ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಸಿಎಂ ಜೊತೆ ಎತ್ತಿನಹೊಳೆ ಚರ್ಚೆ, ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ: ಪರಮೇಶ್ವರ

ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ: ಜಿ. ಪರಮೇಶ್ವರ
Published : 1 ಅಕ್ಟೋಬರ್ 2024, 16:05 IST
Last Updated : 1 ಅಕ್ಟೋಬರ್ 2024, 16:05 IST
ಫಾಲೋ ಮಾಡಿ
Comments

ಬೆಂಗಳೂರು: ‘ಎತ್ತಿನಹೊಳೆ ಯೋಜನೆ ಅನುಷ್ಠಾನ ನಿಧಾನಗತಿಯಲ್ಲಿ ಸಾಗುತ್ತಿದ್ದು, ಈ ವಿಚಾರವಾಗಿ ಚರ್ಚಿಸಲು ಜಲಸಂಪನ್ಮೂಲ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನನ್ನ ಮನೆಗೆ ಬಂದಿದ್ದರು.‌ ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿ ಡಿ.ಕೆ. ಶಿವಕುಮಾರ್ ಜೊತೆ ಕೆಲಹೊತ್ತು ಚರ್ಚಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪರಮೇಶ್ವರ, ‘ಎತ್ತಿನ ಹೊಳೆ ಯೋಜನೆಯ ಹಣ ಬಿಡುಗಡೆ ಆಗಬೇಕಿದೆ. ದೊಡ್ಡಬಳ್ಳಾಪುರ ತಾಲ್ಲೂಕಿ ನಲ್ಲಿ ನೀರು ಸಂಗ್ರಹಕ್ಕೆ ಐದು ಸಾವಿರ ಎಕರೆ ಭೂಮಿ ಪ್ರಸ್ತಾಪಿಸಲಾಗಿತ್ತು. ಅದರಲ್ಲಿ 2,500 ಎಕರೆ ಭೂಮಿ ನನ್ನ ಕ್ಷೇತ್ರ (ಕೊರಟಗೆರೆ) ವ್ಯಾಪ್ತಿಗೆ ಬರುತ್ತದೆ. ಈ ಬಗ್ಗೆ ಚರ್ಚೆ ನಡೆಸಿದ್ದೇವೆ’ ಎಂದರು.

‘ಗುಬ್ಬಿಯಿಂದ‌ ಕುಣಿಗಲ್‌ವರೆಗೆ ಎಕ್ಸ್‌ಪ್ರೆಸ್ ಕಾಲುವೆ ಮಾಡಲು ಅನುಮತಿ ಸಿಕ್ಕಿದೆ.‌ ಕೆಲಸ‌ ಆರಂಭಿಸುವಾಗ ಸ್ಥಳೀಯರು ಅಡ್ಡಿಪಡಿಸಿದ್ದಾರೆ. ಈ ಬಗ್ಗೆ ಯೂ ಚರ್ಚಿಸಿದ್ದೇವೆ. ಡಿ.ಕೆ. ಶಿವಕುಮಾರ್ ಅವರು ತಾಂತ್ರಿಕ ಸಮಿತಿ ರಚಿಸಿದ್ದು, ಈ ಸಮಿತಿ ವರದಿ ಕೊಟ್ಟ ಬಳಿಕ ಈ ಕೆಲಸ ಮುಂದುವರಿಯಲಿದೆ’
ಎಂದರು.

‘2025ಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು’

‘ತುಮಕೂರಿಗೆ 2025ರ ವೇಳೆಗೆ ಎತ್ತಿನಹೊಳೆ ನೀರು ಹರಿಸಲು ಪ್ರಯತ್ನಿಸಲಾಗುವುದು. ಯೋಜನೆಗೆ ತುಮಕೂರು ಮತ್ತು ಹಾಸನ ಜಿಲ್ಲೆಯಲ್ಲಿ ಅರಣ್ಯ ಭೂಮಿ ಗುರುತಿಸಲಾಗಿದ್ದು ಅದನ್ನು ನೀರಾವರಿ ಇಲಾಖೆಗೆ ಹಸ್ತಾಂತರಿಸಬೇಕಿದೆ. ಈ ವಿಚಾರವಾಗಿ ಪ್ರತ್ಯೇಕ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಅರಣ್ಯ ಸಚಿವರ ಜೊತೆಗೂ ಸಮಾಲೋಚನೆ ನಡೆಸಲಾಗುವುದು’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.‌ ‘ಕೊರಟಗೆರೆ ಬಳಿ ಬೈರಗೊಂಡ್ಲು ಜಲಾಶಯದ ನಿರ್ಮಾಣ ಯೋಜನೆಯನ್ನು ಬಿಜೆಪಿ ಅವಧಿಯಲ್ಲಿ ಬದಲಿಸಲಾಗಿತ್ತು. ಈ ಕಾರಣಕ್ಕೆ ಸ್ಥಳ ವೀಕ್ಷಣೆ ಮಾಡಬೇಕಿದೆ. ಇಲ್ಲಿ ದೊಡ್ಡಬಳ್ಳಾಪುರದ ಸ್ವಲ್ಪ ಭಾಗವೂ ಸೇರಿಕೊಳ್ಳುತ್ತದೆ. ಇಲ್ಲಿ ಪರಿಹಾರ ವಿಚಾರದಲ್ಲಿ ವ್ಯಾಜ್ಯಗಳಿವೆ. ರೈತರು ಒಂದೇ ರೀತಿಯ ಪರಿಹಾರ ಕೊಡುವಂತೆ ಆಗ್ರಹಿಸಿದ್ದಾರೆ. ದಸರಾ ನಂತರ ಎತ್ತಿನಹೊಳೆ ಯಿಂದ ಬೈರಗೊಂಡ್ಲುವರೆಗೂ ಸ್ಥಳ ವೀಕ್ಷಣೆ ನಡೆಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT