ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕತ್ವ ಬದಲಿಸಲು ಆಲೋಚನೆ: ಸರ್ಕಾರ ಉಳಿಸಲು ‘ಕೈ’ ಮುಖಂಡರ ಕಸರತ್ತು

ಇಡೀ ದಿನ ಸಭೆ ನಡೆಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಸಿದ್ದರಾಮಯ್ಯ
Last Updated 8 ಜುಲೈ 2019, 2:08 IST
ಅಕ್ಷರ ಗಾತ್ರ

ಬೆಂಗಳೂರು: ‘ಮೈತ್ರಿ’ ಸರ್ಕಾರ ಉಳಿಸಿಕೊಳ್ಳುವ ಎಲ್ಲ ಪ್ರಯತ್ನವನ್ನು ಮುಂದುವರಿಸುವುದು. ಇದು ಸಾಧ್ಯವಾಗದಿದ್ದರೆ ನಾಯಕತ್ವ ಬದಲಿಸಿ ಹೊಸದಾಗಿ ಮೈತ್ರಿ ಸರ್ಕಾರ ರಚಿಸುವ ಬಗ್ಗೆ ಕಾಂಗ್ರೆಸ್ ಮುಖಂಡರು ಒಲವು ತೋರಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆಯಿಂದ ವಿಂಡ್ಸರ್ ಮ್ಯಾನರ್ ಹೋಟೆಲ್‌ನಲ್ಲಿ ಸಂಜೆ ವರೆಗೂ ಸತತವಾಗಿ ಸಭೆ ನಡೆಯಿತು. ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಮುಖಂಡರು, ಶಾಸಕರಿಂದ ಅಭಿಪ್ರಾಯ ಪಡೆದುಕೊಂಡರು.

ಸರ್ಕಾರ ಉಳಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆಸುವಂತೆ ವರಿಷ್ಠ ರಾಹುಲ್ ಗಾಂಧಿ ಸೂಚಿಸಿದ್ದು, ಆ ಸಾಧ್ಯತೆಗಳ ಬಗ್ಗೆಯೇ ಚರ್ಚೆಗಳು ನಡೆದಿವೆ.ಜಿ.ಪರಮೇಶ್ವರ, ಕೆ.ಜೆ.ಜಾರ್ಜ್, ಆರ್.ವಿ.ದೇಶಪಾಂಡೆ ಕೃಷ್ಣ ಬೈರೇಗೌಡಇತರಹಿರಿಯ ಸಚಿವರಿಂದ ರಾಜೀನಾಮೆ ಕೊಡಿಸಿ, ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡಿ ಸರ್ಕಾರ ಕಾಪಾಡುವ ಬಗ್ಗೆ ಒಲವು ವ್ಯಕ್ತವಾಗಿದೆ ಎನ್ನಲಾಗಿದೆ.

ರಾಜೀನಾಮೆ ನೀಡಿರುವ ಶಾಸಕರು ಈ ಹಂತದಲ್ಲಿ ವಾಪಸ್ ಬರುವುದು ಕಷ್ಟಕರ. ಅತೃಪ್ತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳೇ ಕಾಣುತ್ತಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ಉಳಿಸಿಕೊಳ್ಳಲೇಬೇಕು ಎನ್ನುವುದಾದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವುದು. ಅದು ಸಾಧ್ಯವಾಗದಿದ್ದರೆ ಸರ್ಕಾರ ರಚಿಸಲು ಬಿಜೆಪಿಗೆ ಅವಕಾಶ ನೀಡಿ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

ಇದೇ ಸಮಯದಲ್ಲಿ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಮನವೊಲಿಸುವ ಪ್ರಯತ್ನವೂ ನಡೆಯಿತು. ಆರ್.ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸುವ ಪ್ರಯತ್ನ ಮುಂದುವರಿದಿದೆ. ‘ಈಗಾಗಲೇ ರಾಜೀನಾಮೆ ಸಲ್ಲಿಸಿದ್ದು, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಕಡ್ಡಿ ತುಂಡು ಮಾಡಿದಂತೆ ರೆಡ್ಡಿ ಹೇಳಿದ್ದಾರೆ. ಮತ್ತೊಬ್ಬ ಶಾಸಕ ಮುನಿರತ್ನ ಸಂಪರ್ಕಕ್ಕೆ ಸಿಕ್ಕರೂ ಹೆಚ್ಚು ಮಾತನಾಡಿಲ್ಲ. ರಾತ್ರಿ ಮಾತನಾಡುವುದಾಗಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ. ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್ ಸಂಪರ್ಕಕ್ಕೆ ಸಿಗಲಿಲ್ಲ ಎನ್ನಲಾಗಿದೆ.

ಈ ಸಭೆಯ ನಂತರ ನಾಲ್ವರು ನಾಯಕರು ಮತ್ತೊಂದು ಸಭೆ ನಡೆಸಿದ್ದು, ಆ ಸಮಯದಲ್ಲೂ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಯಿತು ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆ ಹಾಗೂ ಪ್ರಮುಖರ ಸಭೆಯ ನಂತರ 7 ಗಂಟೆ ಸಮಾರಿಗೆ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರು ಖರ್ಗೆ ಅವರನ್ನು ಭೇಟಿಮಾಡಿ ಚರ್ಚಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಅಸಮಾಧಾನ: ತಮ್ಮ ಬೆಂಬಲಿಗರು ರಾಜೀನಾಮೆ ನೀಡುತ್ತಿದ್ದರೂ ತಡೆಯುವ ಪ್ರಯತ್ನ ಮಾಡದಿರುವ ಬಗ್ಗೆ ಸಿದ್ದರಾಮಯ್ಯ ಅವರಿಂದ ಹೈಕಮಾಂಡ್ ವಿವರಣೆ ಪಡೆದುಕೊಂಡಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಮಾಜಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ದೂರವಾಣಿ ಮೂಲಕ ಚರ್ಚಿಸಿದ್ದಾರೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಅಹಮದ್ ಪಟೇಲ್, ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

‘ಕಾಂಗ್ರೆಸ್ ಶಾಸಕರನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪೂರ್ಣ ನಿರ್ಲಕ್ಷ್ಯಿಸಿದ್ದು, ಗ್ರಾಮ ವಾಸ್ತವ್ಯದಂತಹ ಪ್ರಮುಖ ಸಂದರ್ಭಗಳಲ್ಲೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹಾಗಾಗಿ ಅತೃಪ್ತಿಯಿಂದ ರಾಜೀನಾಮೆ ನೀಡುತ್ತಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿದೆ’ ಎಂದು ಸಿದ್ದರಾಮಯ್ಯ ಸಮಜಾಯಿಷಿ ನೀಡಿದ್ದಾರೆ.

ಮುನ್ನೆಲೆಗೆ ಬಂದ ಖರ್ಗೆ
‘ಮೈತ್ರಿ’ ಸರ್ಕಾರದ ‘ದಾಳ’ ಹಿಡಿದು ಮುನ್ನಡೆಸಿದ್ದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಶಾಸಕರ ರಾಜೀನಾಮೆಯಂತಹ ರಾಜಕೀಯ ಬೆಳವಣಿಗೆ ನಂತರ ಹಿನ್ನೆಲೆಗೆ ಸರಿದಂತೆ ಕಾಣುತ್ತಿದ್ದು, ರಾಜ್ಯ ರಾಜಕಾರಣದಿಂದ ದಶಕದಿಂದ ದೂರವೇ ಉಳಿದಿದ್ದ ಮಲ್ಲಿಕಾರ್ಜುನ ಖರ್ಗೆ ಮುನ್ನೆಲೆಗೆ ಬಂದಿದ್ದಾರೆ.

ಪಕ್ಷದ ಹೈಕಮಾಂಡ್ ಜತೆಗೆ ಖರ್ಗೆ ಚರ್ಚಿಸಿದ ನಂತರರಾಜ್ಯ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಭಾನುವಾರ ಮೈತ್ರಿ ಸರ್ಕಾರದ ರಕ್ಷಣೆ ಸಂಬಂಧ ಕಾಂಗ್ರೆಸ್ ಮುಖಂಡರ ಜತೆಗೆ ಮಾತುಕತೆ ನಡೆಸಿದ್ದಾರೆ. ಸರ್ಕಾರ ಉಳಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.

ಈವರೆಗೆ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಗೊಂದಲ ಮೂಡಿಸಿದ ಸಮಯದಲ್ಲಿ ಅವರನ್ನು ಸಮರ್ಥನೆ ಮಾಡಿಕೊಂಡು ಬಂದಿದ್ದರು. ಈಗ ಬೆಂಬಲಿಗರೇ ರಾಜೀನಾಮೆ ನೀಡಿರುವುದು ಪಕ್ಷದಲ್ಲಿ ಅವರ ಹಿನ್ನಡೆಗೆ ಕಾರಣವಾಗಿದೆ. ಸಿದ್ದರಾಮಯ್ಯ ಮೇಲೆ ಹೈಕಮಾಂಡ್‌ಗೆ ಮೊದಲಿನಷ್ಟು ವಿಶ್ವಾಸ ಇಲ್ಲವಾಗಿದೆ.

ರಾಜ್ಯದಲ್ಲಿನ ರಾಜಕೀಯ ಗೊಂದಲ, ಶಾಸಕರ ರಾಜೀನಾಮೆಗೆ ಸಿದ್ದರಾಮಯ್ಯ ಕಾರಣ ಎಂದು ಹೇಳಲಾಗುತ್ತಿದೆ. ಹಾಗಾಗಿ ಖರ್ಗೆ ಅವರನ್ನು ಮುನ್ನೆಲೆಗೆ ತರಲಾಗಿದೆಎಂದು ಹೇಳಲಾಗುತ್ತಿದೆ. ಆದರೆ ಖರ್ಗೆ ಅವರು ಮುಖ್ಯಮಂತ್ರಿ ಸ್ಥಾನಕ್ಕಿಂತ ಎಐಸಿಸಿ ಅಧ್ಯಕ್ಷ ಸ್ಥಾನದತ್ತ ಒಲವು ತೋರಿಸಿದ್ದಾರೆ ಎನ್ನಲಾಗಿದೆ.

ತಮಿಳುನಾಡು ಮಾದರಿ ಪ್ರಯೋಗ
ರಾಜೀನಾಮೆ ನೀಡಿರುವ ಕಾಂಗ್ರೆಸ್, ಜೆಡಿಎಸ್ ಶಾಸಕರು ಮತ್ತೆ ಪಕ್ಷಕ್ಕೆ ಬರಲು ಒಪ್ಪದಿದ್ದರೆ ‘ತಮಿಳುನಾಡು ಮಾದರಿ’ ಪ್ರಯೋಗಿಸುವ ಚಿಂತನೆ ಮೈತ್ರಿ ಪಕ್ಷದ ಒಳಗೆ ನಡೆದಿದೆ.

ತಮಿಳುನಾಡಿನಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಆಡಳಿತಾರೂಢ ಪಕ್ಷದ ಎಐಎಡಿಎಂಕೆ ಮುಖಂಡ ಟಿಟಿವಿ ದಿನಕರನ್ ಹಾಗೂ ಅವರ 18 ಮಂದಿ ಬೆಂಬಲಿಗರು ಸಾಮೂಹಿಕ ರಾಜೀನಾಮೆ ನೀಡಿದ್ದರು. ಆಗ ಬಹುಮತದ ಕೊರತೆ ಎದುರಾಗಿದ್ದು, ಸಭಾಧ್ಯಕ್ಷರು ರಾಜೀನಾಮೆ ಅಂಗೀಕರಿಸುವ ಬದಲು ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಶಾಸಕ ಸ್ಥಾನವನ್ನೇ ರದ್ದು ಮಾಡಿದ್ದರು.

ಈ ಪ್ರಯೋಗ ರಾಜ್ಯದಲ್ಲೂ ಸಾಧ್ಯವೆ, ಇದಕ್ಕೆ ವಿಧಾನಸಭಾಧ್ಯಕ್ಷರು ಒಪ್ಪಿಕೊಳ್ಳುವರೆ ಎಂಬ ಚರ್ಚೆ ನಡೆದಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT