ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗಲಿದೆ ಸರ್ಕಾರಿ ಶಾಲೆಗಳ ‘ಕಲಿಕಾ ಸ್ವರೂಪ’

ವಿಮೋವೆ ಪ್ರತಿಷ್ಠಾನದಿಂದ 100 ಶಾಲಾ–ಕಾಲೇಜುಗಳಲ್ಲಿ ಇ–ಶಾಲೆ ಯೋಜನೆ ಅನುಷ್ಠಾನ
Published 7 ಮಾರ್ಚ್ 2024, 22:54 IST
Last Updated 7 ಮಾರ್ಚ್ 2024, 22:54 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮೀಣ ಸರ್ಕಾರಿ ಶಾಲೆಗಳ ಕಲಿಕಾ ಸ್ವರೂಪ ಬದಲಾಯಿಸಿ, ವಿದ್ಯಾರ್ಥಿಗಳನ್ನು ಆಧುನಿಕ ತಂತ್ರಜ್ಞಾನಕ್ಕೆ ಸಜ್ಜುಗೊಳಿಸಲು ‘ವಿಮೋವೆ’ ಪ್ರತಿಷ್ಠಾನ ನಿರ್ಧರಿಸಿದ್ದು, ಮೊದಲ ಹಂತದಲ್ಲಿ 100 ಶಾಲಾ–ಕಾಲೇಜುಗಳಲ್ಲಿ ‘ಇ–ಶಾಲೆ’ ಯೋಜನೆ ಅನುಷ್ಠಾನಗೊಳಿಸುತ್ತಿದೆ.

ಆಯ್ಕೆ ಮಾಡಿಕೊಂಡ ಪ್ರತಿ ಶಾಲೆಯ ಒಂದು ಕೊಠಡಿಯನ್ನು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ‘ಸ್ಮಾರ್ಟ್‌ ಕ್ಲಾಸ್‌ ರೂಂ’ ಆಗಿ ಪರಿವರ್ತಿಸುತ್ತಿದೆ. ಕಪ್ಪುಹಲಗೆಯ ಜಾಗದಲ್ಲಿ ₹2 ಲಕ್ಷ ವೆಚ್ಚದಲ್ಲಿ ವಿಂಡೊ ಹಾಗೂ ಆ್ಯಂಡ್ರಾಯ್ಡ್‌ ತಂತ್ರಜ್ಞಾನ ಒಳಗೊಂಡ ಐಎಫ್‌ಬಿ (ಇಂಟರ‍್ಯಾಕ್ಟಿವ್‌ ಫ್ಲ್ಯಾಟ್ ಬೋರ್ಡ್‌) ಅಳವಡಿಸಲಾಗುತ್ತಿದೆ. ಇದರಿಂದ ಸ್ಮಾರ್ಟ್‌ ಫೋನ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿನ ದತ್ತಾಂಶಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಡಿಜಿಟಲ್‌ ಶಿಕ್ಷಣ ನೀಡಲಾಗುತ್ತದೆ.

ಕೊಠಡಿಯ ಉಳಿದ ಮೂರು ಗೋಡೆಗಳನ್ನೂ ವಿದ್ಯಾರ್ಥಿಗಳ ಕಲಿಕೆ ಉತ್ತೇಜಿಸುವ ವಿವರಗಳಿಗೆ ಮೀಸಲಿಡಲಾಗುತ್ತದೆ. 21ನೇ ಶತಮಾನಕ್ಕೆ ಬೇಕಾಗುವ ಕೌಶಲಗಳು, ಹಸಿರು ಪರಿಸರದ ಪ್ರಯೋಜನ, ಹೊಸ ತಲೆಮಾರಿನ ತಂತ್ರಜ್ಞಾನದ ವಿವರಗಳು ಗೋಡೆಯ ಮೇಲಿರುತ್ತವೆ. 

‘ಆಯಾ ವರ್ಷದ ಪಠ್ಯಕ್ರಮದ ಜತೆಗೆ ಪ್ರಸಕ್ತ ಕಾಲಘಟ್ಟದ ಅತ್ಯಂತ ಬೇಡಿಕೆಯ ಕೃತಕ ಬುದ್ಧಿಮತ್ತೆ, ಯಂತ್ರ ತಂತ್ರಜ್ಞಾನ, ಕೌಶಲಾಧಾರಿತ ಶಿಕ್ಷಣ, ವ್ಯಕ್ತಿತ್ವ ವಿಕಸನ, ಹಣಕಾಸು ನಿರ್ವಹಣೆಗಳ ಕಲಿಕೆಗೂ ಅವಕಾಶ ಮಾಡಿಕೊಡಲಾಗಿದೆ. ಇಂತಹ ಅವಕಾಶಗಳಿಂದಾಗಿ ಸರ್ಕಾರಿ ಶಾಲೆಯ ಮಕ್ಕಳು ಭವಿಷ್ಯದಲ್ಲಿ ತ್ವರಿತವಾಗಿ ಉದ್ಯೋಗಾವಕಾಶ ಪಡೆಯಲು, ದೇಶ–ವಿದೇಶಗಳಲ್ಲಿ ಉನ್ನತ ಶಿಕ್ಷಣಕ್ಕೆ ತೆರಳಲು ದಾರಿ ಮಾಡಿಕೊಡಲಿದೆ’ ಎನ್ನುತ್ತಾರೆ ವಿಮೋವೆ ಸಂಸ್ಥಾಪಕ ವಿನಯ್‌ ಸಿಂಧೆ. 

ಶಾಲಾ ಶಿಕ್ಷಕರಿಗೆ ತರಬೇತಿ:

ಸಂಸ್ಥೆ ‘ಸ್ಮಾರ್ಟ್‌ ಕ್ಲಾಸ್‌ ರೂಂ’ ಸೌಲಭ್ಯ ನೀಡಿದ ನಂತರ ಅದಕ್ಕೆ ಅಗತ್ಯವಾದ ದತ್ತಾಂಶಗಳನ್ನು ಪೂರೈಸುತ್ತವೆ. ಆದರೆ, ಹೊರಗಿನಿಂದ ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸುವುದಿಲ್ಲ. ಬದಲಿಗೆ ಆಯಾ ಶಾಲೆಯ ಶಿಕ್ಷಕರಿಗೆ ತಂತ್ರಜ್ಞಾನ ಬಳಕೆಯ ತರಬೇತಿ ನೀಡಿ, ಅವರನ್ನೇ ಸಜ್ಜುಗೊಳಿಸಲಾಗುತ್ತದೆ. 

ಭವಿಷ್ಯದಲ್ಲಿ ಸಂಸ್ಥೆಯಿಂದಲೇ ಪಠ್ಯ ಹೊರತಾದ ಇತರೆ ತಂತ್ರಜ್ಞಾನದ ಬೋಧನೆಗೆ ನಿರೋದ್ಯೋಗಿ ಪದವೀಧರರನ್ನು ನೇಮಿಸಲಾಗುವುದು. ಎಲ್ಲ ಶಾಲಾ ಕಾಲೇಜುಗಳನ್ನೂ ಡಿಜಿಟಲ್‌ ಶಿಕ್ಷಣಕ್ಕೆ ಸಜ್ಜುಗೊಳಿಸಲಾಗುವುದು.
ವಿನಯ್‌ ಸಿಂಧೆ ಸಂಸ್ಥಾಪಕ ವಿಮೋವೆ ಪ್ರತಿಷ್ಠಾನ.

ಸಾಮಾಜಿಕ ಸೇವೆಯ ಬದ್ಧತೆ

ವಿಮೋವೆ ಪ್ರತಿಷ್ಠಾನದ ಸಂಸ್ಥಾಪಕ ವಿನಯ್‌ ಸಿಂಧೆ ಹುಬ್ಬಳ್ಳಿಯವರು. ವೃತ್ತಿಯಲ್ಲಿ ಎಂಜಿನಿಯರ್‌. ವಿಪ್ರೊ ಸೇರಿದಂತೆ ಹಲವು ಜಾಗತಿಕ ಕಂಪನಿಗಳಲ್ಲಿ ಎರಡು ದಶಕ ಕೆಲಸ ಮಾಡಿದ್ದಾರೆ. ಸಾಮಾಜಿಕ ಸೇವೆಗಾಗಿ ವಿಮೋವೆ ಪ್ರತಿಷ್ಠಾನ ಸ್ಥಾಪಿಸಿದ್ದಾರೆ. ಆರಂಭದಲ್ಲಿ ಗ್ರಾಮ ಉಜ್ವಲ್‌ ಯೋಜನೆ ಮೂಲಕ ರಾಜ್ಯದ 212 ಹಳ್ಳಿಗಳಲ್ಲಿ ಸೋಲಾರ್ ದೀಪ ಅಳವಡಿಕೆಗೆ ಶ್ರಮಿಸಿದ್ದಾರೆ. ಹಲವು ಶಾಲೆಗಳನ್ನು ಹಸಿರು ಹಾಗೂ ಪ್ರಗತಿ ಶಾಲೆಗಳಾಗಿ ರೂಪಿದ್ದಾರೆ. ಈಗ ‘ಇ–ಶಾಲೆ’ ಯೋಜನೆ ಕೈಗೆತ್ತಿಕೊಂಡಿದ್ದಾರೆ.  

ಪ್ರಾಯೋಗಿಕ ಅನುಷ್ಠಾನ ಯಶಸ್ವಿ

ಬೆಂಗಳೂರಿನ ಜಕ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. 300ರಿಂದ 500 ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ. ಪ್ರತಿ ಕೊಠಡಿಗೂ ತಲಾ ₹ 4 ಲಕ್ಷ ವಿನಿಯೋಗಿಸಲಾಗುತ್ತಿದೆ. ಅಗತ್ಯ ಮೊತ್ತಕ್ಕಾಗಿ ಕಾರ್ಪೊರೇಟ್‌ ಕಂಪನಿಗಳ ಸಿಎಸ್‌ಆರ್‌ ನಿಧಿಯ ನೆರವು ಪಡೆದಿದ್ದಾರೆ. ಹಲವು ಕಂಪನಿಗಳು ಅವರ ಕಾರ್ಯಕ್ಕೆ ಕೈಜೋಡಿಸಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT