ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಆರ್ಥಿಕ ‘ಹೊರೆ’: ‘ನಿವೃತ್ತ’ರಿಗೆ ಕೊಕ್

370ಕ್ಕೂ ಹೆಚ್ಚು ಅಧಿಕಾರಿ, ನೌಕರರನ್ನು ಕೈಬಿಡಲು ಸಿಎಸ್ ಸೂಚನೆ
Published 16 ಜೂನ್ 2024, 23:30 IST
Last Updated 16 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಆರ್ಥಿಕ ‘ಹೊರೆ’ ಆಗಿರುವ, ಗುತ್ತಿಗೆ– ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 370ಕ್ಕೂ ಹೆಚ್ಚು ನಿವೃತ್ತ ಸರ್ಕಾರಿ ಅಧಿಕಾರಿ, ನೌಕರರನ್ನು ತಕ್ಷಣದಿಂದಲೇ ಕೆಲಸದಿಂದ ಬಿಡುಗಡೆ ಮಾಡುವಂತೆ 20 ಇಲಾಖೆಗಳ ಮುಖ್ಯಸ್ಥರಿಗೆ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಸೂಚನೆ ನೀಡಿದ್ದಾರೆ.

ಈ ಇಲಾಖೆಗಳು ಮತ್ತು ಅವುಗಳ ಅಧೀನದಲ್ಲಿರುವ ನಿಗಮ, ಮಂಡಳಿ, ಪ್ರಾಧಿಕಾರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಸರ್ಕಾರಿ ಅಧಿಕಾರಿ, ನೌಕರರ ಪಟ್ಟಿಯ ಸಹಿತ ಟಿಪ್ಪಣಿ ಮೂಲಕ ಅವರು ಈ ನಿರ್ದೇಶನ ನೀಡಿದ್ದಾರೆ.

ಅಲ್ಲದೆ, ನಿವೃತ್ತ ಅಧಿಕಾರಿ, ನೌಕರರನ್ನು ಬಿಡುಗಡೆಗೊಳಿಸಲು ತೆಗೆದುಕೊಂಡ ಕ್ರಮದ ವರದಿಯನ್ನು ಕೂಡಲೇ ತಮ್ಮ ಕಚೇರಿಗೆ ಸಲ್ಲಿಸಬೇಕು ಎಂದಿದ್ದಾರೆ. ಈ ಪಟ್ಟಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ನಿವೃತ್ತರನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಆ ಹುದ್ದೆಗಳಿಗೆ ಹಾಲಿ ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿ, ನೌಕರರನ್ನು ನಿಯೋಜಿಸಲು ಕ್ರಮ ಕೈಗೊಂಡು ತಮ್ಮ ಕಚೇರಿಗೆ ವರದಿ ಸಲ್ಲಿಸುವಂತೆ ಜನವರಿ  9ರಂದು ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದರು. ಈ ಸೂಚನೆಯನ್ನು ಉಲ್ಲೇಖಿಸಿ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಜನವರಿ 23 ಮತ್ತು ಫೆಬ್ರುವರಿ 22ರಂದು ಮುಖ್ಯ ಕಾರ್ಯದರ್ಶಿ ಟಿಪ್ಪಣಿ ಕಳುಹಿಸಿದ್ದರು.

ಆದರೆ, ಬಹುತೇಕ ಇಲಾಖೆಗಳು ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಲ್ಲದೆ, ಈ ಸೂಚನೆಯನ್ನು ಉಲ್ಲಂಘಿಸಿ ನಿವೃತ್ತ ಅಧಿಕಾರಿ, ನೌಕರರನ್ನು ಹೊಸತಾಗಿ ನೇಮಿಸಿಕೊಂಡಿವೆ. ಈ ಕಾರಣದಿಂದ ಮುಖ್ಯ ಕಾರ್ಯದರ್ಶಿ ಸ್ಪಷ್ಟ ಸೂಚನೆ ನೀಡಿದ್ದಾರೆ.

ಯಾರೆಲ್ಲ ಇದ್ದಾರೆ: ನಿವೃತ್ತ ಐಎಎಸ್‌, ಐಎಫ್‌ಎಸ್‌, ಕೆಎಎಸ್‌ ಅಧಿಕಾರಿಗಳು, ವಿಶ್ರಾಂತ ಕುಲಪತಿ, ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು, ಹಣಕಾಸು ಅಧಿಕಾರಿಗಳು, ವೈದ್ಯರು– ಗುತ್ತಿಗೆ, ಹೊರ ಗುತ್ತಿಗೆ ಆಧಾರದಲ್ಲಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ತಿಂಗಳಿಗೆ ₹2 ಲಕ್ಷಕ್ಕೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಈ ಪೈಕಿ, ಕೆಲವರು ಕಾನೂನು, ಆರ್ಥಿಕ, ತಾಂತ್ರಿಕ ಸಲಹೆಗಾರರಾಗಿ, ಸಮಾಲೋಚಕರಾಗಿ ಕೆಲಸ ಮಾಡುತ್ತಿದ್ದಾರೆ.

ಕೆಲವರಿಗೆ ವಾಹನ ಸೌಲಭ್ಯ ಮಾತ್ರ ನೀಡಿದ್ದರೆ, ಇನ್ನೂ ಕೆಲವರಿಗೆ ಹವಾ ನಿಯಂತ್ರಿತ ವಾಹನ ಸೌಲಭ್ಯದ ಜೊತೆಗೆ ಡಾಟಾ ಎಂಟ್ರಿ ಆಪರೇಟರ್‌, ಆಪ್ತ ಕಾರ್ಯದರ್ಶಿ, ಆಪ್ತ ಸಹಾಯಕ ಸಿಬ್ಬಂದಿಯನ್ನೂ ನೀಡಲಾಗಿದೆ. ದೂರವಾಣಿ ಸೌಲಭ್ಯ, ಇಂಟರ್‌ನೆಟ್‌ ಸೌಲಭ್ಯವೂ ಇದೆ. ಕೆಲವರಿಗೆ ಸರ್ಕಾರಿ, ಇನ್ನೂ ಕೆಲವರಿಗೆ ಬಾಡಿಗೆ ವಾಹನ ನೀಡಲಾಗಿದೆ. ಕೆಲವರಿಗೆ ಚಾಲಕರನ್ನು ನೇಮಿಸಿಕೊಳ್ಳಲು ಪ್ರತ್ಯೇಕ ಭತ್ಯೆ ನೀಡಲಾಗಿದೆ. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಮುಖ್ಯ ಎಂಜಿನಿಯರ್‌ಗಳು ಪಡೆಯುತ್ತಿರುವ ಸೌಲಭ್ಯಗಳಿಗೆ ಸಮನಾದ ಸೌಲಭ್ಯ ‍ಪಡೆಯುತ್ತಿರುವವರೂ ಇದ್ದಾರೆ.

‘ವಾರ್ಷಿಕ’ ಸಂಭಾವನೆ: ವಾರ್ಷಿಕ ಸಂಭಾವನೆ ನಿಗದಿಪಡಿಸಿ ಕೆಲವರನ್ನು ನೇಮಿಸಿಕೊಳ್ಳಲಾಗಿದೆ. ಬೆಸ್ಕಾಂನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎಚ್‌.ಪಿ ಕಿಂಚ ಅವರು ಎಂಟು ವರ್ಷಗಳಿಂದ ಇದ್ದಾರೆ. 78 ವರ್ಷ ವಯಸ್ಸಿನ ಅವರಿಗೆ ವಾರ್ಷಿಕ ₹5 ಲಕ್ಷ ನಿಗದಿಯಾಗಿದೆ. ಕಾರಾಗೃಹ ಮತ್ತು ಸುಧಾರಣಾ ಇಲಾಖೆಯಲ್ಲಿರುವ ಮಹದೇವ ಪ್ರಸಾದ್ ಅವರಿಗೆ ವರ್ಷಕ್ಕೆ ₹4,74,500 ವೇತನವಿದೆ.

ಕೆಲವೆಡೆ ‘ನಿವೃತ್ತ’ರದ್ದೇ ಸಿಂಹಪಾಲು: ಕೆಐಎಡಿಬಿಯ ಬೆಂಗಳೂರು ಕೇಂದ್ರ ಕಚೇರಿ, ತುಮಕೂರು, ಬೆಳಗಾವಿ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಮೈಸೂರು, ಮಂಗಳೂರು ಕಚೇರಿಯಲ್ಲಿ 42 ಮಂದಿ ನಿವೃತ್ತರಿದ್ದಾರೆ. ಎಂಎಸ್‌ಐಎಲ್‌ನಲ್ಲಿ 41, ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ 31 ಮಂದಿ ಇದ್ದಾರೆ.

ಪುನರ್ವಸತಿ ಕಲ್ಪಿಸಲು ಹುದ್ದೆ ಸೃಜನೆ: ‘ಕೆಲವು ಇಲಾಖೆಗಳಲ್ಲಿ ಮತ್ತು ಸಚಿವಾಲಯದಲ್ಲಿ ಅನಗತ್ಯವಾಗಿ ಹುದ್ದೆಗಳನ್ನು ಸೃಜಿಸಿ, ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಅಧಿಕಾರಿ, ನೌಕರರನ್ನು ಸಮಾಲೋಚಕರು, ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ನೇಮಿಸಿಕೊಳ್ಳಲಾಗಿದೆ. ಹೀಗೆ ನೇಮಕಗೊಂಡವರಿಗೆ ವೇತನ, ವಾಹನ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ವಯೋ‘ಮಿತಿ’ಯ ನಿರ್ಬಂಧ ಇಲ್ಲ

ಕೆಲವು ಇಲಾಖೆಗಳಲ್ಲಿ ನಿವೃತ್ತಿ ನಂತರದಿಂದಲೇ, ಸುಮಾರು 18–20 ವರ್ಷಗಳಿಂದಲೂ ಕೆಲಸ ಮಾಡುವವರೂ ಇದ್ದಾರೆ. 70 ವರ್ಷ ವಯಸ್ಸು ದಾಟಿದವರು 40ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಪಟ್ಟಿಯಲ್ಲಿ ಇರುವವರ ಪೈಕಿ, ಉಪ ಮುಖ್ಯಮಂತ್ರಿ ಕಚೇರಿಯಲ್ಲಿ ವಿದ್ಯುತ್‌ ಸಲಹೆಗಾರ ಆಗಿರುವ ಬಿ. ಮುನಿಲಿಂಗೇಗೌಡ ಅವರಿಗೆ 82 ವರ್ಷ ವಯಸ್ಸು. ಇನ್ನು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿರುವ ದ್ಯಾವಯ (79), ಕೆರೆ ಸಂರಕ್ಷಣಾ ಪ್ರಾಧಿಕಾರದಲ್ಲಿರುವ ಸಿ.ಎಸ್‌. ದೇಶಮುಖ್‌ (76), ತೋಟಗಾರಿಕೆ ಇಲಾಖೆಯಲ್ಲಿರುವ ಕೆ. ಆರ್‌ ರಾಮಮೂರ್ತಿ (75), ಬಿಬಿಎಂಪಿಯಲ್ಲಿರುವ ಕೆಂಚಯ್ಯ (76), ಕರ್ನಾಟಕ ನೀರಾವರಿ ನಿಗಮದಲ್ಲಿರುವ ಎಂ.ಸಿ. ರಂಗರಾಜನ್‌ (77), ಕಾವೇರಿ ನೀರಾವರಿ ನಿಗಮದಲ್ಲಿರುವ ಅಮರಪ್ಪ ಜಂಬಣ್ಣ ನಾಗಲೀಕರ (78), ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿರುವ ಮುನಿರಾಮಯ್ಯ ಶೆಟ್ಟಿ (75), ಎಂಎಸ್‌ಐಎಲ್‌ನಲ್ಲಿರುವ ಜ್ಯೋತಿಲಿಂಗಂ (76), ಗಂಗಾಧರ (76) ಹೀಗೆ 75 ವರ್ಷ ದಾಟಿದ ಹಲವರಿದ್ದಾರೆ.

ಪ್ರಧಾನ ಕಾರ್ಯದರ್ಶಿಯ ಸೌಲಭ್ಯ!

ನಿವೃತ್ತ ಐಎಎಸ್‌ ಅಧಿಕಾರಿ ಇ. ವೆಂಕಟಯ್ಯ ಅವರು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ‘ಪರಿಶಿಷ್ಟ ಜಾತಿಯವರ ಅಭಿವೃದ್ದಿಗಾಗಿ ವಿಶೇಷ ಘಟಕ ಯೋಜನೆ (ಎಸಿಎಸ್‌ಪಿ), ಬುಡಕಟ್ಟುಗಳ ಉಪ ಯೋಜನೆ’ಯ (ಟಿಎಸ್‌ಪಿ) ನೋಡಲ್‌ ಏಜೆನ್ಸಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. 69 ವರ್ಷ ವಯಸ್ಸಿನ ಅವರು, ಎಂಟು ವರ್ಷ ಆರು ತಿಂಗಳುಗಳಿಂದ ಕರ್ತವ್ಯ ಸಲ್ಲಿಸುತ್ತಿದ್ದಾರೆ. ವಿಕಾಸಸೌಧದಲ್ಲಿ ಪ್ರತ್ಯೇಕ ಕೊಠಡಿ ಹೊಂದಿರುವ ಅವರು ತಿಂಗಳಿಗೆ ₹ 1,15,735 ಸಂಭಾವನೆ ಪಡೆಯುತ್ತಿದ್ದು, ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT