ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೈಬರ್ ವಂಚನೆ: ವಿದೇಶದಲ್ಲಿ ದಿಗ್ಬಂಧನ

ಆಪತ್ತಿಗೆ ಸಿಲುಕುತ್ತಿರುವ ದೇಶದ ಉದ್ಯೋಗ ಆಕಾಂಕ್ಷಿಗಳು: ಕೊಣಾಜೆ, ರಾಮನಗರದ ಯುವಕರ ರಕ್ಷಣೆ
Published : 14 ಆಗಸ್ಟ್ 2024, 3:06 IST
Last Updated : 14 ಆಗಸ್ಟ್ 2024, 3:06 IST
ಫಾಲೋ ಮಾಡಿ
Comments

ಬೆಂಗಳೂರು: ಸೈಬರ್ ವಂಚನೆಗೆ ನಾನಾ ತಂತ್ರ ಹೆಣೆಯುತ್ತಿರುವ ವಂಚಕರು, ಇದೀಗ ಉದ್ಯೋಗದ ಹೆಸರಿನಲ್ಲಿ ವಂಚನೆ ಜಾಲ ಸೃಷ್ಟಿಸಿಕೊಂಡು ವಿದೇಶದಲ್ಲೇ ಕುಳಿತು ಸೈಬರ್‌ ಅಪರಾಧ ಕೃತ್ಯ ಎಸಗುತ್ತಿದ್ದಾರೆ. ಇದಕ್ಕೆ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಬಿಹಾರ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳ ಯುವಕರನ್ನು ವಂಚಕರು ಬಳಸಿಕೊಳ್ಳುತ್ತಿದ್ದಾರೆ. ಉದ್ಯೋಗದ ಆಸೆಯಿಂದ ಹೋದವರು ವಿದೇಶದಲ್ಲಿ ಆಪತ್ತಿಗೆ ಸಿಲುಕುತ್ತಿದ್ದಾರೆ.

ಇದುವರೆಗೂ ದೇಶದಲ್ಲೇ ಕುಳಿತು ಕೃತಕ ಬುದ್ಧಿಮತ್ತೆಯ (ಎ.ಐ) ಮಿಮಿಕ್ರಿ, ಒಎಲ್‌ಎಕ್ಸ್, ಬ್ಯಾಂಕ್ ವಹಿವಾಟಿನ ಒನ್‌ ಟೈಂ ಪಾಸ್‌ವರ್ಡ್(ಒಟಿಪಿ), ಸಾಮಾಜಿಕ ಮಾಧ್ಯಮ ಬಳಸಿಕೊಂಡು ವಂಚಿಸುತ್ತಿದ್ದ ಸೈಬರ್ ವಂಚಕರು, ಈಗ ದೇಶದ ಯುವಕರನ್ನು ವಿದೇಶಕ್ಕೆ ಕರೆದೊಯ್ದು ಅಲ್ಲಿ ‘ದಿಗ್ಬಂಧನ’ಕ್ಕೆ ಒಳಪಡಿಸಿ ಸೈಬರ್‌ ಅಪರಾಧ ಎಸಗಲು ಒತ್ತಡ ಹೇರುತ್ತಿದ್ದಾರೆ.

ವಿದೇಶಗಳಲ್ಲಿ ತೊಂದರೆಗೆ ಸಿಲುಕಿದ ರಾಜ್ಯದ ಯುವಕರ ಕುಟುಂಬಸ್ಥರು, ತಮ್ಮ ಮಕ್ಕಳನ್ನು ರಕ್ಷಿಸಿ ಕೊಡುವಂತೆ ಸೈಬರ್ ಕ್ರೈಂ ಠಾಣೆಗಳ ಮೆಟ್ಟಿಲೇರುತ್ತಿದ್ದಾರೆ.

ವಿದೇಶದಲ್ಲಿ ತೊಂದರೆಗೆ ಸಿಲುಕಿದ್ದ ಮಂಗಳೂರಿನ ಕೊಣಾಜೆ ಹಾಗೂ ರಾಮನಗರದ ಇಬ್ಬರು ಯುವಕರನ್ನು ರಕ್ಷಿಸಿ ಸ್ವದೇಶಕ್ಕೆ ಕರೆ ತರಲಾಗಿದೆ. ಇನ್ನೂ ಹಲವರು ದೂರು ನೀಡಿದ್ದು, ಅವರು ಯಾವ ದೇಶದಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಸಿಐಡಿ ಸೈಬರ್‌ ಕ್ರೈಂ ವಿಭಾಗದ ಪೊಲೀಸರು ತಿಳಿಸಿದರು.

ಕಾಂಬೋಡಿಯಾ, ‌ಲಾವೋಸ್, ಮ್ಯಾನ್ಮಾರ್‌, ಥಾಯ್ಲೆಂಡ್‌ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಕೆಲಸವಿದೆ ಎಂಬುದಾಗಿ ಟೆಲಿಗ್ರಾಂ, ಇನ್‌ಸ್ಟಾಗ್ರಾಮ್‌ನಲ್ಲಿ ಸುಳ್ಳು ಜಾಹೀರಾತು ನೀಡಲಾಗುತ್ತದೆ. ಅಲ್ಲದೇ ಉದ್ಯೋಗ ಆಕಾಂಕ್ಷಿಗಳನ್ನು ಮಧ್ಯವರ್ತಿಗಳೇ ಪತ್ತೆಹಚ್ಚಿ ಕರೆ ಮಾಡಿ, ವಿದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸುತ್ತಾರೆ. ವಂಚಕರೇ ತಮ್ಮ ಖರ್ಚಿನಲ್ಲಿ ಅಲ್ಲಿಗೆ ಕರೆದೊಯ್ಯುತ್ತಿದ್ದಾರೆ. ಅವರನ್ನು ನಂಬಿ ಅಲ್ಲಿಗೆ ಹೋದ ನಂತರ ‘ಸೈಬರ್‌ ಗುಲಾಮರನ್ನಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ಸಿಐಡಿ ಸೈಬರ್‌ ವಿಭಾಗದ ಅಧಿಕಾರಿಯೊಬ್ಬರು ಹೇಳಿದರು.

ಸುಳ್ಳು ಆಮಿಷ ಭರವಸೆ ನೀಡಿ ಯುವಕರನ್ನು ವಿದೇಶಕ್ಕೆ ಕರೆಸಿಕೊಂಡು ಸೈಬರ್‌ ಅಪರಾಧ ಕೃತ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಉದ್ಯೋಗ ಆಕಾಂಕ್ಷಿಗಳು ಅಧಿಕೃತ ವೆಬ್‌ಸೈಟ್‌ನಲ್ಲೇ ಅರ್ಜಿ ಸಲ್ಲಿಸಬೇಕು
ಅನೂಪ್‌ ಶೆಟ್ಟಿ ಎಸ್‌ಪಿ ಸೈಬರ್‌ ಕ್ರೈಂ ವಿಭಾಗ ಸಿಐಡಿ

‘ಸ್ಕ್ಯಾಮ್‌ ಕಾಂಪೌಂಡ್’ ಹೆಸರು: ನಾಲ್ಕು ದೇಶಗಳಲ್ಲಿ

ಸ್ಕ್ಯಾಮ್‌ ಕಾಂಪೌಂಡ್‌ನ ಕಟ್ಟಡಗಳಿವೆ. ಅಲ್ಲಿಗೆ ಕರೆದೊಯ್ದ ನಂತರ ಯುವಕರಿಗೆ ದಿಗ್ಬಂಧನ ಹಾಕಲಾಗುತ್ತದೆ. ಆಧಾರ್‌ ಪಾನ್‌ ಕಾರ್ಡ್‌ ಪಾಸ್‌ಪೋರ್ಟ್‌ ವೀಸಾ ಸಿಮ್‌ ಸೇರಿ ಎಲ್ಲ ದಾಖಲೆಗಳನ್ನೂ ಕಸಿದುಕೊಳ್ಳುತ್ತಾರೆ. ಯುವಕರು ಬಳಸುತ್ತಿದ್ದ ಸಿಮ್‌ ನಂಬರ್‌ನಿಂದಲೇ ಭಾರತದ ಪ್ರಜೆಗಳನ್ನು ಗುರಿಯಾಗಿಸಿ ಕರೆ ಮಾಡಿಸುತ್ತಾರೆ. ಕರೆ ಮಾಡಲು ನಿರಾಕರಿಸಿದರೆ ಚಿತ್ರಹಿಂಸೆ ನೀಡಿ ಹಲ್ಲೆ ನಡೆಸುತ್ತಾರೆ. ಊಟ ಸಹ ನೀಡುತ್ತಿಲ್ಲ. ಹಲ್ಲೆಯಿಂದ ಕೆಲವರು ಮೃತಪಟ್ಟಿರುವ ಮಾಹಿತಿ ಇದೆ. ವಂಚಕರ ಕೃತ್ಯಕ್ಕೆ ಅಲ್ಲಿನ ಸ್ಥಳೀಯರ ಬೆಂಬಲವಿದ್ದು ತೊಂದರೆಗೆ ಸಿಲುಕಿದವರನ್ನು ಸ್ವದೇಶಕ್ಕೆ ಕರೆತರುವುದು ಕಷ್ಟವಾಗುತ್ತಿದೆ. ವಂಚನೆಯಿಂದ ಬಂದ ಹಣವನ್ನು ವಂಚಕರು ನಾನಾ ರೂಪದಲ್ಲಿ ಪಡೆದುಕೊಳ್ಳುತ್ತಿದ್ದಾರೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದರು. ಉದ್ಯೋಗದ ಸುಳ್ಳು ಆಮಿಷದಿಂದ ವಿದೇಶಕ್ಕೆ ತೆರಳಿರುವ ಸುಮಾರು 5 ಸಾವಿರ ಮಂದಿ ಸಮಸ್ಯೆಗೆ ಸಿಲುಕಿರುವ ಮಾಹಿತಿಯಿದೆ. ಇತ್ತೀಚೆಗೆ ಕಾಂಬೋಡಿಯಾದಿಂದ ವಿವಿಧ ರಾಜ್ಯಗಳ 250 ಮಂದಿಯನ್ನು ರಕ್ಷಿಸಲಾಗಿದೆ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT