ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಯೋಜನೆ ಸ್ಥಗಿತ ಆಗದು: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ

Published 9 ಫೆಬ್ರುವರಿ 2024, 13:27 IST
Last Updated 9 ಫೆಬ್ರುವರಿ 2024, 13:27 IST
ಅಕ್ಷರ ಗಾತ್ರ

ಹೊಸದುರ್ಗ: ಎಲ್ಲ ಜಾತಿ, ಧರ್ಮದ ಬಡವರ ಏಳಿಗೆಗೆ ರೂಪಿಸಿದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ. ವದಂತಿಗಳಿಗೆ ಜನರು ಕಿವಿಗೊಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ತಾಲ್ಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ ಪಟ್ಟಾಭಿಷೇಕದ ರಜತ ಮಹೋತ್ಸವ ಸಮಾರಂಭದಲ್ಲಿ ‘ಭಗೀರಥಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಗ್ಯಾರಂಟಿ ಯೋಜನೆಗಳನ್ನು ಕೆಲವರು ಉದ್ದೇಶಪೂರ್ವಕವಾಗಿ ಅವಹೇಳನ ಮಾಡುತ್ತಿದ್ದಾರೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಹಾಗೂ ಮಧ್ಯದಲ್ಲಿಯೇ ಸ್ಥಗಿತಗೊಳಿಸಲಾಗುತ್ತದೆ ಎಂಬ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಗ್ಯಾರಂಟಿಗಳಿಂದ ಸರ್ಕಾರದ ಖಜಾನೆಗೆ ಧಕ್ಕೆ ಇಲ್ಲ. ಜನರ ದಾರಿ ತಪ್ಪಿಸುವ ಕೆಲಸವನ್ನು ಕೈಬಿಡಿ’ ಎಂದು ಕಿಡಿಕಾರಿದರು.

‘ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಪ್ರವೇಶಿಸಿದ ದೇಗುಲವನ್ನು ತೊಳೆದ ವಿಚಾರ ಬೇಸರ ಮೂಡಿಸಿದೆ. ಸಂವಿಧಾನ ಅನುಷ್ಠಾನಕ್ಕೆ ಬಂದು ಇಷ್ಟು ವರ್ಷ ಕಳೆದರೂ ರಾಜ್ಯದಲ್ಲಿ ಇಂತಹ ಸ್ಥಿತಿ ಇರುವುದು ವಿಪರ್ಯಾಸ. ಪ್ರವೇಶ ಇಲ್ಲದೇ ಇರುವ ದೇಗುಲಕ್ಕೆ ಹೋಗದಂತೆ ನಾರಾಯಣಗುರು ಹೇಳಿದ್ದಾರೆ. ನೀವೇ ದೇಗುಲ ಕಟ್ಟಿಕೊಂಡು ಪೂಜಾರಿಗಳಾಗಿ. ದೇವರ ಪೂಜೆ ಮಾಡಲು ಮೇಲಿಂದ ಬರಬೇಕಿಲ್ಲ’ ಎಂದು ಹೇಳಿದರು.

‘ಪಿತೃವಾಕ್ಯ ಪರಿಪಾಲನೆ ಮಾಡಿದರು ಎಂಬ ಕಾರಣಕ್ಕೆ ಶ್ರೀರಾಮನನ್ನು ಗೌರವಿಸಿದ್ದೇವೆ. ಶ್ರೀರಾಮನ ಆಳ್ವಿಕೆಯಲ್ಲಿ ರಾಮರಾಜ್ಯ ನಿರ್ಮಾಣವಾಗಿತ್ತು ಎಂಬ ಕಾರಣಕ್ಕೆ ಪೂಜೆಗೆ ಅರ್ಹರು. ರಾಮಾಯಣವನ್ನು ನಾನೂ ಓದಿದ್ದೇನೆ. ನಾವು ಶ್ರೀರಾಮನ ಭಕ್ತರಲ್ಲವೇ’ ಎಂದು ಪ್ರಶ್ನಿಸಿದರು.

‘ಭಗೀರಥಶ್ರೀ’ ಪ್ರಶಸ್ತಿಯೊಂದಿಗೆ ನೀಡಿದ ₹ 1 ಲಕ್ಷ ನಗದನ್ನು ಮಠದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮರಳಿಸುವುದಾಗಿ ಘೋಷಣೆ ಮಾಡಿದರು.

ಸಾಲುಮರದ ತಿಮ್ಮಕ್ಕ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್‌.ರವೀಂದ್ರನಾಥ್‌, ಚಲನಚಿತ್ರ ನಿರ್ದೇಶಕ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು, ಸೈಕ್ಲಿಂಗ್‌ ಕ್ರೀಡಾಪಟು ಸವಿತಾ ಮಹತೋ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌.ದ್ವಾರಕನಾಥ್‌, ಉದ್ಯಮಿ ಕುಂಸಿ ಚಂದ್ರಪ್ಪ, ನಿವೃತ್ತ ಅಧಿಕಾರಿ ವಿಜಯಕುಮಾರ್‌ ತೋರಗಲ್‌, ಅವರಿಗೆ ‘ಭಗೀರಥ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉಪ್ಪಾರ ಸಮುದಾಯದ ಮೀಸಲಾತಿಗೆ ಸಂಬಂಧಿಸಿದ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ಸ್ವೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು.
ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT