ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿದ ನೀತಿ ಸಂಹಿತೆ: ಅಭಿವೃದ್ಧಿಗೆ ತೆರೆದ ದಾರಿ

Published 6 ಜೂನ್ 2024, 16:00 IST
Last Updated 6 ಜೂನ್ 2024, 16:00 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆ ಮತ್ತು ವಿಧಾನಪರಿಷತ್‌ ಚುನಾವಣೆಗಳು ಮುಗಿದು ಫಲಿತಾಂಶ ಪ್ರಕಟವಾಗಿರುವ ಬೆನ್ನಲ್ಲೇ ಚುನಾವಣಾ ನೀತಿ ಸಂಹಿತೆಯೂ ಮುಕ್ತಾಯಗೊಂಡಿದೆ. ಮೂರು ತಿಂಗಳು ನೀತಿ ಸಂಹಿತೆಯ ಅಡ್ಡಿ ಇದ್ದುದರಿಂದ ಅಭಿವೃದ್ಧಿ ಚಟುವಟಿಕೆಗೆ ಗರ ಬಡಿದಿತ್ತು. ಆ ತೆರೆ ಸರಿದು, ಆಡಳಿತ ಚುರುಕಿಗೆ ದಾರಿಯಾಗಲಿದೆ.

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ವಿಧಾನಪರಿಷತ್‌ ಚುನಾವಣೆ ಇದ್ದ ಕಾರಣ ಚುನಾವಣಾ ಆಯೋಗವು ನೀತಿ– ಸಂಹಿತೆಯನ್ನು ಜೂ.6 ರವರೆಗೆ ವಿಸ್ತರಿಸಿತ್ತು. ಅದು ಗುರುವಾರ ಸಂಜೆಗೆ ಮುಕ್ತಾಯಗೊಂಡಿದೆ. ಶುಕ್ರವಾರದಿಂದ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಸಭೆಗಳನ್ನು ನಡೆಸಬಹುದಾಗಿದೆ.

ಲೋಕಸಭಾ ಚುನಾವಣೆಗೆ ಮಾರ್ಚ್‌ ತಿಂಗಳಲ್ಲೇ  ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಮಾರ್ಚ್‌ 20ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಸುಮಾರು ಮೂರು ತಿಂಗಳ ಕಾಲ ಚುನಾವಣಾ ಪ್ರಕ್ರಿಯೆ ನಡೆಯಿತು. ಇದರಿಂದಾಗಿ ಸರ್ಕಾರಿ ಯಂತ್ರ ಬಹುತೇಕ ಸ್ಥಗಿತಗೊಂಡಂತಾಗಿತ್ತು. ರಾಜ್ಯದಲ್ಲಿ ಬರಗಾಲ ಇದ್ದರೂ ಪರಿಹಾರ ಕಾರ್ಯಕೈಗೊಳ್ಳುವುದರ ಸಂಬಂಧ ಸಭೆಯನ್ನೂ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.

ಸಚಿವ ಸಂಪುಟ ಸಭೆ, ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯೂ ನಿಂತು ಹೋಗಿತ್ತು. ಫೆಬ್ರುವರಿಯಲ್ಲಿ ಬಜೆಟ್‌ ಮಂಡಿಸಲಾಗಿದ್ದರೂ ಅದರ ಅನುಷ್ಠಾನಕ್ಕೆ ಆದೇಶವನ್ನು ಹೊರಡಿಸಲು ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ವಿವಿಧ ಇಲಾಖೆಗಳ ಅಧಿಕಾರಿಗಳು ರಾಜ್ಯ ಮತ್ತು ಹೊರ ರಾಜ್ಯಗಳಿಗೂ ಚುನಾವಣೆ ಕಾರ್ಯದ ನಿಮಿತ್ತ ಹೋಗಿದ್ದರು. ಈಗ ಎಲ್ಲ ಅಧಿಕಾರಿಗಳು ವಾಪಸ್‌ ಬಂದಿದ್ದು, ಶುಕ್ರವಾರದಿಂದ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ.

ರಾಜ್ಯದಲ್ಲಿ ಚುನಾವಣೆ ಮುಗಿಯುತ್ತಿದ್ದಂತೆಯೇ ಎಲ್ಲ ಇಲಾಖೆಗಳ ಮುಖ್ಯಸ್ಥರ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಜೆಟ್‌ನ ಘೋಷಣೆಗಳ ಕುರಿತು ಜೂನ್ 7ರಿಂದಲೇ ಆದೇಶ ಹೊರಡಿಸಲು ಅಗತ್ಯ ತಯಾರಿ ಮಾಡಿಕೊಳ್ಳಿ ಎಂದು ಸೂಚಿಸಿದ್ದರು. ಇನ್ನು ಮುಂದೆ ಆದೇಶಗಳು ಹೊರಬೀಳಲಿವೆ ಎಂದು ಮೂಲಗಳು ಹೇಳಿವೆ.

ಮುಂಗಾರು ಕಾಲಿಡುತ್ತಿರುವುದರಿಂದ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಅಗತ್ಯ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಅವೆಲ್ಲವೂ ಈಗ ಶುರುವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT