ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಲ್‌ಪಿ ಸಭೆ | ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡಿ: ‘ಕೈ’ ಶಾಸಕರಿಗೆ ಡಿಕೆಶಿ ಸಲಹೆ

Published 24 ಮೇ 2023, 7:27 IST
Last Updated 24 ಮೇ 2023, 7:27 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕಸಭೆ ಚುನಾವಣೆಯಲ್ಲಿ ನಾವು 20 ಸ್ಥಾನಗಳನ್ನು ಗೆಲ್ಲಲೇಬೇಕು. ವಿಧಾನಸಭೆ ಚುನಾವಣೆ ಗೆದ್ದೆವು ಎಂದು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಲೋಕಸಭೆ ಚುನಾವಣೆಯಲ್ಲೂ ಈ ಗೆಲುವಿನ ಯಾನ ಮುಂದುವರೆಯಬೇಕು. ಬಿಬಿಎಂಪಿ ಚುನಾವಣೆಯಲ್ಲೂ ವಿಜಯ ಸಾಧಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪಕ್ಷದ ಶಾಸಕರಿಗೆ ಕಿವಿಮಾತು ಹೇಳಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಸಚಿವರು ಆಗುವವರು ಪ್ರತಿ ಜಿಲ್ಲೆಯಲ್ಲಿ ಹಾಗೂ ಶಾಸಕರು ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಪಕ್ಷದ ಕಚೇರಿ ಸ್ಥಾಪಿಸಲೇಬೇಕು. ನಮಗೆ ಪಕ್ಷದ ಕಚೇರಿಯೇ ದೇಗುಲ. ಅದಕ್ಕೆ ಮೊದಲ ಆದ್ಯತೆ. ಎಲ್ಲರಿಗೂ ಅಧಿಕಾರ ಸಿಗದಿರಬಹುದು. ಆದರೆ, ನಿಮ್ಮ ಶ್ರಮಕ್ಕೆ ಗೌರವ ಸಿಗುತ್ತದೆ. ಪಕ್ಷದ ಕೆಲಸವನ್ನು ದೇವರ ಕೆಲಸ ಎಂದು ಮಾಡಬೇಕು. ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರನ್ನು ಮರೆಯಬಾರದು. ರಾಜ್ಯದ ಜನರಿಗೆ ಸ್ವಚ್ಛ ಆಡಳಿತ ನೀಡಲು ಸಹಕರಿಸಬೇಕು. ಮೈಯೆಲ್ಲಾ ಕಣ್ಣಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದೂ ಸಲಹೆ ನೀಡಿದರು.

ಲೋಕಸಭಾ ಚುನಾವಣೆಗೆ ಸಜ್ಜಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಶಾಸಕರಿಗೆ ಕರೆ ನೀಡಿದರು. ‘ಅನುದಾನ ಬಿಡುಗಡೆಯಲ್ಲಿ ಕೇಂದ್ರದಿಂದ ತಾರತಮ್ಯ ಆಗಿದೆ. ಕೋವಿಡ್, ಪ್ರವಾಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೆರವಿಗೆ ಬಂದಿಲ್ಲ. ಕೇಂದ್ರದ ಈ ತಾರತಮ್ಯ ನೀತಿಯನ್ನು ಜನರ ಮುಂದೆ ತೆಗೆದುಕೊಂಡು ಹೋಗೋಣ. ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಜನಪರವಾಗಿ ಕೆಲಸ ಮಾಡಬೇಕು‘ ಎಂದು ಶಾಸಕರಿಗೆ ಸಿದ್ದರಾಮಯ್ಯ ಕಿವಿಮಾತು ಹೇಳಿದರು.

‌ಅಳಲು ತೋಡಿಕೊಂಡ ರೂಪಕಲಾ ಶಶಿಧರ್‌
ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್‌ ಅವರು ಪೊಲೀಸರು ನೀಡಿದ ಕಿರುಕುಳ ಹೇಳಿಕೊಂಡು ಡಿ.ಕೆ. ಶಿವಕುಮಾರ್‌ ಎದುರು ಅಳಲು ತೋಡಿಕೊಂಡರು. ಶಾಸಕಾಂಗ ಸಭೆ ಬಳಿಕ ಶಿವಕುಮಾರ್‌ ಮುಂದೆ ಕಣ್ಣೀರು ಹಾಕಿ ಸಮಸ್ಯೆ ಹೇಳಿಕೊಂಡ ರೂಪಕಲಾ, ‘ಚುನಾವಣೆ ಸಮಯದಲ್ಲಿ ಪೊಲೀಸರು ನನಗೆ ಮತ್ತು ನಮ್ಮ ಕಾರ್ಯಕರ್ತರಿಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಸುಳ್ಳು ಕೇಸ್ ದಾಖಲು ಮಾಡಿ ಕಿರುಕುಳ ನೀಡಿದ್ದಾರೆ. ಮಾನಸಿಕ ಹಿಂಸೆ ನೀಡಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ಆಗಬೇಕು. ಪೊಲೀಸರು ಬಿಜೆಪಿ ಸರ್ಕಾರದ ಕೈಗೊಂಬೆಯಾಗಿ ವರ್ತಿಸಿದ್ದಾರೆ’ ಎಂದು ಆರೋಪಿಸಿದರು

ಕಾಂಗ್ರೆಸ್ಸೀಕರಣ ಮಾಡುತ್ತಿದ್ದಾರೆಂಬ ಆರಗ ಜ್ಞಾನೇಂದ್ರ ಆರೋಪದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಡಿ.ಕೆ. ಶಿವಕುಮಾರ್‌, ‘ಆರಗ ಜ್ಞಾನೇಂದ್ರಗೆ ಉತ್ತರ ಕೊಡಬೇಕಾಗಿಲ್ಲ. ಅವರ ಆಡಳಿತ ನೋಡಿ ಜನರೇ ಉತ್ತರ ಕೊಟ್ಟಿದ್ದಾರೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT