ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸಲು CWRC ಶಿಫಾರಸು

Published 11 ಅಕ್ಟೋಬರ್ 2023, 10:43 IST
Last Updated 11 ಅಕ್ಟೋಬರ್ 2023, 10:43 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಸರ್ಕಾರವು ತಮಿಳುನಾಡಿಗೆ ಅಕ್ಟೋಬರ್‌ 16ರಿಂದ 31ರ ವರೆಗೆ ಪ್ರತಿದಿನ 3 ಸಾವಿರ ಕ್ಯೂಸೆಕ್‌ ಕಾವೇರಿ ನೀರನ್ನು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಶಿಫಾರಸು ಮಾಡಿದೆ. ಸಮಿತಿಯ ಶಿಫಾರಸಿನಿಂದ ರಾಜ್ಯಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. 

ನವದೆಹಲಿಯಲ್ಲಿ ಬುಧವಾರ ನಡೆದ ಸಮಿತಿಯ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಜಲಸಂಪನ್ಮೂಲ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡರು. ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂಬ ರಾಜ್ಯದ ವಾದವನ್ನು ಸಮಿತಿ ಈ ಸಲವೂ ಒಪ್ಪಲಿಲ್ಲ. 

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಒಂದೆರಡು ದಿನಗಳಲ್ಲಿ ನಡೆಯುವ ನಿರೀಕ್ಷೆ ಇದೆ. ಅಕ್ಟೋಬರ್‌ 15ರ ವರೆಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಪ್ರಾಧಿಕಾರ ಈ ಹಿಂದೆ ಆದೇಶ ಹೊರಡಿಸಿತ್ತು. 

ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ ಸದ್ಯ 66 ಟಿಎಂಸಿ ಅಡಿಗಳಷ್ಟು ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 110 ಟಿಎಂಸಿ ಅಡಿಗಳಷ್ಟು ನೀರಿತ್ತು. ಈ ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆಯು ಶೇ 51ರಷ್ಟಿದೆ. ರಾಜ್ಯದಲ್ಲಿ ಮುಂಗಾರು ಮುಗಿದಿದ್ದು, ಹಿಂಗಾರು ಸಹ ಆಶಾದಾಯಕವಾಗಿಲ್ಲ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯಾಗಿದ್ದರೂ ಜಲಾಶಯಗಳಿಗೆ ಒಳಹರಿವಿನಲ್ಲಿ ಗಣನೀಯವಾಗಿ ಹೆಚ್ಚಳ ಆಗಿಲ್ಲ. ಹೀಗಾಗಿ, ಈಗಿನ ಸನ್ನಿವೇಶದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕದ ಅಧಿಕಾರಿಗಳು ಪ್ರತಿಪಾದಿಸಿದರು. 

ಈ ಮಾತಿಗೆ ತಮಿಳುನಾಡಿನ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ‘ನೀರು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರ ಪ್ರತಿ ಸಭೆಯಲ್ಲೂ ತಗಾದೆ ಎತ್ತುತ್ತಿದೆ. ಕಾವೇರಿ ನ್ಯಾಯಮಂಡಳಿ ಆದೇಶದ ಪ್ರಕಾರ ಕರ್ನಾಟಕವು ಈವರೆಗೆ 120 ಟಿಎಂಸಿ ಅಡಿಗಳಷ್ಟು ನೀರು ಬಿಡುಗಡೆ ಮಾಡಬೇಕಿತ್ತು. ಆದರೆ, ಬಿಡುಗಡೆ ಮಾಡಿರುವುದು 52 ಟಿಎಂಸಿ ಅಡಿಗಳಷ್ಟು ಮಾತ್ರ. ಮುಂದಿನ 15 ದಿನಗಳ ವರೆಗೆ ಕರ್ನಾಟಕವು ಪ್ರತಿದಿನ 16 ಸಾವಿರ ಕ್ಯೂಸೆಕ್ (20.75 ಟಿಎಂಸಿ ಅಡಿಗಳಷ್ಟು) ನೀರು ಬಿಡುಗಡೆ ಮಾಡಬೇಕು’ ಎಂದು ಪಟ್ಟು ಹಿಡಿದರು. ಇದಕ್ಕೆ ರಾಜ್ಯದ ಅಧಿಕಾರಿಗಳು ಒಪ್ಪಲಿಲ್ಲ. ‘ಪ್ರಾಧಿಕಾರ ಈ ಹಿಂದೆ ಆದೇಶ ಮಾಡಿದಷ್ಟು ನೀರನ್ನು ಬಿಡುಗಡೆ ಮಾಡಲಾಗಿದೆ. ಮತ್ತೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಕುಡಿಯುವ ನೀರಿಗೂ ಸಮಸ್ಯೆ ತಲೆದೋರಲಿದೆ’ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಎರಡೂ ರಾಜ್ಯಗಳ ಅಧಿಕಾರಿಗಳ ವಾದ ವಿವಾದ ಆಲಿಸಿದ ಸಮಿತಿಯು, ಬಿಳಿಗುಂಡ್ಲುವಿನಲ್ಲಿ 3 ಸಾವಿರ ಕ್ಯೂಸೆಕ್‌ ನೀರಿನ ಹರಿವನ್ನು ಖಚಿತಪಡಿಸಲು ಶಿಫಾರಸು ಮಾಡಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT