ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಿಕಲ್ಲು ಮಳೆ: ನೆಲಕಚ್ಚಿದ ಮಾವು, ತೆಂಗು

ಸಿಡಿಲು ಬಡಿದು ಹಸು, ಕುರಿ, ಎತ್ತು ಸಾವು l ಧರೆಗುರುಳಿದ ಮರಗಳು l ಮನೆಗಳಿಗೆ ನುಗ್ಗಿದ ನೀರು
Published 22 ಮೇ 2023, 0:01 IST
Last Updated 22 ಮೇ 2023, 0:01 IST
ಅಕ್ಷರ ಗಾತ್ರ

ಬೆಂಗಳೂರು: ಕೆಲವು ದಿನಗಳಿಂದ ಭಾರಿ ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರಿಗೆ ರಾಜ್ಯದ ವಿವಿಧೆಡೆ ಭಾನುವಾರ ಸುರಿದ ಮಳೆ ತಂಪೆರೆದಿದೆ. ಮಳೆಯ ಜೊತೆಗೆ ಗುಡುಗು, ಸಿಡಿಲು ಮತ್ತು ಜೋರು ಗಾಳಿಯೂ ಇತ್ತು. ಅಲ್ಲಲ್ಲಿ ಆಲಿಕಲ್ಲುಗಳು ಬಿದ್ದಿವೆ. ಹೀಗಾಗಿ ಕೆಲವು ಕಡೆ ಬೆಳೆಗಳಿಗೂ ಹಾನಿಯಾಗಿದೆ. 

ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಆರ್ಭಟ ಜೋರಾಗಿತ್ತು. ಒಂದು ತಾಸಿಗೂ ಹೆಚ್ಚು ಮಳೆ ಸುರಿಯಿತು. ರೈತರು ಭೂಮಿ ಹದ ಮಾಡಿಕೊಳ್ಳಲು ಮುಂದಾಗಿದ್ದಾರೆ.  ‌

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ವಿಠಲಾಪುರ ಗ್ರಾಮದ ಹೊಲದಲ್ಲಿ ಮೇಯುತ್ತಿದ್ದ ಎರಡು ಹಸು ಸಿಡಿಲು ಬಡಿದು ಮೃತಪಟ್ಟಿವೆ. ಮಾಗಡಿ ತಾಲ್ಲೂಕಿನ ಗುಡ್ಡಹಳ್ಳಿಯಲ್ಲಿ
ಮನೆಯೊಂದರ ಮೇಲೆ ದೊಡ್ಡ ಮರವೊಂದು ಬುಡ ಸಮೇತ ಬಿದ್ದಿದೆ. ಮಾವು, ಅಡಿಕೆ, ತೆಂಗಿನ ಮರಗಳು ನೆಲ ಕಚ್ಚಿವೆ. ತಿಪಟೂರು ತಾಲ್ಲೂಕಿನ ನೊಣವಿನಕೆರೆಯಲ್ಲಿ
ದೊಡ್ಡ ಮರದ ಕೊಂಬೆ ಹಾಲಿನ ವಾಹನದ ಮೇಲೆ ಬಿದ್ದಿದೆ. ಪ್ರಾಣ ಹಾನಿ ಸಂಭವಿಸಿಲ್ಲ.

ಕೋಲಾರ ಮತ್ತು ರಾಮನಗರ ಜಿಲ್ಲೆಯಲ್ಲಿ ಕೊಯ್ಲಿಗೆ ಬಂದಿದ್ದ ಸಾವಿರಾರು ಮಾವಿನ ಕಾಯಿಗಳು ಉದುರಿದ್ದು, ತುಮಕೂರು ಜಿಲ್ಲೆಯಲ್ಲಿ ಅಡಿಕೆ ಹರಳು ಉದುರುವ ಆತಂಕ ಎದುರಾಗಿದೆ. ಹಿಪ್ಪುನೇರಳೆ ಸೊಪ್ಪು, ಟೊಮೆಟೊ, ತರಕಾರಿ, ದಾಳಿಂಬೆ ಬೆಳೆಗೆ ಅಪಾರ ಹಾನಿಯಾಗಿದೆ. ವಿದ್ಯುತ್‌ ಕಂಬ, ದೊಡ್ಡ ಮರಗಳು ಬುಡಮೇಲಾಗಿವೆ. 

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಅಪ್ಪೇನಹಳ್ಳಿ ಬಳಿ ದೇವರಹಟ್ಟಿ ಚಂದ್ರಪ್ಪ ಎಂಬುವವರಿಗೆ ಸೇರಿದ ಮೂರು ಕುರಿಗಳು ಸಿಡಿಲಿಗೆ ಮೃತಪಟ್ಟಿವೆ. ನಡುವಲಹಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ಆಕಳು, ಎತ್ತು ಸಾವನ್ನಪ್ಪಿವೆ. 

ಹುಬ್ಬಳ್ಳಿ ನಗರದ ಹಾಗೂ ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ರಭಸದ ಮಳೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಗಾಳಿ ರಭಸಕ್ಕೆ ತಾಲ್ಲೂಕಿನ ಹೊಸರಿತ್ತಿ, ಕೋಡಬಾಳ ಗ್ರಾಮದಲ್ಲಿ ಮನೆಗಳ ಚಾವಣಿ, ಹೆಂಚುಗಳು ಹಾರಿ ಹೋಗಿವೆ. ನೀರು ನುಗ್ಗಿ ಮನೆ ಸಾಮಗ್ರಿಗಳೆಲ್ಲ ನೀರು ಪಾಲಾಗಿವೆ.

ಸವಣೂರ ತಾಲ್ಲೂಕಿನ ಬರದೂರ ಹಾಗೂ ಚಳ್ಳಾಳ ಗ್ರಾಮದ ನಡುವಿನ ರಸ್ತೆಯಲ್ಲಿ ವಿದ್ಶುತ್‌ ಕಂಬ ಹಾಗೂ ಮರ ಧರೆಗೆ ಉರುಳಿದ್ದರಿಂದ ಕೆಲಹೊತ್ತು ಸಂಚಾರಕ್ಕೆ ತೊಂದರೆ ಉಂಟಾಯಿತು.  

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಟ್ಟಿಗೆಹಾರ, ಬಾಳೂರು, ಚಾರ್ಮಾಡಿ ಘಾಟಿ, ಕಳಸ ಭಾಗದಲ್ಲಿ ಬಿರುಸಾಗಿ ಮಳೆ ಸುರಿದಿದೆ.  

ಮೈಸೂರು ನಗರ, ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಜೋರು ಮಳೆಯಾಗಿದೆ. ಬೆಟ್ಟದಪುರ ಸಮೀಪದ ಬಾರಸೆ ಗ್ರಾಮದ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಮೀಪದ ಕೆ.ದೊಡ್ಡಕೊಪ್ಪಲು
ಗ್ರಾಮದ ಹರೀಶ್ (42) ಮತ್ತು ಸಂಜಯ್ (19) ಗಾಯಗೊಂಡಿದ್ದಾರೆ. 

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟ, ಹನೂರು ವ್ಯಾಪ್ತಿಯಲ್ಲಿ ಮಳೆ ಬಿದ್ದಿದೆ. ಕೊಡಗು ಜಿಲ್ಲೆಯ ಕುಶಾಲನಗರ, ಮಡಿಕೇರಿ, ಸೋಮವಾರಪೇಟೆ, ನಾಪೋಕ್ಲು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಕುಶಾಲನಗರದಿಂದ ಮಡಿಕೇರಿಗೆ ವಿದ್ಯುತ್ ಪೂರೈಸುವ ಕೇಂದ್ರದಲ್ಲಿ ಸಿಡಿಲಿನಿಂದಾಗಿ ತೊಂದರೆ ಕಾಣಿಸಿಕೊಂಡಿತ್ತು.

ಹಾಸನ ನಗರ, ಸಕಲೇಶಪುರ, ಕೊಣನೂರು, ಆಲೂರು ಮಳೆಯಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರು, ಹೊನ್ನಾಳಿ ಮಾಯಕೊಂಡ, ತ್ಯಾವಣಗಿ ಹಾಗೂ ಸಂತೇಬೆನ್ನೂರು ಭಾಗಗಳಲ್ಲಿ ಮಳೆ ಬಿದ್ದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆರನಕಟ್ಟೆ ಗ್ರಾಮದ ವೃತ್ತದಲ್ಲಿದ್ದ ದೊಡ್ಡ ಬೇವಿನ ಮರವೊಂದು ಉರುಳಿ ರಸ್ತೆಗೆ ಬಿದ್ದಿದ್ದರಿಂದ ಹಿರಿಯೂರು– ಕೋಡಿಹಳ್ಳಿ ಮಾರ್ಗದ ವಾಹನ ಸಂಚಾರ ಮಾರ್ನಾಲ್ಕು ಗಂಟೆ ಸ್ಥಗಿತಗೊಂಡಿತ್ತು. 

ಹಿರಿಯೂರು, ಬೀರೇನಹಳ್ಳಿ, ಹೇಮದಳ, ದಿಂಡಾವರ ಭಾಗದಲ್ಲಿ 23 ವಿದ್ಯುತ್ ಕಂಬ ಮುರಿದು ಬಿದ್ದು, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

 ಬೆಂಗಳೂರು ಕೆ.ಆರ್‌. ವೃತ್ತದ ಅಂಡರ್‌ಪಾಸ್‌ನಲ್ಲಿ ಮಳೆಯ ನೀರಿನಲ್ಲಿ ಮುಳುಗಿದ್ದ ಆಟೊದ ಚಾವಣಿ ಹಿಡಿದುಕೊಂಡೇ ಪ್ರಾಣ ಉಳಿಸಿಕೊಂಡ ಯುವತಿ. ಅವರನ್ನು ಸ್ಥಳೀಯರು ರಕ್ಷಿಸಿದರು   –ಪ್ರಜಾವಾಣಿ ಚಿತ್ರ/ ಪುಷ್ಕರ್‌ ವಿ.
ಬೆಂಗಳೂರು ಕೆ.ಆರ್‌. ವೃತ್ತದ ಅಂಡರ್‌ಪಾಸ್‌ನಲ್ಲಿ ಮಳೆಯ ನೀರಿನಲ್ಲಿ ಮುಳುಗಿದ್ದ ಆಟೊದ ಚಾವಣಿ ಹಿಡಿದುಕೊಂಡೇ ಪ್ರಾಣ ಉಳಿಸಿಕೊಂಡ ಯುವತಿ. ಅವರನ್ನು ಸ್ಥಳೀಯರು ರಕ್ಷಿಸಿದರು –ಪ್ರಜಾವಾಣಿ ಚಿತ್ರ/ ಪುಷ್ಕರ್‌ ವಿ.

‘ಮಳೆ ಸಮಸ್ಯೆ ಸರಿ ಮಾಡ್ತೀವಿ’

ಬೆಂಗಳೂರಿನಲ್ಲಿ ಮಳೆ ಅವಾಂತರದಿಂದ ಯುವತಿ ಮೃತಪಟ್ಟಿರುವುದಕ್ಕೆ ಆದಿಚುಂಚನಗರಿ ಮಠದಲ್ಲಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ‘ಮಳೆ ಸಮಸ್ಯೆಯನ್ನು ಸರಿ ಮಾಡುವ ಕಾಲ ಬಂದಿದೆ. ಯುವತಿ ಸಾವಿಗೆ ₹ 5, ₹ 10 ಲಕ್ಷ ಪರಿಹಾರ ಕೊಡುವುದು ದೊಡ್ಡದಲ್ಲ, ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು, ಆ ಕೆಲಸ ಮಾಡುತ್ತೇವೆ’ ಎಂದರು.

‘ಪ್ರಕೃತಿ ಯಾರ ಕೈಯಲ್ಲೂ ಇಲ್ಲ, ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಬೆಂಗಳೂರಿನ ಸಮಸ್ಯೆ ಸರಿಪಡಿಸಲು ಕ್ರಮ ವಹಿಸಲಾಗುವುದು’ ಎಂದರು.

ಮಳೆ ಆರ್ಭಟ: ಯುವತಿ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸುರಿದ ಆಲಿಕಲ್ಲು ಸಹಿತ ಧಾರಾಕಾರ ಮಳೆಗೆ ಯುವತಿಯೊಬ್ಬರು ಮೃತಪಟ್ಟಿದ್ದಾರೆ. ಬಿರುಗಾಳಿಗೆ ಹಲವೆಡೆ ನೂರಾರು ಮರಗಳು ಧರೆಗುರುಳಿದ್ದು, ಕಾರು, ಬೈಕ್‌ಗಳು ಜಖಂಗೊಂಡಿವೆ.

ಕೆ.ಆರ್‌.ವೃತ್ತದ ಅಂಡರ್‌ಪಾಸ್‌ನಲ್ಲಿ ಸಂಗ್ರಹಗೊಂಡಿದ್ದ ಮಳೆಯ ನೀರಿನಲ್ಲಿ ಕಾರು ಮುಳುಗಿ ಇನ್ಫೊಸಿಸ್‌ ಉದ್ಯೋಗಿ, ಆಂಧ್ರಪ್ರದೇಶದ ವಿಜಯವಾಡದ ಭಾನುರೇಖಾ (23) ಅವರು ಮೃತಪಟ್ಟಿದ್ದಾರೆ. ಇದೇ ಸ್ಥಳದಲ್ಲಿ ಇನ್ನೂ ಎರಡು ಆಟೊಗಳು ಸಿಲುಕಿದ್ದವು. ಅದರಲ್ಲಿದ್ದವರು ಪಾರಾಗಿದ್ದಾರೆ. 45 ನಿಮಿಷಗಳ ಕಾಲ ಆರ್ಭಟಿಸಿದ ಮಳೆಗೆ ವಿಧಾನಸೌಧದ ಸಮೀಪದ ಕೆ.ಆರ್‌. ವೃತ್ತದ ಅಂಡರ್‌ಪಾಸ್‌ನಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿತ್ತು. ಒಮ್ಮೆಲೇ ನಗರದಲ್ಲಿ ಕಾರ್ಗತ್ತಲು ಆವರಿಸಿತ್ತು. ನೀರಿನ ಮಟ್ಟ ಅರಿಯದೆ ಅಂಡರ್‌ಪಾಸ್‌ನಲ್ಲಿ ಚಲಾಯಿಸಿದ್ದರಿಂದ ಕಾರು ಮುಳುಗಿತು.

ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಆಲಿಕಲ್ಲು ಮಳೆಗೆ ಮಾವಿನಕಾಯಿಗಳು ಉದುರಿವೆ
ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಆಲಿಕಲ್ಲು ಮಳೆಗೆ ಮಾವಿನಕಾಯಿಗಳು ಉದುರಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT