ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಹೆಚ್ಚುವರಿ ₹ 5 ಕೋಟಿ ಪ್ರಸ್ತಾವ ತಿರಸ್ಕೃತ

₹ 20 ಕೋಟಿಯಲ್ಲೇ ವೆಚ್ಚ ಭರಿಸಿ– ಆರ್ಥಿಕ ಇಲಾಖೆ
Published 23 ಜುಲೈ 2023, 20:10 IST
Last Updated 23 ಜುಲೈ 2023, 20:10 IST
ಅಕ್ಷರ ಗಾತ್ರ

ಬೆಂಗಳೂರು: ಹಾವೇರಿಯಲ್ಲಿ ಜ. 6ರಿಂದ 8ರ ವರೆಗೆ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವೆಚ್ಚವಾಗಿರುವ ಹೆಚ್ಚುವರಿ ₹ 5 ಕೋಟಿ ನೀಡಲು ರಾಜ್ಯ ಸರ್ಕಾರ ನಿರಾಕರಿಸಿದೆ.

ಸಮ್ಮೇಳನದ ವೆಚ್ಚಕ್ಕೆ ರಾಜ್ಯ ಸರ್ಕಾರ ಈಗಾಗಲೇ ₹ 20 ಕೋಟಿ ಅನುದಾನ ನೀಡಿದೆ. ಆ ಮೊತ್ತದಲ್ಲಿಯೇ ಸಮ್ಮೇಳನಕ್ಕೆ ಆಗಿರುವ ಎಲ್ಲ ವೆಚ್ಚವನ್ನು ಭರಿಸಬೇಕು. ಹೆಚ್ಚುವರಿ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ.

ಹೆಚ್ಚುವರಿ ಅನುದಾನ ಕೋರಿಕೆಯ ಪ್ರಸ್ತಾವವನ್ನು ತಿರಸ್ಕೃತಗೊಂಡಿರುವ ಕುರಿತು ಹಾವೇರಿ ಜಿಲ್ಲಾಡಳಿ
ತಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪತ್ರದ ಮುಖೇನ ಮಾಹಿತಿ ನೀಡಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಹಿತಿ ಬಂದಿರುವುದನ್ನು ‘ಪ್ರಜಾವಾಣಿ’ಗೆ ಖಚಿತಪಡಿಸಿದ ಹಾವೇರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಹೆಚ್ಚುವರಿ ವೆಚ್ಚವಾಗಿರುವ ಅನುದಾನ ಬಿಡುಗಡೆ ಮಾಡುವಂತೆ ಇಲಾಖೆಗೆ ಮತ್ತೊಮ್ಮೆ ಎಲ್ಲ ವಿವರಗಳ ಸಹಿತ ಪತ್ರ ಬರೆಯಲಾಗುವುದು ಎಂದರು.

‘ಸರ್ಕಾರ ನೀಡಿದ್ದ ₹ 20 ಕೋಟಿ ಅನುದಾನದ ಒಳಗೇ ಸಮ್ಮೇಳನದ ಖರ್ಚು ವೆಚ್ಚವನ್ನು ಭರಿಸಲು ಆರಂಭದಲ್ಲಿಯೇ ಅಂದಾಜಿಸಲಾಗಿತ್ತು. ಆದರೆ, ಸಮ್ಮೇಳನ ನಡೆದ ಮೂರೂ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದ ಕಾರಣ ಊಟದ ವೆಚ್ಚ ನಿರೀಕ್ಷೆಗೂ ಮೀರಿದೆ. ಹೀಗಾಗಿ, ಹೆಚ್ಚುವರಿಯಾಗಿ ಹಣ ವೆಚ್ಚವಾಗಿದೆ’ ಎಂದು ತಿಳಿಸಿದರು.

ಹೆಚ್ಚುವರಿ ₹ 5 ಕೋಟಿಗೆ ಸಲ್ಲಿಸಿದ್ದ ಪ್ರಸ್ತಾವದ ಕಡತ ವಾಪಸಾಗಿರುವ ಮಾಹಿತಿ ಬಂದಿದೆ. ಈ ಬಗ್ಗೆ ಮತ್ತೊಮ್ಮೆ ವಿವರವಾದ ಪ್ರಸ್ತಾವ ಸಲ್ಲಿಸಲಾಗುವುದು.
ರಘುನಂದನ ಮೂರ್ತಿ, ಜಿಲ್ಲಾಧಿಕಾರಿ, ಹಾವೇರಿ

‘ಈ ಹಿಂದಿನ ಸಮ್ಮೇಳನಗಳಿಗೆ ಮೊದಲ ಮತ್ತು ಕೊನೆಯ ದಿನ ತಲಾ ಒಂದೊಂದು ಲಕ್ಷ, ಎರಡನೇ ದಿನ 50 ಸಾವಿರದಿಂದ 60 ಸಾವಿರ,  ಹೀಗೆ ಸುಮಾರು 2.50 ಲಕ್ಷ ಜನರು ಬರುತ್ತಿದ್ದರು. ಆ ಅಂದಾಜಿನಲ್ಲಿ ವೆಚ್ಚ ಲೆಕ್ಕ ಹಾಕಿದ್ದೆವು. ಆದರೆ, ಈ ಸಮ್ಮೇಳನಕ್ಕೆ ಪ್ರತಿ ದಿನ ತಲಾ 2 ಲಕ್ಷ ಜನ ಬಂದಿದ್ದರು. ಸಮ್ಮೇಳನಗಳ ಇತಿಹಾಸದಲ್ಲಿಯೇ ಇಷ್ಟೊಂದು ಸಂಖ್ಯೆಯಲ್ಲಿ ಜನರು ಬಂದಿರಲಿಲ್ಲ. ಹೆಚ್ಚು ಜನರು ಬರುತ್ತಿರುವ ಬಗ್ಗೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಿವರಾಮ ಹೆಬ್ಬಾರ್‌ ಅವರ ಗಮನಕ್ಕೆ ತರಲಾಗಿತ್ತು. ಆಗ ಅವರು, ಭೋಜನ ವ್ಯವಸ್ಥೆಯಲ್ಲಿ ಯಾವುದೂ ಕಡಿಮೆ ಆಗದಂತೆ ನೋಡಿಕೊಳ್ಳಬೇಕು. ಹೆಚ್ಚುವರಿ ಅನುದಾನ ನೀಡುವಂತೆ ಆ ಮೇಲೆ ಕೇಳಬಹುದು ಎಂದಿದ್ದರು. ಮುಖ್ಯವಾಗಿ ಊಟದ ಬಿಲ್‌ ಜಾಸ್ತಿಯಾಗಿದೆ’ ಎಂದೂ ವಿವರಿಸಿದರು. 

‘ಸಮ್ಮೇಳನಕ್ಕೆ 20 ಸಾವಿರ ಜನರು ನೋಂದಣಿ ಮಾಡಿಕೊಳ್ಳಬಹುದು ಎನ್ನುವುದು ಸಾಹಿತ್ಯ ಪರಿಷತ್‌ ನಿರೀಕ್ಷೆಯಾಗಿತ್ತು. ಆ ಮೂಲಕ, ನೋಂದಣಿಯಿಂದ ₹ 1 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇತ್ತು. ಆದರೆ, 10 ಸಾವಿರ ಮಂದಿಯಷ್ಟೆ ನೋಂದಣಿ ಮಾಡಿಕೊಂಡಿದ್ದಾರೆ. ಹೀಗಾಗಿ ₹ 50 ಲಕ್ಷ ಕಡಿಮೆ ಆಯಿತು’ ಎಂದು ಹೇಳಿದರು.

ಭೋಜನ ವ್ಯವಸ್ಥೆಗೆ ₹ 8 ಕೋಟಿ ವೆಚ್ಚ!
‘ಭೋಜನ ವ್ಯವಸ್ಥೆಗೆ ₹ 4 ಕೋಟಿ ವೆಚ್ಚ ಅಂದಾಜಿಸಿದ್ದೆವು. ಅದು ₹ 8 ಕೋಟಿ ಆಗಿದೆ. ಅಲ್ಲದೆ, ಈ ಹಿಂದೆ ಸಮ್ಮೇಳನಗಳಿಗೆ ಅನುದಾನ ಹೊರತುಪಡಿಸಿ, ಆಯಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಸರ್ಕಾರದಿಂದ ಪ್ರತ್ಯೇಕವಾಗಿ ಹಣ ಕೊಡಲಾಗಿತ್ತು. ಆದರೆ, ಈ ಬಾರಿ ಹಣ ನೀಡದೇ ಇರುವುದರಿಂದ ಕೊನೆಕ್ಷಣದಲ್ಲಿ ಸರ್ಕಾರ ಸಮ್ಮೇಳನಕ್ಕೆ ಕೊಟ್ಟ ₹ 20 ಕೋಟಿಯಲ್ಲಿ ₹ 2 ಕೋಟಿಯನ್ನು ಜಿಲ್ಲಾ ಕಸಾಪಕ್ಕೆ ಕೊಡುವಂತೆ ಸೂಚನೆ ಬಂದಿತ್ತು. ಹೀಗಾಗಿ, ಕನ್ನಡ ಸಾಹಿತ್ಯ ಪರಿಷತ್‌ಗೆ ₹ 2 ಕೋಟಿ ನೀಡಲಾಗಿದೆ. ಸಮ್ಮೇಳನ ಮುಗಿದ‌ ನಂತರ ಇನ್ನೂ ₹ 60 ಲಕ್ಷ ಹೆಚ್ಚುವರಿಯಾಗಿ ಬೇಕೆಂದು ಕನ್ನಡ ಸಾಹಿತ್ಯ ಪರಿಷತ್‌ ಕೋರಿದೆ. ಹೆಚ್ಚುವರಿಯಾಗಿ ಕೇಳಿದ ₹ 5 ಕೋಟಿಯಲ್ಲಿ ಅನುದಾನದಲ್ಲಿ ಈ ₹ 60 ಲಕ್ಷ ಕೂಡಾ ಸೇರಿದೆ’ ಎಂದು ರಘುನಂದನ ಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT