತಾಪಿಸಿದ ಮುಖ್ಯಮಂತ್ರಿ, ‘ಕಾಲಮಿತಿಯೊಳಗೆ ಇತ್ಯರ್ಥ ಮಾಡಬೇಕು. ಪಿಂಚಣಿಗಳ ವಿಲೇ ಅವಧಿ ಸದ್ಯ 45 ದಿನ ಇದೆ. ಅದನ್ನು 30‌ಕ್ಕೆ ಇಳಿಸಲಾಗುವುದು’ ಎಂದರು.

91 ಸಾವಿರ ಎಕರೆ ಜಮೀನು ಒತ್ತವರಿ: ‘ರಾಜ್ಯದಲ್ಲಿ 1.40 ಕೋಟಿ ಎಕರೆ ಸರ್ಕಾರಿ ಜಮೀನು ಇದ್ದು, ಲ್ಯಾಂಡ್‌ ಬೀಟ್‌ ಮೊಬೈಲ್ ತಂತ್ರಾಂಶದ ಮೂಲಕ ದತ್ತಾಂಶ ಸೃಜಿಸಲಾಗಿದೆ. ಒಟ್ಟು 91 ಸಾವಿರ ಎಕರೆ ಜಮೀನು ಒತ್ತುವರಿ ಆಗಿರುವುದನ್ನು ಗುರುತಿಸಲಾಗಿದೆ. ಆಗಸ್ಟ್‌ ತಿಂಗಳಿನಿಂದ ಸರ್ವೇಯರ್‌ಗಳ ಲಭ್ಯತೆ ನೋಡಿಕೊಂಡು ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು. ಇತರ ಇಲಾಖೆಯವರೂ ತಮ್ಮ ಜಮೀನು ಎಲ್ಲಿದೆ ಹಾಗೂ ಒತ್ತುವರಿ ಆಗಿದೆಯೇ ಎಂಬ ಕುರಿತು ಪರಿಶೀಲಿಸಲು ಅವಕಾಶವಿದೆ’ ಎಂದು ಸಭೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ತಾವು‌ ಮಹಾರಾಜರು ಎಂಬ ಭಾವನೆ ಇದ್ದರೆ ಜನಸೇವೆ ಸಾಧ್ಯವಿಲ್ಲ. ಸರ್ಕಾರದ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಜಿಲ್ಲಾಧಿಕಾರಿಗಳು ಎಸ್‌ಪಿಗಳು ಸಿಇಒಗಳು‌ ಕ್ರಿಯಾಶೀಲವಾಗಿ ಸಮನ್ವಯದಿಂದ ಕೆಲಸ ಮಾಡಬೇಕು
-ಸಿದ್ದರಾಮಯ್ಯ ಮುಖ್ಯಮಂತ್ರಿ

‘ಅವತ್ತು ಭ್ರಷ್ಟಾಚಾರ ಹೇಗಿತ್ತು?’

‘40 ವರ್ಷಕ್ಕೂ ಹೆಚ್ಚು ಅವಧಿಯಿಂದ ಅಧಿಕಾರಿಗಳ ಕಾರ್ಯವೈಖರಿ ನೋಡುತ್ತಿದ್ದೇನೆ. ಅವತ್ತು ಭ್ರಷ್ಟಾಚಾರ ಹೇಗಿತ್ತು ಇವತ್ತು ಹೇಗಿದೆ ಎಂದು ನೋಡಿದಾಗ ಕಾರ್ಯಾಂಗ ಮತ್ತು ಶಾಸಕಾಂಗ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಕಂಡುಬರುತ್ತದೆ’ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು. ‘ರಾಜಕಾರಣಿಗಳು ಹಾಗೂ ಅಧಿಕಾರಿಗಳ ಅನುಭವದ ಮೇಲೆ ಆಡಳಿತ ಹೆಚ್ಚು ಪರಿಣಾಮಕಾರಿ ಆಗಬೇಕು. ಆದರೆ ನಿರೀಕ್ಷಿತ ಮಟ್ಟದಲ್ಲಿ ಪರಿಣಾಮಕಾರಿ ಆಗಿಲ್ಲ‘ ಎಂದೂ ಅವರು ಹೇಳಿದರು.

ರೈತರ ಆತ್ಮಹತ್ಯೆ: ಪರಿಹಾರ ವಿಳಂಬ ಸಲ್ಲ’

‘ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಒದಗಿಸುವಲ್ಲಿ ವಿಳಂಬ ಸಲ್ಲದು. ಕಾನೂನು ಪ್ರಕಾರ ಪರಿಶೀಲಿಸಿ 1003 ಅರ್ಹ ಪ್ರಕರಣಗಳಲ್ಲಿ 994 ರೈತರ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಕಾನೂನು ಪ್ರಕಾರವೇ ಉದಾರತನದಿಂದ ವರ್ತಿಸಿ ಪರಿಹಾರ ನೀಡಬೇಕು. ಸಣ್ಣಪುಟ್ಟ ತಾಂತ್ರಿಕ ಕಾರಣಗಳಿಗಾಗಿ ರೈತರ ಆತ್ಮಹತ್ಯೆ ಪರಿಹಾರದ ಅರ್ಜಿಗಳನ್ನು ತಿರಸ್ಕರಿಸದೆ ರೈತ ಕುಟುಂಬಗಳಿಗೆ ಸಹಾಯ ಮಾಡಿ’ ಎಂದು ಹೇಳಿದ ಮುಖ್ಯಮಂತ್ರಿ ‘ರೈತರ ಸಭೆ ಮಾಡಿ ಜಾಗೃತಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಮಾಡಬೇಕು’ ಎಂದು ಸಿದ್ದರಾಮಯ್ಯ ನಿರ್ದೇಶನ ನೀಡಿದರು. ಆಸ್ತಿ ತೆರಿಗೆ ವಸೂಲಾತಿ ‘ಕಳೆದ ವರ್ಷದ ₹224 ಕೋಟಿ ಆಸ್ತಿ ತೆರಿಗೆ ವಸೂಲಾತಿಗೆ ಬಾಕಿಯಿದೆ. ಪ್ರಸ್ತುತ ವರ್ಷದ ಜೂನ್‌ ಅಂತ್ಯದವರೆಗೆ ₹806 ಕೋಟಿ ಆಸ್ತಿ ತೆರಿಗೆ ವಸೂಲು ಮಾಡಲಾಗಿದ್ದು ₹1053 ಕೋಟಿ ವಸೂಲಾತಿಗೆ ಬಾಕಿಯಿದೆ. ಜಿಲ್ಲಾಧಿಕಾರಿಗಳು ಅಭಿಯಾನದ ರೀತಿಯಲ್ಲಿ ಆಸ್ತಿ ತೆರಿಗೆ ವಸೂಲಾತಿಗೆ ಕ್ರಮ ಕೈಗೊಳ್ಳಬೇಕು’ ಎಂದರು.

‘ಡೀಮ್ಡ್‌ ಅರಣ್ಯ: ಸಂಪುಟ ಸಭೆಗೆ ವರದಿ’

ಯಾವುದೇ ಜಮೀನನ್ನು ತಪ್ಪಾಗಿ ಡೀಮ್ಡ್‌ ಅರಣ್ಯ ಪಟ್ಟಿಗೆ ಸೇರಿಸಿದ್ದರೆ ಅಂಥದ್ದನ್ನು ಗುರುತಿಸಲು ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಎರಡು ತಿಂಗಳ ಒಳಗಾಗಿ ಜಂಟಿ ಸಮೀಕ್ಷೆ ನಡೆಸಿ ವರದಿಯನ್ನು ಸಂಪುಟದ ಮುಂದೆ ಮಂಡಿಸಬೇಕು’ ಎಂದು ಮುಖ್ಯಮಂತ್ರಿ ಸೂಚಿಸಿದರು.

ಕಲಬುರಗಿಯಲ್ಲಿ ಸಿ.ಎಂ ಜನಸ್ಪಂದನ

‘ಜನಸ್ಪಂದನ ಕಾರ್ಯಕ್ರಮವನ್ನು ಎಲ್ಲ ಜಿಲ್ಲೆಗಳಲ್ಲಿ ಆರಂಭಿಸಬೇಕು. ವಿಧಾನ ಮಂಡಲ ಅಧಿವೇಶನದ ಮುಗಿದ ಬಳಿಕ ಜಿಲ್ಲಾ ಜನಸ್ಪಂದನ ಕಾರ್ಯಕ್ರಮ ನಡೆಸಲು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ತಪ್ಪದೇ ಜನಸ್ಪಂದನಾ ಸಭೆಗಳನ್ನು ಮಾಡಬೇಕು. ಜಿಲ್ಲಾಧಿಕಾರಿಗಳು ಸ್ವೀಕರಿಸುವ ಅರ್ಜಿಗಳನ್ನು ಆದಷ್ಟು ಬೇಗ ವಿಲೇ ಮಾಡಬೇಕು. 40702 ಅರ್ಜಿಗಳನ್ನು ವಿಲೇ ಮಾಡಲಾಗಿದ್ದು ಇನ್ನೂ ಎಂಟು ಸಾವಿರ ಅರ್ಜಿಗಳು ವಿಲೇವಾರಿಗೆ ಬಾಕಿಯಿದೆ. ಅಧಿವೇಶನ ಮುಗಿದ ಬಳಿಕ ಮುಂದಿನ ತಿಂಗಳು ಕಲಬುರಗಿಯಲ್ಲಿ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT