ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಬಿರುಸಿನ ಹಿಂಗಾರು: ಹಲವೆಡೆ ಬೆಳೆಗೆ ತೊಂದರೆ

ನೆಲಕ್ಕೊರಗಿದ 3,724 ಹೆಕ್ಟೇರ್‌ ಭತ್ತ * ಕೂಡ್ಲಿಗಿಯಲ್ಲಿ 8 ಮನೆಗಳಿಗೆ ಹಾನಿ
Published 9 ನವೆಂಬರ್ 2023, 23:30 IST
Last Updated 9 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಕೊಪ್ಪಳ/ಹುಬ್ಬಳ್ಳಿ/ಶಿವಮೊಗ್ಗ: ರಾಜ್ಯದ ಉತ್ತರ ಒಳನಾಡು ಮತ್ತು ಮಲೆನಾಡು ಭಾಗದ ವಿವಿಧೆಡೆ ಗುರುವಾರವೂ ಉತ್ತಮ ಮಳೆಯಾಗಿದೆ. ಕೊಪ್ಪಳ, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಬಿರುಸಿನ ಮಳೆ ಸುರಿದಿದೆ. 

ಭಾರಿ ಮಳೆಗೆ ಕೊಪ್ಪಳ ಜಿಲ್ಲೆಯ 3,724 ಹೆಕ್ಟೇರ್‌ ಪ್ರದೇಶದ ಭತ್ತದ ಬೆಳೆ ಹಾಳಾಗಿದೆ. ಗಂಗಾವತಿ ತಾಲ್ಲೂಕಿನ ಜಂಗಮರ ಕಲ್ಗುಡಿ, ಹಣವಾಳ, ಹೊಸಕೇರಾ, ಢಣಾಪುರ, ಶ್ರೀರಾಮನಗರ ಭಾಗದಲ್ಲಿನ ಭತ್ತದ ಬೆಳೆಗಳು ನೆಲಕ್ಕೆ ಹಾಸಿಕೊಂಡು, ಕಟಾವಿಗೆ ಬಾರದಂತಾಗಿವೆ.

ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ತಾಲ್ಲೂಕುಗಳಲ್ಲಿ ಒಟ್ಟು 70 ಸಾವಿರ ಹೆಕ್ಟೇರ್‌ನಲ್ಲಿ ಈ ಸಲ ಭತ್ತ ಬಿತ್ತನೆ ಮಾಡಲಾಗಿದೆ. ಬಹುತೇಕ ಕಡೆ ಭತ್ತ ಈಗ ಕಟಾವಿಗೆ ಬಂದಿತ್ತು. ಜೋರು ಗಾಳಿ, ಗುಡುಗಿನ ಆರ್ಭಟದೊಂದಿಗೆ ಸುರಿದ ಮಳೆಯಿಂದಾಗಿ ಬೆಳೆ ಹಾಳಾಗಿದೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನಲ್ಲಿ ಜಹಗಿರನಂದಿಹಾಳದ ನೆಲ ಮಟ್ಟದ ಚಿಕ್ಕ ಸೇತುವೆ ಮುಳುಗಡೆಯಾಗಿದ್ದು, ಗ್ರಾಮಸ್ಥರು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಯಿತು. ಕಾಲುವೆಗೆ ತುಂಗಭದ್ರಾ ನೀರು ಬಿಡಲಾಗಿದೆ. ಇದೇ ಅವಧಿಯಲ್ಲಿ ಮಳೆ ಸುರಿದು ಕಾಲುವೆ ತುಂಬಿ ಹರಿಯುತ್ತಿದೆ.

ಶಿವಮೊಗ್ಗದಲ್ಲಿ ಧಾರಾಕಾರ ಮಳೆ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ರಂಜದಕಟ್ಟೆ ವ್ಯಾಪ್ತಿಯಲ್ಲಿ 3.3 ಸೆಂ.ಮೀ ಮಳೆ ಸುರಿದಿದೆ. ಆಗುಂಬೆ, ಮೇಗರವಳ್ಳಿ, ಕಮ್ಮರಡಿ, ಬಿದರಗೋಡು, ತೀರ್ಥಮುತ್ತೂರು, ರಾಮಕೃಷ್ಣಪುರ, ಬಸವಾನಿ, ದೇವಂಗಿ, ಕಟ್ಟೇಹಕ್ಕಲು, ಭಾರತೀಪುರ, ಕುಡುಮಲ್ಲಿಗೆ ಮಾಳೂರು, ಆರಗ, ಕೋಣಂದೂರು, ಅರಳಸುರಳಿ, ಮಂಡಗದ್ದೆ, ಕನ್ನಂಗಿ, ಹಣಗೆರೆಕಟ್ಟೆ ವ್ಯಾಪ್ತಿಯಲ್ಲೂ ಗುಡುಗು ಸಹಿತವಾಗಿ ಧಾರಾಕಾರ ಮಳೆ ಬಿದ್ದಿದೆ.

ಜಿಲ್ಲೆಯಾದ್ಯಂತ ಮೆಕ್ಕೆಜೋಳ ಹಾಗೂ ಭತ್ತದ ಬೆಳೆಯು ಕಟಾವಿನ ಹಂತದಲ್ಲಿದೆ. ಈಗ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿಕರು ಅಳಿದುಳಿದ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ, ಚಿಕ್ಕಜಾಜೂರು, ಧರ್ಮಪುರ ಸುತ್ತಮುತ್ತ ಬುಧವಾರ ರಾತ್ರಿಯಿಡೀ ಹದ ಮಳೆಯಾಗಿದೆ.

ಚಿಕ್ಕಜಾಜೂರಿನಲ್ಲಿ ಬುಧವಾರ ಮಧ್ಯಾಹ್ನದಿಂದ ಆರಂಭವಾದ ಮಳೆ ರಾತ್ರಿಯೂ ಸುರಿದಿದ್ದರಿಂದ ಸಮೀಪದ ಗೌರಿಪುರ ಗ್ರಾಮದೊಳಗೆ ನೀರು ನುಗ್ಗಿತ್ತು. ಹಳ್ಳ ಕೊಳ್ಳಗಳು ಮೈದುಂಬಿ ಹರಿದು, ಕೆರೆಗಳಿಗೆ ನೀರು ಹರಿದಿದೆ. ಅಡಿಕೆ ತೋಟಗಳಲ್ಲಿ ನೀರು ನಿಂತಿದೆ.

ಎಂಟು ಮನೆಗಳಿಗೆ ಹಾನಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಉತ್ತಮ ಮಳೆಯಾಯಿತು. ಕೂಡ್ಲಿಗಿಯಲ್ಲಿ ಮಳೆಯಿಂದ ಸುಮಾರು ಎಂಟು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಯಿತು. ಮಳೆ ಕೊರತೆಯಿಂದ ಒಣಗುತ್ತಿದ್ದ ಬೆಳೆಗಳಿಗೆ ಮಳೆ ಜೀವ ಕಳೆ ತಂದಿದೆ.

ಮೈಸೂರು ಭಾಗದಲ್ಲಿ ಜೋರು ಮಳೆ

ಮೈಸೂರು: ಕೊಡಗು, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ವಿವಿಧೆಡೆ ಗುರುವಾರ ನಸುಕಿನಲ್ಲಿ ಜೋರು ಮಳೆಯಾಗಿದೆ.

ಮೈಸೂರು ಹೊರವಲಯದ ಮೇಟಗಳ್ಳಿಯ ಬಿಎಂಶ್ರೀ ನಗರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ತೊಂದರೆ ಅನುಭವಿಸಿದರು. ನಂಜನಗೂಡು, ತಿ.ನರಸೀಪುರ, ಹುಣಸೂರು, ಪಿರಿಯಾಪಟ್ಟಣ ಹಾಗೂ ಎಚ್‌.ಡಿ.ಕೋಟೆಯಲ್ಲೂ ಜೋರು ಮಳೆಯಾಗಿದೆ.

ಕೊಡಗು ಜಿಲ್ಲೆಯ ಮಡಿಕೇರಿ ಸೇರಿದಂತೆ ವಿವಿಧೆಡೆ ಗುಡುಗು–ಸಿಡಿಲು ಸಹಿತ ಮಳೆ ಬಿದ್ದಿತು. ಚೆಂಬು ಗ್ರಾಮದ ಆಸುಪಾಸಿನಲ್ಲಿ ಬುಧವಾರ ರಾತ್ರಿಯಿಡೀ ಸುರಿದ ಮಳೆಗೆ ಸಮೀಪದ ದಬ್ಬಡ್ಕ ಸೇತುವೆಗೆ ಹಾನಿಯಾಯಿತು. ಗುರುವಾರ ಇಡೀ ದಿನ ಕಾರ್ಯಾಚರಣೆ ನಡೆಸಿದ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ಸೇತುವೆಯನ್ನು ದುರಸ್ತಿಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT