ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಆತಂಕ: ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ಸಭೆ ಇಂದು

Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಹೊಸ ತಳಿ ಜೆಎನ್‌. 1 ಸೋಂಕು ವೇಗವಾಗಿ ಹರಡುತ್ತಿದ್ದರೂ ಅದು ಅಪಾಯಕಾರಿ ಅಲ್ಲ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಕೋವಿಡ್‌ ಹೊಸ ತಳಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಅವರು ಬುಧವಾರ ನಡೆಸಿದ ವರ್ಚುವಲ್‌ ಸಭೆಯ ಬಳಿಕ ದಿನೇಶ್ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಕಳೆದ 24 ಗಂಟೆಗಳ ಅವಧಿಯಲ್ಲಿ 1,020 ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಾಗಿದೆ. ಇದು ದೇಶದಲ್ಲೇ ಅತ್ಯಧಿಕ ಸಂಖ್ಯೆಯ ಪರೀಕ್ಷೆ ಎಂದರು.

ಶನಿವಾರದ ವೇಳೆಗೆ ಪರೀಕ್ಷೆ ಸಂಖ್ಯೆಯನ್ನು 5,000 ಕ್ಕೆ ಹೆಚ್ಚಿಸಬೇಕು ಎಂಬ ಗುರಿ ನಿಗದಿ ಮಾಡಲಾಗಿದೆ. ಕನಿಷ್ಠ 50 ಮಾದರಿಗಳನ್ನು ಸಂಗ್ರಹಿಸಿದರೆ ಜೀನೋಮ್‌ ಸೀಕ್ವೆನ್ಸಿಂಗ್‌ಗೆ ಅನುಕೂಲವಾಗುತ್ತದೆ. ವಿಶ್ವದ 36 ರಾಷ್ಟ್ರಗಳು ಮತ್ತು ದೇಶದ ಮೂರು ರಾಜ್ಯಗಳಲ್ಲಿ ಸೋಂಕು ತ್ವರಿತಗತಿಯಲ್ಲಿ ಹರಡುತ್ತಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಆರ್‌ಟಿಪಿಸಿಆರ್‌, ಪಿಪಿಪಿ ಮತ್ತಿತರ ಪರಿಕರಗಳು ಮತ್ತು ಔಷಧಗಳು ಒಂದು ತಿಂಗಳಿಗೆ ಹಾಗೂ ಮೂರು ತಿಂಗಳಿಗೆ ಎಷ್ಟು ಬೇಕಾಗಬಹುದು ಎಂಬುದರ ಪ್ರತ್ಯೇಕ ಯೋಜನೆ ತಯಾರಿಸಲಾಗುತ್ತಿದೆ. ಸದ್ಯಕ್ಕೆ ಇವುಗಳ ದಾಸ್ತಾನು ಇದ್ದು, ಕೊರತೆ ಇಲ್ಲ ಎಂದರು.

‘ಪಿಎಂ ಕೇರ್‌ ಅಡಿ ಪೂರೈಸಿದ ವೆಂಟಿಲೇಟರ್‌ಗಳ ನಿರ್ವಹಣಾ ವೆಚ್ಚದು ಬಾರಿ ಇದ್ದು, ಕಡಿಮೆ ಮಾಡುವಂತೆ ಕೋರಿದ್ದೇವೆ.  ಐಸಿಎಂಆರ್‌ ಪೋರ್ಟಲ್‌ನಲ್ಲಿ ಕೋವಿಡ್‌ ದತ್ತಾಂಶಗಳು ಸರಿಯಾಗಿ ಅಪ್‌ಡೇಟ್‌ ಆಗುತ್ತಿಲ್ಲ ಎಂಬುದನ್ನು ಕೇಂದ್ರ ಸಚಿವರ ಗಮನಕ್ಕೆ ತಂದಾಗ ಅವರು ಸ್ಪಂದಿಸಿದರು. ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ’ ಎಂದು ದಿನೇಶ್‌ ಹೇಳಿದರು.

ಮುಖ್ಯಮಂತ್ರಿ ಜತೆ ಗುರುವಾರ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೋವಿಡ್‌ಗೆ ಸಂಬಂಧಿಸಿದ ಎಲ್ಲಾ ವಿಷಯಗಳು ಸಮಗ್ರವಾಗಿ ಚರ್ಚೆ ಆಗಲಿದೆ ಎಂದು ಅವರು ಹೇಳಿದರು.

92 ಸಕ್ರಿಯ ಪ್ರಕರಣಗಳು

ರಾಜ್ಯದಲ್ಲಿ ಬುಧವಾರ 20 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. 

ಕೊರೊನಾ ಸೋಂಕಿತರಲ್ಲಿ ಇಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ. ಎರಡೂ ಮರಣ ಪ್ರಕರಣಗಳು ಬೆಂಗಳೂರಿನಲ್ಲಿಯೇ ವರದಿಯಾಗಿದೆ. ಹೃದಯ ಸಂಬಂಧಿ ಸಮಸ್ಯೆ ಹೊಂದಿದ್ದ 44 ವರ್ಷದ ಪುರುಷ ನ.23ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಡಿ.16ರಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ ಹೊಂದಿದ್ದ 76 ವರ್ಷದ ಹಿರಿಯರೊಬ್ಬರು, ಸೆ.12ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಡಿ.17ರಂದು ಮೃತಪಟ್ಟಿದ್ದಾರೆ. ಕೋವಿಡ್ ಪರೀಕ್ಷೆಯಲ್ಲಿ ಇವರು ಸೋಂಕಿತರಾಗಿದ್ದರು ಎನ್ನುವುದು ದೃಢಪಟ್ಟಿದ್ದು, ಇಬ್ಬರೂ ಕೋವಿಡ್ ಲಸಿಕೆ ಪಡೆದವರಾಗಿದ್ದಾರೆ. 

24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 808 ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಸೋಂಕು ದೃಢ ಪ್ರಮಾಣ ಶೇ 2.47ರಷ್ಟು ವರದಿಯಾಗಿದೆ. ಬೆಂಗಳೂರಿನಲ್ಲಿ 359 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 19 ಮಂದಿಗೆ ಸೋಂಕು ದೃಢಪಟ್ಟಿದೆ. ಬಳ್ಳಾರಿಯಲ್ಲಿ ಎರಡು ಹಾಗೂ ದಕ್ಷಿಣ ಕನ್ನಡದಲ್ಲಿ ಒಂದು ಪ್ರಕರಣ ವರದಿಯಾಗಿದೆ.  ಸೋಂಕಿತರಲ್ಲಿ 72 ಮಂದಿ ಮನೆ ಆರೈಕೆಗೆ ಒಳಗಾದರೆ, 20 ಮಂದಿಗೆ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಏಳು ಮಂದಿ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ. ಸೋಂಕಿತರಲ್ಲಿ 5 ಮಂದಿ ಬುಧವಾರ ಚೇತರಿಸಿಕೊಂಡಿದ್ದಾರೆ.

ಒಂದು ಸಾವು

64 ವರ್ಷ ವಯಸ್ಸಿನ ಪುರುಷರೊಬ್ಬರು ಕೋವಿಡ್‌ ನಿಂದ ಮೃತಪಟ್ಟಿದ್ದು, ಇವರು ಹೃದಯ, ಶ್ವಾಸಕೋಶ, ಅಧಿಕ ರಕ್ತದೊತ್ತಡ, ಕ್ಷಯ ಸೇರಿ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಚಾಮರಾಜಪೇಟೆಯವರಾದ ಅವರ ಸಾವಿಗೆ  ಜೆಎನ್‌ 1 ತಳಿ ಕಾರಣವಲ್ಲ. ಕೋವಿಡ್‌ ಸೋಂಕು ದೃಢಪಟ್ಟಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT