ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಡಿಯುಟಿಟಿಎಲ್‌ ಅಕ್ರಮ: ಶಂಕರಪ್ಪ ಸೋದರ ಬಂಧನ

ರಾಮನಗರದ ಚಮ್ಮನಹಳ್ಳಿಯಲ್ಲಿ ಮನೆ ನಿರ್ಮಾಣ, ಮಾಯಾಗನಹಳ್ಳಿಯಲ್ಲಿ ಆಸ್ತಿ ಖರೀದಿ
Published : 28 ಸೆಪ್ಟೆಂಬರ್ 2024, 15:47 IST
Last Updated : 28 ಸೆಪ್ಟೆಂಬರ್ 2024, 15:47 IST
ಫಾಲೋ ಮಾಡಿ
Comments

ಬೆಂಗಳೂರು: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ (ಡಿಡಿಯುಟಿಟಿಎಲ್‌) ಅಕ್ರಮ ಪ್ರಕರಣದಲ್ಲಿ ಪಾಲು ಪಡೆದಿದ್ದ ಆರೋಪದ ಮೇಲೆ ಮತ್ತೊಬ್ಬರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.‌

ಡಿಡಿಯುಟಿಟಿಎಲ್‌ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎಸ್‌.ಶಂಕರಪ್ಪ ಅವರ ಸಹೋದರ, ರಾಮನಗರ ಜಿಲ್ಲೆ ಮಾಯಾಗನಹಳ್ಳಿಯ ನಿವಾಸಿ ಎಂ.ಎಸ್‌.ಹೊನ್ನಪ್ಪ(67) ಬಂಧಿತರು.

ಇದೇ ಪ್ರಕರಣದಲ್ಲಿ ಈ ಹಿಂದೆ ಶಂಕರಪ್ಪ ಹಾಗೂ ಡಿಡಿಯುಟಿಟಿಎಲ್‌ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಡಿ.ಎಸ್.ವೀರಯ್ಯ ಅವರನ್ನೂ ಬಂಧಿಸಲಾಗಿತ್ತು. ಶಂಕರಪ್ಪ ನ್ಯಾಯಾಂಗ ಬಂಧನದಲ್ಲಿದ್ದಾರೆ. ವೀರಯ್ಯ ಅವರು ಜಾಮೀನ ಮೇಲೆ ಬಿಡುಗಡೆ ಆಗಿದ್ದಾರೆ.

‘ಹೊನ್ನಪ್ಪ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಮೂರು ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ಆರೋಪಿಯ ಹೇಳಿಕೆ ದಾಖಲಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ರಾಜ್ಯದ ಹಲವೆಡೆ ಕಾಮಗಾರಿಗಳು ಅನುಷ್ಠಾನಗೊಳದೇ ಇದ್ದರೂ ಶಂಕರಪ್ಪ ಅವರು ಗುತ್ತಿಗೆದಾರರು ಸಲ್ಲಿಸಿದ್ದ ಬಿಲ್‌ಗಳ ಹಿಂಭಾಗದಲ್ಲಿ ‘ಕಾಮಗಾರಿ ತೃಪ್ತಿಕರ’ವಾಗಿದೆ ಎಂದು ಬರೆದು ಸಹಿ ಮಾಡಿದ್ದರು. ಅಲ್ಲದೇ ರಾಜಾಜಿನಗರದ ಎಸ್‌ಬಿಐ ಬ್ಯಾಂಕ್‌ನಲ್ಲಿರುವ ಎಸ್‌.ಎಸ್.ಎಂಟರ್‌ಪ್ರೈಸಸ್‌ ಖಾತೆಗೆ ₹1.97 ಕೋಟಿ ಪಾವತಿ ಆಗಿತ್ತು. ಅದಾದ ಮೇಲೆ ಎಸ್‌.ಎಸ್‌. ಎಂಟರ್‌ಪ್ರೈಸಸ್‌ನವರು 2022ರ ಮಾರ್ಚ್‌ 17ರಂದು ದಂಕಾ ಟ್ರೇಡರ್ಸ್‌ನ ಖಾತೆಗೆ ₹31 ಲಕ್ಷ ವರ್ಗಾವಣೆ ಮಾಡಿದ್ದರು. ದಂಕಾ ಟ್ರೇಡರ್ಸ್‌ನವರು ಹೊನ್ನಪ್ಪ ಅವರ ಬ್ಯಾಂಕ್ ಖಾತೆಗೆ ₹20 ಲಕ್ಷ ವರ್ಗಾವಣೆ ಮಾಡಿದ್ದರು. ಇನ್ನೊಂದು ಮೂಲದಿಂದಲೂ ಹೊನ್ನಪ್ಪ ಅವರ ಖಾತೆಗೆ ₹20 ಲಕ್ಷ ವರ್ಗಾವಣೆ ಆಗಿತ್ತು’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಹೊನ್ನಪ್ಪ ಅವರಿಗೆ ಬಂದ ₹40 ಲಕ್ಷದಿಂದ ರಾಮನಗರದ ಚಮ್ಮನಹಳ್ಳಿಯಲ್ಲಿ ಪುತ್ರನ ಹೆಸರಿನಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಮಾದಾಪುರ ಹಾಗೂ ಮಾಯಾಗನಹಳ್ಳಿಯಲ್ಲಿ ಆಸ್ತಿ ಖರೀದಿಸಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದರು.

ದಾಳಿಯ ಮುನ್ಸೂಚನೆ: ‘ತನಿಖಾಧಿಕಾರಿಗಳು ಮನೆಯ ಮೇಲೆ ದಾಳಿ ಮಾಡುವ ಸಾಧ್ಯತೆಯಿದ್ದು, ದಾಖಲೆಗಳನ್ನು ಬಚ್ಚಿಡುವಂತೆ ಶಂಕರಪ್ಪ ಅವರು ಸಹೋದರನಿಗೆ ಮಾಹಿತಿ ನೀಡಿದ್ದರು. ಹೊನ್ನಪ್ಪ ಅವರು ಆಸ್ತಿ ಖರೀದಿ ಸೇರಿದಂತೆ ಹಲವು ದಾಖಲೆಗಳನ್ನು ಬಚ್ಚಿಟ್ಟಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT