ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರಣ್ಯ ಸಿಬ್ಬಂದಿಗೆ ‘ಕ್ಯಾಂಟೀನ್‌’: ಪ್ರಸ್ತಾವನೆ ನನೆಗುದಿಗೆ

Published : 6 ಸೆಪ್ಟೆಂಬರ್ 2024, 23:30 IST
Last Updated : 6 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ಅರಣ್ಯ ಇಲಾಖೆ ಸಿಬ್ಬಂದಿಗೆ ಪೊಲೀಸ್‌ ಮತ್ತು ಸೇನಾ ಕ್ಯಾಂಟೀನ್‌ ಮಾದರಿಯಲ್ಲೇ ರಿಯಾಯ್ತಿ ದರದಲ್ಲಿ ಅಗತ್ಯ ವಸ್ತುಗಳನ್ನು ಪೂರೈಸುವ ಕ್ಯಾಂಟೀನ್ ಸೌಲಭ್ಯ ಆರಂಭಿಸುವ ಕುರಿತ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ.

ಈ ಪ್ರಸ್ತಾವನೆಗೆ ತ್ವರಿತಗತಿಯಲ್ಲಿ ಒಪ್ಪಿಗೆ ನೀಡಿ ಸೌಲಭ್ಯವನ್ನು ಜಾರಿಗೊಳಿಸಬೇಕು ಎಂದು ಇಲಾಖೆ ಸಿಬ್ಬಂದಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಇಲಾಖೆಯ ಮುಂಚೂಣಿ ಸಿಬ್ಬಂದಿಗೆ ಕ್ಯಾಂಟೀನ್ ಸೌಲಭ್ಯ ಒದಗಿಸಬೇಕು. ಇದರಿಂದ ಕಡಿಮೆ ಆದಾಯ ಹೊಂದಿರುವ ಸಿಬ್ಬಂದಿಗೆ ಅನುಕೂಲವಾಗುತ್ತದೆ. ನೆರೆಯ ತಮಿಳುನಾಡಿನಲ್ಲಿ ಈ ವ್ಯವಸ್ಥೆ ಇದೆ’ ಎಂದು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಗಿರಿಧರ ಕುಲಕರ್ಣಿಯವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ) ಪತ್ರ ಬರೆದಿದ್ದರು. 

ಈ ‍ಪತ್ರವನ್ನು ಆಧರಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್‌ ದೀಕ್ಷಿತ್ ಅವರು ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಮುಂಚೂಣಿ ಸಿಬ್ಬಂದಿಗೆ ಕ್ಯಾಂಟೀನ್ ಸೌಲಭ್ಯದ ಅಗತ್ಯತೆಯನ್ನು ಪ್ರತಿಪಾದಿಸಿದ್ದರು. ಇದಕ್ಕೆ ಹಣಕಾಸು ಇಲಾಖೆ ಮತ್ತು ಗೃಹ ಇಲಾಖೆಯ ಒಪ್ಪಿಗೆ ಬಾಕಿ ಇದೆ.

'ಮುಂಚೂಣಿ ಸಿಬ್ಬಂದಿ ಅರಣ್ಯ ಇಲಾಖೆಯ ಬೆನ್ನೆಲುಬಾಗಿದ್ದು, ಅರಣ್ಯ ರಕ್ಷಣೆ, ವನ್ಯಪ್ರಾಣಿಗಳ ಸಂಘರ್ಷ ತಡೆ, ಕಳ್ಳಬೇಟೆ ನಿಗ್ರಹ, ಅರಣ್ಯ ಅತಿಕ್ರಮ ತಡೆ ಮತ್ತಿತರ ಮಹತ್ವದ ಕಾರ್ಯದಲ್ಲಿ ತೊಡಗಿರುತ್ತಾರೆ.  ಕಾಡಂಚಿನಲ್ಲಿ ಸಾಮಾನ್ಯ ಮತ್ತು ಅಗತ್ಯ ಸೌಲತ್ತುಗಳು ಇಲ್ಲದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಕ್ಯಾಂಟೀನ್ ಸೌಲಭ್ಯದ ಅಗತ್ಯತೆ ಇದೆ’ ಎಂದು ಬ್ರಿಜೇಶ್‌ ಕುಮಾರ್‌ ಹೇಳಿದ್ದರು.

‘ರಾಜ್ಯದಲ್ಲಿ ಪೊಲೀಸ್‌ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಕ್ಯಾಂಟೀನ್ ಮೂಲಕ ದಿನಸಿ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗೂ ಸೌಲಭ್ಯ ಕಲ್ಪಿಸಬೇಕು. ಒಂದು ವೇಳೆ ಪ್ರತ್ಯೇಕವಾಗಿ ಸ್ಥಾಪಿಸಲು ಸಾಧ್ಯವಾಗದಿದ್ದರೆ, ಪೋಲಿಸ್‌ ಕ್ಯಾಂಟೀನ್‌ ಮೂಲಕವೇ ಸೌಲಭ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಈ ಕುರಿತು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಗೃಹ ಇಲಾಖೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಯಬೇಕಿದೆ. ಅರಣ್ಯ ಇಲಾಖೆ ಸಚಿವರೂ ಇದರ ಪರವಾಗಿದ್ದಾರೆ. ಮುಖ್ಯಮಂತ್ರಿಯವರ ಮಟ್ಟದಲ್ಲಿ ತೀರ್ಮಾನ ಆಗಬೇಕಿದೆ’ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ತಮಿಳುನಾಡಿನಲ್ಲಿ ಪೊಲೀಸ್ ಇಲಾಖೆಯ ಮೂಲಕವೇ ಅರಣ್ಯ ಇಲಾಖೆ ಸಿಬ್ಬಂದಿಗೆ ಕ್ಯಾಂಟೀನ್‌ ಸೌಲಭ್ಯ ನೀಡಲಾಗುತ್ತಿದೆ. ರಾಜ್ಯದಲ್ಲೂ ಅದೇ ಮಾದರಿಯನ್ನು ಅನುಸರಿಸಬಹುದು. ಈ ಸೌಲಭ್ಯದಿಂದ ಸಿಬ್ಬಂದಿಯ ನೈತಿಕ ಸ್ಥೈರ್ಯ ಹೆಚ್ಚುವುದು, ವನ್ಯಜೀವಿ ಸಂರಕ್ಷಣೆ ಕಾರ್ಯ ಇನ್ನಷ್ಟು ಪರಿಣಾಮಕಾರಿ ಆಗಬಲ್ಲದು ಎಂದು ಗಿರಿಧರ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT