ಮಂಗಳವಾರ, 29 ಜುಲೈ 2025
×
ADVERTISEMENT
ADVERTISEMENT

‘ಕೈ’, ‘ಕಮಲ’ದೊಳಗೆ ಅಸಮಾಧಾನ, ತಳಮಳ

Published : 26 ಜೂನ್ 2025, 0:04 IST
Last Updated : 26 ಜೂನ್ 2025, 0:04 IST
ಫಾಲೋ ಮಾಡಿ
0
‘ಕೈ’, ‘ಕಮಲ’ದೊಳಗೆ ಅಸಮಾಧಾನ, ತಳಮಳ

ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್‌ ಮತ್ತು ವಿರೋಧ ಪಕ್ಷ ಬಿಜೆಪಿಯೊಳಗಿನ ಅತೃಪ್ತಿ ಬೆಳೆಯುತ್ತಲೇ ಇದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಬದಲಾಯಿಸಬೇಕು ಎಂಬ ಆಗ್ರಹ ಹೆಚ್ಚುತ್ತಲೇ ಇದೆ. ಕಾಂಗ್ರೆಸ್‌ನಲ್ಲಿ ಸರ್ಕಾರದ ಕಾರ್ಯವೈಖರಿ ಕುರಿತು ಅತೃಪ್ತಿಯ ಮಾತು ನಿಲ್ಲುತ್ತಲೇ ಇಲ್ಲ. ಉಸ್ತುವಾರಿ  ರಣದೀಪ್‌ ಸುರ್ಜೇವಾಲಾ ಅವರು ಮುಖಂಡರ ಅಹವಾಲು ಕೇಳುತ್ತಿಲ್ಲ ಎಂಬ ಆಕ್ರೋಶವೂ ಕೆಲವರಲ್ಲಿ ಈಗ ಇದೆ.

ADVERTISEMENT
ADVERTISEMENT

ಸುರ್ಜೇವಾಲಾ ವಿರುದ್ಧ ‘ಕೈ’ ಶಾಸಕರ ಮುನಿಸು

ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ರಾಜ್ಯಕ್ಕೆ ‘ಅಪರೂಪ’ವಾಗಿರುವ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವಿರುದ್ಧ ‘ಕೈ’ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. 

‘ರಾಜ್ಯ ಸರ್ಕಾರದ ಕೆಲವು ಸಚಿವರ ಧೋರಣೆ, ಲಂಚ ಹಾಗೂ ಕಾರ್ಯವೈಖರಿ ಬಗ್ಗೆ ಸ್ವಪಕ್ಷೀಯ ಶಾಸಕರೇ ಧ್ವನಿ ಎತ್ತಿದ್ದಾರೆ. ಈ ರೀತಿ ಧ್ವನಿ ಎತ್ತುತ್ತಿರುವುದು ಇದೇ ಮೊದಲಲ್ಲ. ಶಾಸಕರ ಅಹವಾಲು ಆಲಿಸಿ ಸಮಸ್ಯೆಗೆ ತಾರ್ಕಿಕ ಅಂತ್ಯ ಕಂಡುಹಿಡಿಯಲು ಪಕ್ಷದ ರಾಜ್ಯ ಉಸ್ತುವಾರಿ ಮುಂದಾಗಬೇಕಿತ್ತು. ಅವರು ರಾಜ್ಯಕ್ಕೆ ಬರುವುದೇ ಅಪರೂಪವಾಗಿದೆ. ನಾವು ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳುವುದು ಯಾರಲ್ಲಿ’ ಎಂದು ಹಿರಿಯ ಶಾಸಕರೊಬ್ಬರು ಅಳಲು ತೋಡಿಕೊಂಡರು. 

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮುಕ್ತವಾಗಿ ನಮ್ಮ ಸಮಸ್ಯೆ ಹೇಳಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ಮುಖ್ಯಮಂತ್ರಿ ಸುತ್ತ ಆಪ್ತ ಸಚಿವರು ಹಾಗೂ ಶಾಸಕರೇ ಇರುತ್ತಾರೆ. ನಮ್ಮ ಕಷ್ಟವನ್ನು ಈ ನಾಯಕರು ಅರ್ಥ ಮಾಡಿಕೊಳ್ಳುವುದೂ ಇಲ್ಲ. ಉಸ್ತುವಾರಿ ಅವರಲ್ಲಿ ನೋವು ತೋಡಿಕೊಳ್ಳೋಣ ಎಂದರೆ ಅವರೂ ಕೈಗೆ ಸಿಗುತ್ತಿಲ್ಲ’ ಎಂದು ಮತ್ತೊಬ್ಬ ಶಾಸಕರು ಬೇಸರ ವ್ಯಕ್ತಪಡಿಸಿದರು. 

‘ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ ಸುರ್ಜೇವಾಲಾ ಅವರಿಗೆ ಮಧ್ಯ ಪ್ರದೇಶದ ಹೊಣೆ ವಹಿಸಲಾಯಿತು. ಸುಮಾರು ಆರು ತಿಂಗಳು ಆ ರಾಜ್ಯದ ಬಗ್ಗೆ ಗಮನ ಹರಿಸಿದರು. ಲೋಕಸಭಾ ಚುನಾವಣೆಯ ಬಳಿಕ ಸ್ವಂತ ರಾಜ್ಯ ಹರಿಯಾಣದ ಕಡೆಗೆ ದೃಷ್ಟಿ ನೆಟ್ಟರು. ಈಗ ಎಲ್ಲ ಚುನಾವಣೆ ಮುಗಿದಿದೆ. ರಾಜ್ಯಕ್ಕೆ ಬನ್ನಿ ಎಂದರೂ ಅವರು ಬರುತ್ತಿಲ್ಲ’ ಎಂದು ಹಿರಿಯ ಸಚಿವರೊಬ್ಬರು ಹೇಳಿದರು. 

‘ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸುರ್ಜೇವಾಲಾ ಅವರು ಬೆಂಗಳೂರಿನಲ್ಲೇ ಮನೆ ಮಾಡಿದ್ದರು. ಆಗ ರಾಜ್ಯ ನಾಯಕರು ಹಾಗೂ ಮುಖಂಡರ ಜತೆಗೆ ಸಕ್ರಿಯವಾಗಿ ಹೋರಾಟದಲ್ಲಿ ಭಾಗಿಯಾಗಿದ್ದರು. ಪಕ್ಷ ಅಧಿಕಾರಕ್ಕೆ ಬಂದ ಬಳಿಕ ರಾಜ್ಯಕ್ಕೆ ಭೇಟಿ ನೀಡಿದ್ದು ಬೆರಳೆಣಿಕೆಯ ಸಂದರ್ಭಗಳಲ್ಲಿ. ಶಾಸಕರ ಅಹವಾಲಿಗೆ ಕಿವಿಯಾಗಿದ್ದು ಒಂದೆರಡು ಬಾರಿ ಅಷ್ಟೇ. ರಾಜ್ಯ ಸರ್ಕಾರ ಹಾಗೂ ಪಕ್ಷದ ನಡುವೆ ಸಮನ್ವಯವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಉಸ್ತುವಾರಿಯವರು ಪಕ್ಷ ಹಾಗೂ ಸರ್ಕಾರಕ್ಕೆ ಸೇತುವೆಯಾಗಬೇಕಿತ್ತು. ಆ ಕೆಲಸ ಆಗಿಲ್ಲ. ಪಕ್ಷದಲ್ಲಿನ ಈಗಿನ ಬಿಕ್ಕಟ್ಟಿಗೆ ಸುರ್ಜೇವಾಲಾ ಧೋರಣೆಯೂ ಒಂದು ಕಾರಣ’ ಎಂದು ಅವರು ವಿಶ್ಲೇಷಿಸಿದರು. 

ಸುನಿಲ್‌ ಪರ ತಟಸ್ಥ-ಭಿನ್ನರ ಲಾಬಿ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕಾರ್ಕಳ ಶಾಸಕ ವಿ.ಸುನಿಲ್‌ ಕುಮಾರ್ ಅವರನ್ನು ನೇಮಿಸಬೇಕು ಎಂದು ಪಕ್ಷದ ತಟಸ್ಥ ಬಣ ಹಾಗೂ ಭಿನ್ನರ ಬಣ ಪ್ರಬಲ ಲಾಬಿ ನಡೆಸಿವೆ. 

‘ಸುನಿಲ್‌ ಯುವ ನಾಯಕ. ಪ್ರಖರ ಹಿಂದುತ್ವವಾದಿ. ಸಂಘದ ಜತೆಗೆ ಉತ್ತಮ ನಂಟು ಹೊಂದಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ತೀರ್ಮಾನ ತೆಗೆದುಕೊಳ್ಳಬೇಕು’ ಎಂಬುದು ತಟಸ್ಥ ಬಣದ ವಾದ. ‘ಲಿಂಗಾಯತ ಸಮುದಾಯದ ಬಿ.ವೈ. ವಿಜಯೇಂದ್ರ ಅವರನ್ನು ಇಳಿಸಿದರೆ ಸಮುದಾಯಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಯಡಿಯೂರಪ್ಪ ಅವರ ಕೋಪ ತಾಪ ಎದುರಿಸಬೇಕಾಗುತ್ತದೆ’ ಎಂಬ ಆತಂಕವೂ ರಾಷ್ಟ್ರೀಯ ನಾಯಕರನ್ನು ಕಾಡುತ್ತಿದೆ. ‘ಲಿಂಗಾಯತ ಸಮುದಾಯದವರು ದಶಕಗಳಿಂದ ಬಿಜೆಪಿಗೆ ನಿಷ್ಠರು. ಯಡಿಯೂರಪ್ಪ ಅವರು ಸಮುದಾಯದ ಪ್ರಬಲ ನಾಯಕ.ಅದೇ ಮಾತನ್ನು ವಿಜಯೇಂದ್ರ ಅವರಿಗೆಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಪಕ್ಷ ಪುಟಿದೇಳಬೇಕಾದರೆ ಕಠಿಣ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಈ ವಿಷಯವನ್ನು ವರಿಷ್ಠರ ಗಮನಕ್ಕೆ ತಂದಿದ್ದೇವೆ’ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದರು. 

ಈ ನಡುವೆ, ‘ನಾನು ರಾಜ್ಯ ಘಟಕದ ಅಧ್ಯಕ್ಷನಾದ ಬಳಿಕ ಸುನಿಲ್‌ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದೆ. ಕೆಲವೇ ಸಮಯದಲ್ಲಿ ಸಕಾರಣವಿಲ್ಲದೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರಿಗೆ ನಾನೇನೂ ಅನ್ಯಾಯ ಮಾಡಿಲ್ಲ’ ಎಂದು ವಿಜಯೇಂದ್ರ ಅವರು ಆಪ್ತರಲ್ಲಿ ಬೇಸರ ತೋಡಿಕೊಂಡಿದ್ದಾರೆ.

‘ಎರಡು ಬಣಗಳು ನಿತ್ಯ ಕಾದಾಟ ನಡೆಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷದ ಅಧ್ಯಕ್ಷನಾಗಿ ಸಂಘಟನೆ ಮಾಡಲು ಸಾಧ್ಯವೇ. ನಾನಾಗಿ ಯಾವುದೇ ಹುದ್ದೆ ಕೇಳುವುದಿಲ್ಲ. ವರಿಷ್ಠರ ತೀರ್ಮಾನಕ್ಕೆ ತಲೆಬಾಗುತ್ತೇನೆ’ ಎಂದು ಸುನಿಲ್ ಅವರು ತಟಸ್ಥ ಗುಂಪಿನ ನಾಯಕರಿಗೆ ತಿಳಿಸಿದ್ದಾರೆ.

ವಿಜಯೇಂದ್ರ ವಾದವೇನು?

‘ರಾಜ್ಯ ಕಾಂಗ್ರೆಸ್‌ ಸರ್ಕಾರದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಿದ್ದೇವೆ. ಫಲವಾಗಿ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಕೊಟ್ಟರು. ಮುಡಾ ಹಗರಣದ ವಿರುದ್ಧ ಮೈಸೂರು ಚಲೊ ನಡೆಸಿದೆವು. ಪರಿಣಾಮವಾಗಿ, ಸಿದ್ದರಾಮಯ್ಯ ಕುಟುಂಬದವರು 14 ನಿವೇಶನಗಳನ್ನು ಮರಳಿಸಿದರು. ಈ ಎರಡೂ ಪ್ರಕರಣಗಳ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗಳು ನಡೆಸುತ್ತಿವೆ. ಈ ವಿಷಯಗಳನ್ನು ಇನ್ಯಾವ ರೀತಿಯಲ್ಲಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯ’ ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ. 

‘ಕೆಲವು ನಾಯಕರು ಪಕ್ಷ ಸಂಘಟನೆ ಮಾಡುತ್ತಿಲ್ಲ. ನನ್ನನ್ನು ಟೀಕಿಸುವುದು ಅವರಿಗೆ ಅಭ್ಯಾಸವಾಗಿದೆ. ಆ ಮೂಲಕವೇ ನಾಯಕರಾಗಲು ಹೊರಟಿದ್ದಾರೆ. ಒಂದೂವರೆ ವರ್ಷಗಳಲ್ಲಿ ನಾನು ಮಾಡಿರುವ ಕೆಲಸಕ್ಕೆ 10ರಲ್ಲಿ 8 ಅಂಕ ಕೊಡುತ್ತೇನೆ. ಅಷ್ಟೊಂದು ಕೆಲಸ ಮಾಡಿದ್ದೇನೆ’ ಎಂದು ಆಪ್ತರಲ್ಲಿ ಹೇಳಿಕೊಂಡಿದ್ದಾರೆ. 

ಸೋಮಣ್ಣ ಅಭಿಪ್ರಾಯವೇನು?

‘ಪಕ್ಷದ ವರಿಷ್ಠರು ವಹಿಸಿದ ಕೆಲಸವನ್ನು ಚಾಚೂ ತಪ್ಪದೇ ನಿಭಾಯಿಸಿದ್ದೇನೆ. ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಪ್ರಬಲ ಸ್ಪರ್ಧೆ ನೀಡಿದ್ದೇನೆ. ಕೇಂದ್ರ ಸಚಿವನಾಗಿ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ವಿಜಯೇಂದ್ರ ಅವರನ್ನು ಬದಲಿಸುವುದಾದರೆ ನನಗೇ ಅವಕಾಶ ನೀಡಬೇಕು’ ಎಂದು ಸೋಮಣ್ಣ ಅವರು ವರಿಷ್ಠರಲ್ಲಿ ಮನವಿ ಮಾಡಿದ್ದಾರೆ. 

‘ನಾನು ಲಿಂಗಾಯತ ಸಮುದಾಯದ ಪ್ರಬಲ ನಾಯಕ. ಜತೆಗೆ, ಜೆಡಿಎಸ್‌ ಜತೆಗೆ ಸಮನ್ವಯದಿಂದ ಹೋರಾಟ ನಡೆಸಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಹೊಣೆ ನನ್ನದು’ ಎಂದು ಹೇಳಿದ್ದಾರೆ. 

ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ 

ರಾಜ್ಯ ಘಟಕದ ಅಧ್ಯಕ್ಷರ ಚುನಾವಣೆಗೆ ಪ್ರಕ್ರಿಯೆ ನಡೆಸುವ ಮುನ್ನ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಕ್ಕೆ ಪಕ್ಷದ ವರಿಷ್ಠರು ಚಾಲನೆ ನೀಡಿದ್ದಾರೆ. 

ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹಾಗೂ ವಿಧಾನ ಪರಿಷತ್ ಸದಸ್ಯ ಎನ್‌.ರವಿಕುಮಾರ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಬುಧವಾರ ಭೇಟಿ ಮಾಡಿ ಚರ್ಚಿಸಿದರು. ಈ ವೇಳೆ, ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ನಡ್ಡಾ ಮಾಹಿತಿ ಪಡೆದರು. ರಾಜ್ಯ ಘಟಕದಲ್ಲಿನ ಗೊಂದಲವನ್ನು ಶೀಘ್ರ ಪರಿಹರಿಸಬೇಕು. ಶೀಘ್ರ ಚುನಾವಣೆ ಪ್ರಕ್ರಿಯೆ ನಡೆಸಿ ಸಮರ್ಥರನ್ನು ನೇಮಕ ಮಾಡಬೇಕು ಎಂದು ಉಭಯ ನಾಯಕರು ಗಮನಕ್ಕೆ ತಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0