ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೀವಜಲ’ ನೀಡುವ ವೈದ್ಯ ದಂಪತಿ: ನಿತ್ಯ 7–8 ಟ್ಯಾಂಕರ್‌ ನೀರು ಉಚಿತ ಸರಬರಾಜು

Published 8 ಏಪ್ರಿಲ್ 2024, 0:30 IST
Last Updated 8 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಬಳ್ಳಾರಿ: ಗುಟುಕು ನೀರಿಗೂ ಪರದಾಟ ಎದುರಾಗಿರುವ ಈ ಹೊತ್ತಿನಲ್ಲಿ ಬಳ್ಳಾರಿಯ ವೈದ್ಯ ದಂಪತಿ ಜನರ ಕಷ್ಟಕ್ಕೆ ಸ್ಪಂದಿಸುವ ‘ಪ್ರಯತ್ನ’ ಮಾಡಿದ್ದಾರೆ.  ರೋಗಿಗಳ ತಪಾಸಣೆ ಮಾಡಿ ಔಷಧಿ ಕೊಡುವುದಷ್ಟೇ ಅಲ್ಲ, ನಗರ ವ್ಯಾಪ್ತಿಯಲ್ಲಿ ತೀರ ಸಮಸ್ಯೆ ಇರುವ ಪ್ರದೇಶಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ನೀರು ಪೂರೈಸುತ್ತಿದ್ದಾರೆ. ಅದು ಕೂಡ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿ ಕುಡಿಯಲು ಯೋಗ್ಯವಾದ ನೀರನ್ನೇ ಸರಬರಾಜು ಮಾಡುತ್ತಿದ್ದು ದಂಪತಿಯ ಈ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.  

ಮೂರು ದಶಕಗಳಿಂದ ಬಳ್ಳಾರಿಯಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿರುವ ಧರ್ಮರೆಡ್ಡಿ ದಂಪತಿ ತಮ್ಮ ‘ಪ್ರಯತ್ನ ಫೌಂಡೇಷನ್‌’ ಮೂಲಕ ಜನರಿಗೆ ನಿತ್ಯ 7–8 ಟ್ಯಾಂಕರ್‌ಗಳ ನೀರನ್ನು ಉಚಿತವಾಗಿ ಸರಬರಾಜು ಮಾಡುತ್ತಿದ್ದಾರೆ. ಧರ್ಮರೆಡ್ಡಿ ಅವರು ಗ್ಯಾಸ್ಟ್ರೋಎಂಟರಾಲಜಿಸ್ಟ್ ಆಗಿದ್ದರೆ, ಶೋಭಾ ಅವರು ನೇತ್ರ ತಜ್ಞೆ. 

ತಮ್ಮ ಬಳಿ ಚಿಕಿತ್ಸೆಗೆ ಬರುತ್ತಿದ್ದ ಜನ ನೀರಿನ ಸಮಸ್ಯೆ ಬಗ್ಗೆ ನೋವು ತೋಡಿಕೊಳ್ಳುತ್ತಿದ್ದರು.  ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ ದಂಪತಿ, ತಾವೇ ಸ್ವತಃ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ನಿರ್ಧರಿಸಿದರು. ಇದಕ್ಕಾಗಿ ಅವರು ಟ್ಯಾಂಕರ್‌ ಮಾಲೀಕರೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ. ಬೇಸಿಗೆ ಮುಗಿದು, ನೀರಿನ ಅಭಾವ ನೀಗುವವರೆಗೆ ನೀರು ಪೂರೈಕೆ ಮುಂದುವರಿಸಲು ನಿರ್ಧರಿಸಿದ್ದಾರೆ.  

ಬಳ್ಳಾರಿಯ ಕೊಳೆಗೇರಿಗಳು, ಅಲೆಮಾರಿಗಳ ಟೆಂಟ್‌ಗಳು, ಅಹಂಬಾವಿ ಕಾಲುವೆ ಪಕ್ಕದ ಮನೆಗಳು, ಸುಧಾ ಕ್ರಾಸ್‌, ಫಸ್ಟ್‌ ಗೇಟ್‌, ಕೌಲ್‌ ಬಜಾರ್‌, ಬಸವನಕುಂಟೆ, ಅಂಬೇಡ್ಕರ್‌ ಶಾಲೆ ಪ್ರದೇಶ, ಅನಂತಪುರ ರಸ್ತೆಯ ಮನೆಗಳು, ಕೋಟೆ ಪ್ರದೇಶದ ಓಣಿಗಳಲ್ಲಿ ನೀರಿಗೆ ತತ್ವಾರವಿದ್ದು, ಅಲ್ಲಿಗೆ ಫೌಂಡೇಷನ್‌ ಮೂಲಕ ನೀರು ಪೂರೈಸಲಾಗುತ್ತಿದೆ. ‘ನಿಗದಿತ ಸಮಯಕ್ಕೆ ನಾವೇ ನೀರು ಪೂರೈಕೆ ಮಾಡುತ್ತೇವೆ, ಒಮ್ಮೊಮ್ಮೆ ನಾಗರಿಕರೇ ಕರೆ ಮಾಡಿ ನೀರಿಗೆ ಮನವಿ ಮಾಡುತ್ತಾರೆ’ ಎನ್ನುತ್ತಾರೆ ಈ ಕಾರ್ಯದ ಉಸ್ತುವಾರಿ ವಹಿಸಿರುವ ಸದ್ದಾಂ. 

ವೈದ್ಯ ದಂಪತಿಯ ಈ ಕಾರ್ಯವನ್ನು ಜನರು ಕೊಂಡಾಡುತ್ತಿದ್ದಾರೆ. ‘ನಾವು ಅಲೆಮಾರಿಗಳು. ರಸ್ತೆ ಬದಿಯಲ್ಲೇ ನಮ್ಮ ಜೀವನ. ನಮಗೆ ನೀರಿನ ಸಂಪರ್ಕಗಳಿಲ್ಲ. ಹೀಗಾಗಿ ಕಿಲೋಮೀಟರ್‌ ದೂರದಿಂದ ನೀರು ಹೊತ್ತುತರಬೇಕು. ಈಗ ಇವರಿಂದಾಗಿ (ವೈದ್ಯ ದಂಪತಿ) ನಮಗೆ ನೆಮ್ಮದಿ ಇಕ್ಕಿದೆ‘ ಎನ್ನುತ್ತಾರೆ ಹೊಸಪೇಟೆ ರಸ್ತೆ ಬದಿಯಲ್ಲಿ ಗುಡಿಸಲು ಕಟ್ಟಿಕೊಂಡಿರುವ ರಾಜಾಸಾಬ್‌.  

ಪರೀಕ್ಷೆ ಮಾಡಿಸಿ ನೀರು ಪೂರೈಕೆ

ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಸಿಗುವ ಅಂತರ್ಜಲ ಅತ್ಯಂತ ಗಡುಸಾಗಿದ್ದು ಬಳಸಲು ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ಆದರೆ ಕುಡಿಯಲು ಯೋಗ್ಯವಾದ ನೀರನ್ನೇ ಪೂರೈಕೆ ಮಾಡಬೇಕೆಂದು ನಿರ್ಧರಿಸಿದ ವೈದ್ಯ ದಂಪತಿ ನೀರಿನ ಮಾದರಿಗಳನ್ನು ಲ್ಯಾಬ್‌ಗೆ ಕಳುಹಿಸಿ ಪರೀಕ್ಷೆ ಮಾಡಿಸಿದ ಬಳಿಕ ಯೋಗ್ಯ ಎಂದು ವರದಿ ಬಂದ ನೀರನ್ನೇ ಜನರಿಗೆ ಪೂರೈಸುತ್ತಿದ್ದಾರೆ. ಜಾನುವಾರುಗಳಿಗೂ ನೀರು: ಪಶು ಪಕ್ಷಿಗಳ ನೀರಿನ ಮೂಲವಾದ ಹಳ್ಳಕೊಳ್ಳಗಳಲ್ಲೂ ಈ ಬಾರಿ ನೀರಿಲ್ಲ. ಹೀಗಾಗಿ ಕಲುಷಿತ ನೀರಿಗೆ ಅವು ಬಾಯಿ ಇಡುತ್ತಿವೆ. ಇದಕ್ಕೂ ಪರಿಹಾರ ಹುಡುಕಿರುವ ವೈದ್ಯ ದಂಪತಿ ನಗರದ 20 ಕಡೆ ನೀರಿನ ತೊಟ್ಟಿಗಳನ್ನು ಇಟ್ಟಿದ್ದಾರೆ. ಇನ್ನೂ 20 ತೊಟ್ಟಿಗಳನ್ನು ಇಡುವುದಾಗಿ ತಿಳಿಸಿದ್ದಾರೆ. 

ಡಾ.ಧರ್ಮರೆಡ್ಡಿ
ಡಾ.ಧರ್ಮರೆಡ್ಡಿ
ಡಾ. ಶೋಭಾ 
ಡಾ. ಶೋಭಾ 
ನೀರಿನ ತೊಂದರೆ ಬಗ್ಗೆ ಜನ ಹೇಳುತ್ತಿದ್ದರು. ಸಮಸ್ಯೆ ಪರಿಹಾರಕ್ಕೆ ನಮ್ಮ ಕೈಯಲ್ಲಿ ಸಾಧ್ಯವಾದದ್ದನ್ನು ಮಾಡಲು ನಿರ್ಧರಿಸಿದೆವು. ನೀರು ಪೂರೈಸುವ ನಿರ್ಧಾರವನ್ನು ನಾನು ಮತ್ತು ನನ್ನ ಪತ್ನಿ ಇಬ್ಬರೂ ಸೇರಿ ಕೈಗೊಂಡೆವು  
–ಧರ್ಮರೆಡ್ಡಿ, ವೈದ್ಯ 
ಪರೀಕ್ಷೆ ಮಾಡಿ ಕುಡಿಯಲು ಯೋಗ್ಯ ಎನಿಸಿದ ನೀರನ್ನೇ ನಾವು ಜನರಿಗೆ ನೀಡುತ್ತಿದ್ದೇವೆ. ಉಪಯೋಗವಾಗುವುದನ್ನು ನೀಡಿದರಷ್ಟೇ ಅದು ನೆರವು. ಸಮಾಜಕ್ಕೆ ನಮ್ಮಿಂದ ಇದು ಅಳಿಲು ಸೇವೆ
–ಶೋಭಾ, ವೈದ್ಯೆ 
ಅಗತ್ಯವಿರುವ ಸಮಯಕ್ಕೆ ಸರಿಯಾಗಿ ಟ್ಯಾಂಕರ್‌ ನೀರು ಬರುತ್ತದೆ. ನೀರಿನ ಸಮಸ್ಯೆ ಸದ್ಯ ದೂರವಾಗಿದೆ. ಡಾಕ್ಟ್ರು ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ
–ಈರಮ್ಮ, ಇಂದಿರಾ ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT