ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮೂವರು ಡಿಸಿಎಂ: ಪಕ್ಷಕ್ಕೆ ಅನುಕೂಲ ಆಗುವುದಾದರೆ ಹೈಕಮಾಂಡ್ ಕ್ರಮ– ವೆಂಕಟೇಶ್

Published 22 ಸೆಪ್ಟೆಂಬರ್ 2023, 6:45 IST
Last Updated 22 ಸೆಪ್ಟೆಂಬರ್ 2023, 6:45 IST
ಅಕ್ಷರ ಗಾತ್ರ

ಮೈಸೂರು: 'ಪಕ್ಷಕ್ಕೆ ರಾಜಕೀಯವಾಗಿ ಸೇರಿದಂತೆ ವಿವಿಧ ರೀತಿಯಲ್ಲಿ ಅನುಕೂಲ ಆಗುವುದಾದರೆ ಹೈಕಮಾಂಡ್‌ ಮತ್ತೆ ಮೂವರು ಡಿಸಿಎಂಗಳನ್ನು ಮಾಡುತ್ತದೆ’ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್‌ ಹೇಳಿದರು.

ಇಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ‍ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಮತ್ತೆ ಮೂವರನ್ನು ಉಪ ಮುಖ್ಯಮಂತ್ರಿ ಮಾಡಬೇಕು ಎಂಬ ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಯಾವ ದೃಷ್ಟಿಯಲ್ಲಿ ಹೇಳಿದ್ದಾರೆಯೋ ಗೊತ್ತಿಲ್ಲ’ ಎಂದರು.

‘ಎಲ್ಲರಿಗೂ ಆಸೆ ಇರುತ್ತದೆ. ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿಯೂ ಆಗಿರುವ ಡಿ.ಕೆ. ಶಿವಕುಮಾರ್‌ ಅವರಿಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ. ಕೇಳುವುದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

‘ಬಿಜೆಪಿ–ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುತ್ತಿರುವುದು ನಿರೀಕ್ಷಿತವೇ. ಆ ಎರಡು ಪಕ್ಷಗಳಿಗೂ ಹೊಂದಾಣಿಕೆ ಅನಿವಾರ್ಯವಾಗಿದೆ. ಹಿಂದಿನಿಂದಲೂ ಅದನ್ನು ಮಾಡಿಕೊಂಡೇ ಬಂದಿದ್ದಾರೆ. ಈಗ ಬಹಿರಂಗವಾಗಿ ಮಾಡಿಕೊಳ್ಳುತ್ತಿದ್ದಾರಷ್ಟೆ. ಇದರಿಂದ ಕಾಂಗ್ರೆಸ್‌ಗೆ ವ್ಯತಿರಿಕ್ತ ಪರಿಣಾಮವೇನೂ ಉಂಟಾಗುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಕಾವೇರಿ ನದಿ ನೀರಿನ ವಿಷಯದಲ್ಲಿ ಸರ್ಕಾರ ಸಮರ್ಥವಾಗಿ ವಾದ ಮಂಡಿಸಲಿಲ್ಲ ಎಂಬ ವಿರೋಧಪಕ್ಷಗಳ ಹೇಳಿಕೆಯನ್ನು ಒಪ್ಪುವುದಿಲ್ಲ. ಕಾವೇರಿ ನೀರು ನಿಯಂತ್ರಣ ಸಮಿತಿಯವರು ಕಾವೇರಿ ಕೊಳ್ಳಕ್ಕೆ ಭೇಟಿ ನೀಡಿ ವಾಸ್ತವಾಂಶವನ್ನು ಪರಿಶೀಲನೆ ನಡೆಸಬೇಕಿತ್ತು. ಅದನ್ನು ಆಧರಿಸಿ ಆದೇಶ ನೀಡಬೇಕಿತ್ತು. ಅದರ ಬದಲಿಗೆ ಅಲ್ಲೇ ಕುಳಿತು ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಆದೇಶ ನೀಡುತ್ತಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಂಕಷ್ಟ ಸೂತ್ರ ರಚಿಸುವ ಕೆಲಸವನ್ನು ಕೇಂದ್ರ ಮಾಡಬೇಕು. ಮಳೆ ಇಲ್ಲದಾಗ ಏನು ಮಾಡಬೇಕು ಎಂಬುದು ಎರಡು ರಾಜ್ಯಗಳಿಗೂ ಗೊತ್ತಿಲ್ಲ. ಹೀಗಾಗಿ, ಸಂಕಷ್ಟ ಸೂತ್ರ ರಚಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ತಮಿಳುನಾಡಿಗೆ ನೀರು ಹರಿಸಿದ ಮೇಲೆ ನಮ್ಮನ್ನು ಸಭೆಗೆ ಕರೆದಿದ್ದೀರಿ ಎಂದು ಈಗ ಹಗುರವಾಗಿ ಮಾತನಾಡುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ರಾಜ್ಯದ ಬಗ್ಗೆ ಅಷ್ಟು ಕಾಳಜಿ ಇದ್ದಿದ್ದರೆ ಬನ್ನಿ ಚರ್ಚಿಸೋಣ ಎಂದು ಹಿಂದೆಯೇ ಕರೆಯಬೇಕಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT