ಬೆಂಗಳೂರು: ಜನ್ಮಜಾತವಾಗಿ ಹೃದಯ ಕಾಯಿಲೆ ಎದುರಿಸುತ್ತಿರುವ ಮಕ್ಕಳ ಸಂಖ್ಯೆ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಆರೋಗ್ಯ ಇಲಾಖೆಯು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ (ಆರ್ಬಿಎಸ್ಕೆ) ನಡೆಸಿದ ತಪಾಸಣೆಯಲ್ಲಿ ಕಳೆದ ಒಂದೇ ವರ್ಷದಲ್ಲಿ 18,256 ಮಕ್ಕಳಲ್ಲಿ ಈ ಸಮಸ್ಯೆ ಪತ್ತೆಯಾಗಿದೆ.

ಗರ್ಭದಲ್ಲಿ ಮಗುವಿನ ಹೃದಯವು ಸರಿಯಾಗಿ ಬೆಳವಣಿಗೆ ಹೊಂದದಿರುವುದರಿಂದ ಉಂಟಾಗುವ ಹುಟ್ಟಿನ ದೋಷ ಇದಾಗಿದೆ. ಈ ಸಮಸ್ಯೆಯು ಹೃದಯದ ಕವಾಟಗಳು, ಕೋಣೆಗಳು ಅಥವಾ ರಕ್ತನಾಳಗಳಲ್ಲಿ ಬದಲಾವಣೆಗಳನ್ನು ಉಂಟುಮಾಡಿ, ರಕ್ತದ ಹರಿವು ಮತ್ತು ಹೃದಯದ ಕಾರ್ಯಚಟುವಟಿಕೆಗೆ ಅಡ್ಡಿಯಾಗುತ್ತದೆ. ಆರಂಭಿಕ ಹಂತದಲ್ಲಿಯೇ ಸಮಸ್ಯೆ ಪತ್ತೆ ಮಾಡಿದಲ್ಲಿ ಚಿಕಿತ್ಸೆ ಸುಲಭ ಸಾಧ್ಯ. ಇಲ್ಲವಾದಲ್ಲಿ ಹೃದಯ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ. ಆದ್ದರಿಂದಲೇ ಆರ್ಬಿಎಸ್ಕೆ ಕಾರ್ಯಕ್ರಮದಡಿ ಅಂಗನವಾಡಿ ಹಾಗೂ ಶಾಲಾ ಹಂತದಲ್ಲಿಯೇ ತಪಾಸಣೆ ನಡೆಸಿ, ಚಿಕಿತ್ಸೆ ಒದಗಿಸಲಾಗುತ್ತಿದೆ.

ಈ ಕಾರ್ಯಕ್ರಮದಡಿ 18 ವರ್ಷದೊಳಗಿನವರಿಗೆ ತಪಾಸಣೆ ನಡೆಸಲಾಗುತ್ತಿದೆ. ಹುಟ್ಟಿನ ದೋಷಗಳು, ರೋಗಗಳು ಮತ್ತು ಬೆಳವಣಿಗೆ ಕುಂಠಿತವನ್ನು ಗುರುತಿಸುವುದು ಹಾಗೂ ಚಿಕಿತ್ಸೆ ಒದಗಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ. 2024–25ನೇ ಸಾಲಿನಲ್ಲಿ 1.23 ಕೋಟಿ ಮಕ್ಕಳನ್ನು ಆರ್ಬಿಎಸ್ಕೆ ತಂಡ ತಪಾಸಣೆ ನಡೆಸಿದೆ. ಈ ಮಕ್ಕಳಿಗೆ ಹೃದಯ ತಪಾಸಣೆಯನ್ನೂ ನಡೆಸಿದ್ದು, ಜನ್ಮಜಾತ ಹೃದಯ ಕಾಯಿಲೆ ಪ್ರಕರಣ ಏರಿಕೆಯಾಗಿರುವುದು ದೃಢಪಟ್ಟಿದೆ. 2023–24ನೇ ಸಾಲಿನಲ್ಲಿ ನಡೆಸಲಾದ ಈ ತಪಾಸಣೆಯಲ್ಲಿ, 14,255 ಮಕ್ಕಳಲ್ಲಿ ಜನ್ಮಜಾತ ಹೃದಯ ಸಮಸ್ಯೆ ಖಚಿತಪಟ್ಟಿತ್ತು. 2022–23ರಲ್ಲಿ 13,491 ಮಕ್ಕಳಲ್ಲಿ ಈ ಕಾಯಿಲೆ ಪತ್ತೆಯಾಗಿತ್ತು.

ಚಿಕಿತ್ಸೆಗೆ ವ್ಯವಸ್ಥೆ:

ಈ ಜನ್ಮಜಾತ ಹೃದಯ ಕಾಯಿಲೆ ಎದುರಿಸುತ್ತಿರುವ ಮಕ್ಕಳಿಗೆ ಚಿಕಿತ್ಸೆ ಒದಗಿಸದಿದ್ದಲ್ಲಿ ಜೀವಕ್ಕೆ ಅಪಾಯವಾಗಲಿದೆ. ಕೆಲ ಮಕ್ಕಳು ಹೃದಯ ರಂಧ್ರದೊಂದಿಗೆ ಜನಿಸಲಿದ್ದು, ಅಂತಹವರಿಗೆ ಶಸ್ತ್ರಚಿಕಿತ್ಸೆ ಅತ್ಯಗತ್ಯ. ಆದ್ದರಿಂದ ಕಾಯಿಲೆ ಎದುರಿಸುತ್ತಿರುವವರಿಗೆ ಕಾರ್ಯಕ್ರಮದಡಿ ಉಚಿತವಾಗಿ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಯನ್ನೂ ಒದಗಿಸಲಾಗುತ್ತಿದೆ. ಸುವರ್ಣ ಆರೋಗ್ಯ ಸುರಕ್ಷಾ ಅಡಿ ಖಾಸಗಿ ಆಸ್ಪತ್ರೆಗಳು ಸೇರಿ 254 ಆಸ್ಪತ್ರೆಗಳು ನೋಂದಣಿಯಾಗಿದ್ದು, ಸಮಸ್ಯೆಯ ತೀವ್ರತೆ ಅನುಸಾರ ಈ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತಿದೆ.

‘ಜನ್ಮಜಾತ ಹೃದ್ರೋಗ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆಗಳಿವೆ. ಭ್ರೂಣದ ಹಂತದಲ್ಲಿಯೇ ಹೃದ್ರೋಗವನ್ನು ನಿರ್ದಿಷ್ಟವಾಗಿ ಪತ್ತೆ ಮಾಡಬಹುದಾದ ತಂತ್ರಜ್ಞಾನವೂ ಇದೆ. ಮಕ್ಕಳಲ್ಲಿ ಕಂಡುಬರುವ ಹೃದಯದ ಸಮಸ್ಯೆಗಳು ಹಿರಿಯರಲ್ಲಿನ ಹೃದ್ರೋಗಗಳಿಗಿಂತ ಸಂಪೂರ್ಣ ಭಿನ್ನ’ ಎಂದು ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯರು ತಿಳಿಸಿದರು.

‘ರಂಧ್ರ ಕವಾಟಗಳು ಕಿರಿದಾಗುವಿಕೆ’

‘ಪ್ರತಿ ಸಾವಿರ ಶಿಶುಗಳಲ್ಲಿ 8ರಿಂದ 10 ಶಿಶುಗಳು ಜನ್ಮಜಾತ ಹೃದಯ ರೋಗಗಳನ್ನು ಹೊಂದಿರುತ್ತಾರೆ. ಅಂತಹವರಲ್ಲಿ ಸಾಮಾನ್ಯವಾಗಿ ಹೃದಯದಲ್ಲಿ ರಂಧ್ರವಾಗುವಿಕೆ ಅಥವಾ ಕವಾಟಗಳು ಕಿರಿದಾಗುವಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ರೀತಿ ಸಮಸ್ಯೆ ಹೊಂದಿರುವವರಿಗೆ ಜ್ವರ ಕೆಮ್ಮು ನೆಗಡಿ ಬೆಳವಣಿಗೆ ಕುಂಠಿತಗೊಳ್ಳುವಿಕೆ ಚರ್ಮ ಮತ್ತು ಉಗುರು ನೀಲಿ ಬಣ್ಣಕ್ಕೆ ತಿರುಗುವುದು ಸೇರಿ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ’ ಎಂದು ಜಯದೇವ ಹೃದ್ರೋಗ ಸಂಸ್ಥೆಯ ಹೃದ್ರೋಗ ತಜ್ಞರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಕ್ಕಳಲ್ಲಿ ಹೃದಯ ಸಮಸ್ಯೆ ಕಾಣಿಸಿಕೊಳ್ಳಲು ಜನ್ಮಜಾತ ಕಾಯಿಲೆ ಕೌಟುಂಬಿಕ ಇತಿಹಾಸ ಪ್ರಮುಖ ಕಾರಣ. ನಿಯಮಿತ ತಪಾಸಣೆಯಿಂದ ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಿವೆ
ಡಾ.ಬಿ. ದಿನೇಶ್ ನಿರ್ದೇಶಕ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.