ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬಗ್ಗೆ ಗೌರವದಿಂದ ಮಾತಾಡಿ: ಸಂಪುಟ ಸದಸ್ಯರಿಗೆ ಸಿದ್ದರಾಮಯ್ಯ ತಾಕೀತು

Published 26 ಡಿಸೆಂಬರ್ 2023, 16:21 IST
Last Updated 26 ಡಿಸೆಂಬರ್ 2023, 16:21 IST
ಅಕ್ಷರ ಗಾತ್ರ

ಬೆಂಗಳೂರು: ‘ಅನ್ನದಾತರಾದ ರೈತರ ಬಗ್ಗೆ ಎಚ್ಚರಿಕೆಯಿಂದ ಮಾತ್ರವಲ್ಲ, ಗೌರವದಿಂದ ಮಾತನಾಡಬೇಕು. ಹಗುರ ಮಾತುಗಳ ಮೂಲಕ ರೈತರನ್ನು ಅವಮಾನಿಸಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಸದಸ್ಯರಿಗೆ ತಾಕೀತು ಮಾಡಿದ್ದಾರೆ.

‘ರೈತರು ಪರಿಹಾರಕ್ಕಾಗಿ ಬರ ಬಯಸುತ್ತಾರೆ’ ಎಂಬ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿಕೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಧಿಕೃತ ಖಾತೆಗಳಲ್ಲಿ ಮಂಗಳವಾರ ಪ್ರತಿಕ್ರಿಯಿಸಿರುವ ಅವರು, ‘ರೈತರನ್ನು ಗೌರವಿಸುವ ಸಂಹಿತೆಯನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ‍ಪಾಲಿಸಬೇಕು’ ಎಂದಿದ್ದಾರೆ.

ಶಿವಾನಂದ ಪಾಟೀಲ ಅವರು ರೈತರನ್ನು ಅವಮಾನಿಸಬೇಕೆಂಬ ದುರುದ್ಧೇಶದಿಂದ ಮಾತನಾಡಿರಲಾರರು. ರೈತರೊಂದಿಗಿನ ಸಲಿಗೆಯ ಕಾರಣಕ್ಕಾಗಿ ಆ ರೀತಿ ಮಾತನಾಡಿದ್ದಾರೆ. ಆದರೆ, ಅದನ್ನು ಸಮಸ್ತ ರೈತ ಸಮುದಾಯಕ್ಕೆ ಅನ್ವಯಿಸುವಾಗ ವಿಪರೀತ ಅರ್ಥಕ್ಕೆ ಕಾರಣವಾಗುತ್ತದೆ. ಈ ರೀತಿಯ ವರ್ತನೆ ಸಲ್ಲದು ಎಂದು ಹೇಳಿದ್ದಾರೆ.

‘ಬೀಜ, ಗೊಬ್ಬರ ಕೇಳಿದ ರೈತರ ಮೇಲೆ ಗುಂಡಿಕ್ಕಿದ, ರೈತರ ಸಾಲ ಮನ್ನಾ ಬೇಡಿಕೆಯನ್ನು ನಿರಾಕರಿಸಿದ ಬಿಜೆಪಿ ನಾಯಕರಿಗೆ ಈ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷದ ವಿರುದ್ಧ ಮಾತನಾಡುವ ನೈತಿಕತೆ ಇದೆಯೆ? ಬರಗಾಲದಲ್ಲಿ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಚಿಕ್ಕಾಸಿನ ಪರಿಹಾರ ನೀಡಿಲ್ಲ. ಆದರೂ ನಾವು ರೈತರ ಮೇಲಿನ ಪ್ರೀತಿಯಿಂದ ಅನೇಕ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದ್ದೇವೆ’ ಎಂದಿದ್ದಾರೆ.

‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಏನೆಲ್ಲ ಕಸರತ್ತು ಮಾಡಿತ್ತು ಎನ್ನುವುದನ್ನು ಇಡೀ ದೇಶ ನೋಡಿದೆ. ಈಗ ಬಿಜೆಪಿ ನಾಯಕರು ತಿರುಚಿದ ಹೇಳಿಕೆಗಳನ್ನು ಹಿಡಿದುಕೊಂಡು ಎದೆ ಬಡಿದುಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT