ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಪರಿಹಾರಕ್ಕೆಂದು ಅನಧಿಕೃತ ವ್ಯಕ್ತಿಗಳು ನಕಲಿ ಖಾತೆ ತೆರೆದಿದ್ದಾರೆ: ಎಚ್ಚರ

Last Updated 20 ಆಗಸ್ಟ್ 2018, 16:01 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಕೊಡವ ಸಮಾಜದ ವತಿಯಿಂದ ಪರಿಹಾರ ನಿಧಿ ಸಂಗ್ರಹಿಸಿ ವಿತರಿಸಲಾಗುತ್ತಿದೆ. ಸಮಾಜದ ಪರಿಹಾರ ನಿಧಿಯ ಖಾತೆ ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳಿಗೆ, ಖಾತೆಗಳಿಗೆ ಹಣ ನೀಡಬಾರದು ಎಂದು ಸಮಾಜದ ಅಧ್ಯಕ್ಷ ಎಂ.ಎ.ರವಿ ಉತ್ತಪ್ಪ ಮನವಿ ಮಾಡಿದರು.

ವಸಂತನಗರದ ಕೊಡವ ಸಮಾಜದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಹಾರ ನಿಧಿ ಸಂಗ್ರಹ ಹೆಸರಿನಲ್ಲಿ ಕೆಲವರು ವೈಯಕ್ತಿಕ ಖಾತೆಗೆ ಹಣ ಹಾಕಿಕೊಂಡು ದುರುಪಯೋಗಪಡಿಸಿಕೊಂಡ ಘಟನೆ ಪದ್ಮನಾಭ ನಗರದಲ್ಲಿ ನಡೆದಿದೆ. ಆದ್ದರಿಂದ ದಾನಿಗಳು ಎಚ್ಚರ ವಹಿಸಬೇಕು’‍ ಎಂದು ಅವರು ಕೋರಿದರು.

‘ಕೊಡಗು ಜಿಲ್ಲೆಯ ಪುನರ್‌ರಚನೆಗಾಗಿ ಮೂರು ದಿನಗಳಲ್ಲಿ ಕೊಡವ ಸಮಾಜವು ವಿವಿಧ ಮೂಲಗಳಿಂದ ₹ 25 ಲಕ್ಷ ಹಣ ಸಂಗ್ರಹಿಸಿದೆ. ವಸಂತನಗರದ ಕೊಡವ ಸಮಾಜ ಕಟ್ಟಡದಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ‘ಕೊಡವ ಸಮಾಜ ಫ್ಲಡ್‌ ರಿಲೀಫ್‌ ಫಂಡ್‌’ ಹೆಸರಿನಲ್ಲಿ ಖಾತೆ ಸಂಖ್ಯೆ 137010101084312 (ಐಎಫ್‌ಎಸ್‌ಸಿ ಕೋಡ್‌ 0001370) ತೆರೆಯಲಾಗಿದೆ. ಇಲ್ಲಿಗೆ ಹಣ ಪಾವತಿಸಬಹುದು. ಯಾವುದೇ ದುರುಪಯೋಗಕ್ಕೆ ಅವಕಾಶವಿಲ್ಲದಂತೆ ಪರಿಹಾರ ಕಾರ್ಯಕ್ಕೆ ಬಳಸಲಾಗುವುದು’ ಎಂದು ಅವರು ತಿಳಿಸಿದರು.

‘ಪರಿಹಾರ ಸಾಮಗ್ರಿ ಸಂಗ್ರಹಕ್ಕೆ ಬೆಂಗಳೂರಿನ ನಾಗರಿಕರು ಉದಾರವಾಗಿ ಸ್ಪಂದಿಸಿದ್ದಾರೆ. ಆಹಾರ ಸಾಮಗ್ರಿ, ಔಷಧ, ಬಟ್ಟೆ ಇತ್ಯಾದಿ ಪರಿಕರಗಳನ್ನು ಸಂಗ್ರಹಿಸಿ 45 ಟ್ರಕ್‌ಗಳ ಮೂಲಕ ಮಡಿಕೇರಿಗೆ ಕಳುಹಿಸಲಾಗಿದೆ. ಅಲ್ಲಿ ಕೊಡವ ಸಮಾಜದ ಸ್ವಯಂ ಸೇವಕರು ಅವುಗಳನ್ನು ಸಂತ್ರಸ್ತರಿಗೆ ತಲುಪಿಸಲಿದ್ದಾರೆ’ ಎಂದು ತಿಳಿಸಿದರು.

ಸಂತ್ರಸ್ತರಾದ ಸೋಮವಾರಪೇಟೆ ತಾಲ್ಲೂಕು ಸೂರಲಬ್ಬಿ ಗ್ರಾಮದ ಮುತ್ತಮ್ಮ ಅವರು ಕೊಡಗಿನ ಪರಿಸ್ಥಿತಿಯನ್ನು ವಿವರಿಸಿದರು. ‘ನನ್ನ ಅಕ್ಕ ಉಮ್ಮವ್ವ ಅವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇನ್ನೂ ಪತ್ತೆಯಾಗಿಲ್ಲ ಎಂದು ದುಃಖ ವ್ಯಕ್ತಪಡಿಸಿದರು. ಪುತ್ರಿಯೊಂದಿಗೆ ಬಂದು ಕೆಂಗೇರಿಯ ತಮ್ಮ ಸಹೋದರಿಯ ಮನೆಯಲ್ಲಿದ್ದೇನೆ. ಅಳಿಯ ಪರಿಹಾರ ಕೇಂದ್ರದಲ್ಲಿ ಉಳಿದುಕೊಂಡಿದ್ದಾರೆ’ ಎಂದು ವಿವರಿಸಿದರು.

ದುರಂತಕ್ಕೆ ಕೊಡಗಿನಲ್ಲಿ ಪರಿಸರದ ಮೇಲಾದ ದಾಳಿಯೇ ಕಾರಣ ಎಂದು ಸಮಾಜದ ಹಿರಿಯ ಪದಾಧಿಕಾರಿಗಳು ಒಪ್ಪಿಕೊಂಡರು. ‘ನಾವು ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದರೂ ಅದನ್ನು ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಮುಕ್ತವಾಗಿ ಹೇಳಿಕೊಳ್ಳಲಾಗದ ಇಕ್ಕಟ್ಟಿನಲ್ಲಿದ್ದೇವೆ. ಈಗ ಪ್ರಕೃತಿಯೇ ತೋರಿಸಿಕೊಟ್ಟಿದೆ. ಇಡೀ ಕೊಡಗು ವಿರೋಧ ವ್ಯಕ್ತಪಡಿಸಿದರೂ ಹೈಟೆನ್ಷನ್‌ ವಿದ್ಯುತ್‌ ಮಾರ್ಗಕ್ಕಾಗಿ 60 ಸಾವಿರ ಹೆಮ್ಮರಗಳನ್ನು ಕಡಿದುಹಾಕಲಾಯಿತು. ಬೆಟ್ಟಗುಡ್ಡಗಳ ತುದಿಯಲ್ಲಿ ರೆಸಾರ್ಟ್‌ಗಳು ಎದ್ದವು. ಇದರ ಹಿಂದೆ ಪ್ರವಾಸೋದ್ಯಮ ಮತ್ತು ಟಿಂಬರ್‌ ಲಾಬಿ ಹಾಗೂ ರಾಜಕಾರಣಿಗಳ ಹಸ್ತಕ್ಷೇಪ ಕೆಲಸ ಮಾಡಿದೆ’ ಎಂದು ಸಮಾಜದ ಕಟ್ಟಡ ಸಮಿತಿ ಅಧ್ಯಕ್ಷ ನಂಜಪ್ಪ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT