ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಕರ್ನಾಟಕದಲ್ಲಿ 20 ಸ್ಥಾನ ಗೆಲುವಿಗೆ ‘ಕೈ’ ಸೂಕ್ಷ್ಮ ತಂತ್ರ

ರಾಜ್ಯದ ಸಚಿವರಿಗೆ ಹೈಕಮಾಂಡ್‌ ಗುರಿ ನಿಗದಿ
Published 11 ಜನವರಿ 2024, 16:56 IST
Last Updated 11 ಜನವರಿ 2024, 16:56 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ಪಕ್ಷದ ಸಂಭಾವ್ಯ ಅಭ್ಯರ್ಥಿಗಳು ಅಲ್ಲದೆ, ಇತರ ಎಲ್ಲ ಪಕ್ಷಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಕೂಡಲೇ ಸಿದ್ಧಪಡಿಸಬೇಕು. ಅವರ ಸಾಮರ್ಥ್ಯ ಹಾಗೂ ದೌರ್ಬಲ್ಯಗಳೇನು ಎಂಬುದನ್ನು ಅಧ್ಯಯನ ನಡೆಸಿ ಪಕ್ಷದ ಚುನಾವಣಾ ವೀಕ್ಷಕರಿಗೆ ಶೀಘ್ರ ವರದಿ ಸಲ್ಲಿಸಬೇಕು ಎಂದು ಚುನಾವಣಾ ಸಂಯೋಜಕರಿಗೆ ಹೈಕಮಾಂಡ್‌ ಕಟ್ಟಪ್ಪಣೆ ಮಾಡಿದೆ.

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ, ಲಕ್ಷದ್ವೀಪ ಹಾಗೂ ಪುದುಚೆರಿಯ ಲೋಕಸಭಾ ಚುನಾವಣಾ ಸಂಯೋಜಕರೊಂದಿಗೆ ಗುರುವಾರ ಇಲ್ಲಿ ಸಭೆ ನಡೆಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ’ಪ್ರತಿ ಕ್ಷೇತ್ರದಲ್ಲಿ ಗರಿಷ್ಠ ಸಂಖ್ಯೆಯ ಮತದಾರರನ್ನು ತಲುಪಲು ಕಾರ್ಯೋನ್ಮುಖರಾಗಬೇಕು’ ಎಂದು ತಾಕೀತು ಮಾಡಿದರು. ಈ ಸಭೆಯಲ್ಲಿ ಕರ್ನಾಟಕದ ಬಹುತೇಕ ಸಚಿವರು ಭಾಗಿಯಾದರು. 

‘ಕರ್ನಾಟಕದಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಬೇಕು. ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವುದು ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ. ಇಲ್ಲದಿದ್ದರೆ ಅವರನ್ನು ಹೊಣೆಗಾರರನ್ನು ಮಾಡಲಾಗುವುದು’ ಎಂದು ಖರ್ಗೆ ಎಚ್ಚರಿಸಿದರು.

‘ಪ್ರತಿಯೊಂದು ಕ್ಷೇತ್ರದಲ್ಲಿ ಹಲವು ಮಂದಿ ಆಕಾಂಕ್ಷಿಗಳು ಇರುತ್ತಾರೆ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌ ಕೊಡಲು ಸಾಧ್ಯ. ಟಿಕೆಟ್‌ ಸಿಗದ ಕಾರಣಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸುವುದು ಸಹಜ. ಅಂತಹ ನಾಯಕರನ್ನು ಚುನಾವಣಾ ವೀಕ್ಷಕರು ವಿಶ್ವಾಸಕ್ಕೆ ತೆಗೆದುಕೊಂಡು ಬಂಡೇಳದಂತೆ ನೋಡಿಕೊಳ್ಳಬೇಕು’ ಎಂದೂ ಅವರು ಸೂಚಿಸಿದರು. 

ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸಲು ಚುನಾವಣಾ ಸಂಯೋಜಕರು ಮೂರು ವರದಿಗಳನ್ನು ಸಲ್ಲಿಸಬೇಕು ಎಂದೂ ಹೈಕಮಾಂಡ್‌ ಹೇಳಿದೆ. ಸಂಘಟನೆಯ ವರದಿಯನ್ನು ಫೆಬ್ರುವರಿ ಮೊದಲ ವಾರದಲ್ಲಿ, ಬ್ಲಾಕ್‌ ಹಂತದ ವರದಿಯನ್ನು ಎರಡನೇ ವಾರದಲ್ಲಿ ಹಾಗೂ ವಿಧಾನಸಭಾ ಕ್ಷೇತ್ರ ವರದಿಯನ್ನು ಮೂರನೇ ವಾರದಲ್ಲಿ ಸಲ್ಲಿಸಬೇಕು ಎಂದು ತಿಳಿಸಿದೆ. 

‘ಈ ಹಿಂದಿನ ಲೋಕಸಭಾ, ವಿಧಾನಸಭಾ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮತ ಪ್ರಮಾಣದ ಅಧ್ಯಯನ ನಡೆಸಬೇಕು. ಹಳ್ಳಿಗಳ ಮತ ಪ್ರಮಾಣದ ಕುರಿತು ನಿಗಾ ವಹಿಸಬೇಕು. ಯಾವ ಪ್ರದೇಶಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂಬುದನ್ನು ಗಮನಿಸಿ ಮತ ಪ್ರಮಾಣ ಹೆಚ್ಚಿಸಲು ಕಾರ್ಯತಂತ್ರ ರೂಪಿಸಬೇಕು. ಕಳೆದ ಕೆಲವು ಚುನಾವಣೆಯಲ್ಲಿ ಕಠಿಣ ಪರಿಶ್ರಮ ವಹಿಸಿ ಹೆಚ್ಚು ಮತಗಳನ್ನು ತಂದುಕೊಟ್ಟ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಪಕ್ಷದ ಸಂಘಟನೆಯಲ್ಲಿ ಸ್ಥಾನ ನೀಡಬೇಕು. ಈ ಕೆಲಸವನ್ನು ಜರೂರಾಗಿ ಮಾಡಬೇಕು’ ಎಂದೂ ಹೈಕಮಾಂಡ್‌ ನಿರ್ದೇಶನ ನೀಡಿದೆ.

ಪಕ್ಷದ ಕೆಲವೊಂದು ನಾಯಕರು ತಳಮಟ್ಟದ ಕಾರ್ಯಕರ್ತರೊಂದಿಗೆ ಬೆರೆಯುವುದಿಲ್ಲ ಎಂಬ ಆರೋಪಗಳಿವೆ. ಇತ್ತೀಚಿನ ದಿನಗಳಲ್ಲಿ ಪಕ್ಷದ ಹಿನ್ನಡೆಗೆ ಇದೂ ಒಂದು ಕಾರಣ. ಬೂತ್‌ ಮಟ್ಟದಲ್ಲೇ ಚುನಾವಣಾ ಸಿದ್ಧತೆಗಳನ್ನು ಆರಂಭಿಸಬೇಕು. ಬಿಜೆಪಿ ಮಾದರಿಯಲ್ಲೇ ಸೂಕ್ಷ್ಮ ನಿರ್ವಹಣೆ ಆಗಬೇಕು. ಪಕ್ಷ ಸಂಘಟನೆ ಹಾಗೂ ಚುನಾವಣಾ ಸಿದ್ಧತೆ ಕುರಿತು ತಳಮಟ್ಟದಿಂದ ಪ್ರತಿ ವಾರ ಪಡೆಯಬೇಕು. ಈ ವರದಿಗಳನ್ನು ವಾರ್ ರೂಮ್‌ ವಿಶ್ಲೇಷಣೆ ನಡೆಸಬೇಕು. ಇದರಿಂದ ಅಭ್ಯರ್ಥಿ ಸುಲಭದಲ್ಲಿ ಕ್ಷೇತ್ರವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜತೆಗೆ, ಸಂಘಟನೆ ದುರ್ಬಲವಾಗಿರುವ ಪ್ರದೇಶಗಳಿಗೆ ಹೆಚ್ಚಿನ ಗಮನ ಹರಿಸಬಹುದು. ಸಂಯೋಜಕರು ಮುಂದಿನ ನಾಲ್ಕೈದು ತಿಂಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು’ ಎಂದು ತಾಕೀತು ಮಾಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT