ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೃತ್ತಿಪರ ಕೋರ್ಸ್‌ಗಳ ಶುಲ್ಕ ಶೇ 15ರಷ್ಟು ಹೆಚ್ಚಳಕ್ಕೆ ಒತ್ತಾಯ

Published 6 ಜೂನ್ 2024, 15:39 IST
Last Updated 6 ಜೂನ್ 2024, 15:39 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಶುಲ್ಕವನ್ನು ಶೇ 15ರಷ್ಟು ಹೆಚ್ಚಳ ಮಾಡುವಂತೆ ಖಾಸಗಿ ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿ ಸರ್ಕಾರವನ್ನು ಒತ್ತಾಯಿಸಿದೆ. 

ಈಗಾಗಲೇ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗಿದ್ದ ಬಹುತೇಕ ಪ್ರವೇಶ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿವೆ.‌‌‌ ಆದರೆ, ರಾಜ್ಯದಲ್ಲಿ ಶುಲ್ಕ ನಿಗದಿಯ ಕುರಿತು ಸರ್ಕಾರ ಇದುವರೆಗೂ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಸಂಘ ಹಿಂದೆ ಸಲ್ಲಿಸಿದ್ದ ಬೇಡಿಕೆಗೂ ಸ್ಪಂದನೆ ದೊರೆತಿಲ್ಲ. ಬಿಜೆಪಿ ಅವಧಿಯಲ್ಲಿ ಹೊರಡಿಸಿದ್ದ ಶೇ 10ರಷ್ಟು ಶುಲ್ಕ ಹೆಚ್ಚಳದ ಆದೇಶವನ್ನೂ ಕಳೆದ ವರ್ಷ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ತಡೆ ಹಿಡಿದು, ಶೇ 7ರಷ್ಟು ಹೆಚ್ಚಳಕ್ಕೆ ಅನುಮತಿ ನೀಡಿತ್ತು. ಹಾಗಾಗಿ, ಈ ವರ್ಷ ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಬೇಕು ಎನ್ನುವುದು ಸಂಘದ ಬೇಡಿಕೆ.

‘ವೃತ್ತಿಪರ ಕೋರ್ಸ್‌ಗಳನ್ನು ನಡೆಸುವ ಕಾಲೇಜುಗಳ ಬೋಧಕರಿಗೆ ನಿಯಮದ ಪ್ರಕಾರ 7ನೇ ವೇತನ ಆಯೋಗ ಶಿಫಾರಸು ಮಾಡಿದ ವೇತನ ನೀಡಬೇಕು. ಇದು ಬಹುತೇಕ ಕಾಲೇಜುಗಳಿಗೆ ಆರ್ಥಿಕ ಹೊರೆಯಾಗಿದೆ. ಹಲವು ವೃತ್ತಿಪರ ಕೋರ್ಸ್‌ಗಳು ವೆಚ್ಚದಾಯಕವಾಗಿವೆ. ಕಾಲೇಜುಗಳ ನಿರ್ವಹಣೆ ಕಷ್ಟಕರವಾಗಿದೆ. ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಕಾರಣ ನೀಡಿ ಸರ್ಕಾರ ಕಾಲೇಜು ಆಡಳಿತ ಮಂಡಳಿಗಳ ಸಭೆ ಕರೆದಿಲ್ಲ. ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಿಂದೆ ಪ್ರಾಥಮಿಕ ಚರ್ಚೆ ನಡೆಸಿದ್ದರು. ನೀತಿ ಸಂಹಿತೆ ಮುಕ್ತಾಯವಾಗಿರುವುದರಿಂದ ತಕ್ಷಣ ಸಭೆ ಕರೆಯಬೇಕು’ ಎಂದು ಸಂಘ ಒತ್ತಾಯಿಸಿದೆ.

2022-23ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ಎಂಜಿನಿಯರಿಂಗ್‌ ಕಾಲೇಜುಗಳ ಶುಲ್ಕ ₹38,200, ಅಲ್ಪಸಂಖ್ಯಾತ ಕಾಲೇಜುಗಳು ಸೇರಿದಂತೆ ಅನುದಾನರಹಿತ ಕಾಲೇಜುಗಳಲ್ಲಿ ₹98,984, ಖಾಸಗಿ ಮತ್ತು ಡೀಮ್ಡ್‌  ವಿಶ್ವವಿದ್ಯಾಲಯಗಳಲ್ಲಿ ₹91,796 ಇತ್ತು. ಈ ಶುಲ್ಕವನ್ನು ಕಳೆದ ವರ್ಷ ಶೇ 7ರಷ್ಟು ಹೆಚ್ಚಳ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT