ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಜ್ಜಾರ್ಲೆ ಬೇಟೆ ಅವ್ಯಾಹತ: ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ನಿತ್ಯ ಕ್ರೌರ್ಯ

Published 12 ಏಪ್ರಿಲ್ 2024, 0:30 IST
Last Updated 12 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ನಾರಾಯಣ ದೇವರಕೆರೆ ಸಮೀಪದ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಅಳವಿನಂಚಿನಲ್ಲಿನ ಬಾನಾಡಿಗಳ ಬೇಟೆ ಅವ್ಯಾಹತವಾಗಿ ನಡೆದಿದೆ.

ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ (ಈಯುಸಿಎನ್) ಕೆಂಪು ಪಟ್ಟಿಯಲ್ಲಿ ಇರುವ ದೇಶೀಯ ಹೆಜ್ಜಾರ್ಲೆ (ಸ್ಪಾಟ್ ಬಿಲ್ಡ್ ಪೆಲಿಕಾನ್) ತುಂಗಭದ್ರಾ ಹಿನ್ನೀರು ಪ್ರದೇಶ, ಅಂಕಸಮುದ್ರದ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿವೆ.

ಪಕ್ಷಿಧಾಮದಲ್ಲಿ ನಾಲ್ಕು ವರ್ಷಗಳಲ್ಲಿ 50ಕ್ಕೂ ಹೆಚ್ಚು ಮರಿಗಳನ್ನು ಹಾಕಿ, ಸಂಖ್ಯೆ ವೃದ್ಧಿಸಿಕೊಂಡಿವೆ. ಎತ್ತರದ ಗಿಡಗಳು, ಸಾಕಷ್ಟು ಆಹಾರ ಸಿಗುವ ಕಾರಣ ಈ ಪಕ್ಷಿಗಳು ಇಲ್ಲೇ ನೆಲೆ ಕಂಡುಕೊಂಡಿವೆ.

ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಸಿಗುವ ಮೀನು, ಹುಳು–ಹುಪ್ಪಟೆಗಳೇ ಇವುಗಳ ಆಹಾರ. ಬೆಳಿಗ್ಗೆ ಮತ್ತು ಸಂಜೆ ಆಹಾರ ಅರಸಿ ಬರುವ ಹೆಜ್ಜಾರ್ಲೆಗಳನ್ನು ಬೇಟೆಗಾರರು ಬೇಟೆಯಾಡಿ, ಸಾಯಿಸುತ್ತಿದ್ದಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಜೀವವೈವಿಧ್ಯದ ಚೌಗು ಪ್ರದೇಶವಾದ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶಕ್ಕೆ 250ಕ್ಕೂ ಹೆಚ್ಚು ಪ್ರಭೇದದ ದೇಶ, ವಿದೇಶಗಳ ಪಕ್ಷಿಗಳು ವಲಸೆ ಬರುತ್ತವೆ. ಸಂತಾನೋತ್ಪತ್ತಿ ನಡೆಸುತ್ತವೆ. ಕೆಲ ಪಕ್ಷಿಗಳು ಇಲ್ಲೇ ಕಾಯಂ ಇವೆ.

‘ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿ ಪಕ್ಷಿಗಳು ಬರುವ ಕಾರಣ ಬೇಟೆಗಾರರು ಮನಸೋಇಚ್ಛೆ ಬೇಟೆಯಾಡಿ, ಸಾಯಿಸುತ್ತಾರೆ. ಅದಕ್ಕಾಗಿ ಹಿನ್ನೀರು ಪ್ರದೇಶ ಆಯ್ಕೆ ಮಾಡಿಕೊಂಡು ಹೊಂಚುಹಾಕಿ ಕೂತಿರುತ್ತಾರೆ. ಇಂತಹ ಬೇಟೆಗಾರರಿಂದ ಅಳಿವಿನಂಚಿನಲ್ಲಿ ಇರುವ ಪಕ್ಷಿಗಳನ್ನು ರಕ್ಷಿಸಬೇಕು’ ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಬೇಟೆಗಾರರ ಚಿತ್ರ ಮತ್ತು ವಿಡಿಯೊಗಳ ಸಹಿತ ದೂರು ನೀಡಲಾಗಿದೆ ಇಲಾಖೆ ಇವರ ವಿರುದ್ಧ ಅಗತ್ಯ ಕ್ರಮ ಜರುಗಿಸಬೇಕು.
-ಇಟ್ಟಿಗಿ ವಿಜಯಕುಮಾರ್, ಆನಂದ್‍ಬಾಬು, ಪಕ್ಷಿಪ್ರೇಮಿಗಳು.
ಹಕ್ಕಿ ಬೇಟೆ ಆಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಬಾನಾಡಿಗಳ ರಕ್ಷಣೆಗೆ ಅಗತ್ಯ ಸಿಬ್ಬಂದಿ ನಿಯೋಜಿಸುವಂತೆ ಮೇಲಧಿಕಾರಿಗಳಿಗೆ ಕೋರಲಾಗುವುದು.
-ರೇಣುಕಮ್ಮ, ವಲಯ ಅರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT