ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಷಪ್‌ ಪಿ.ಕೆ. ಸಾಮ್ಯುಯೆಲ್‌ಗೆ ಹೈಕೋರ್ಟ್‌ ಅಂಕುಶ

ಧರ್ಮಾಧಿಕಾರಿ ನಿವೃತ್ತಿ ವಯೋಮಿತಿ ಏರಿಕೆ ಪ್ರತಿರೋಧಿಸಿದ ಅರ್ಜಿ
Published 5 ಮೇ 2023, 18:37 IST
Last Updated 5 ಮೇ 2023, 18:37 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಟೆಸ್ಟೆಂಟ್‌ ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದ ಬಿಷಪ್‌ಗಳ ನಿವೃತ್ತಿ ವಯೋಮಿತಿ ವಿಸ್ತರಣೆಗೆ ಸಂಬಂಧಿಸಿದಂತೆ; ದಕ್ಷಿಣ ಭಾರತದ ಚರ್ಚ್‌ಗಳ ಸಂವಿಧಾನದ 5ನೇ ಅಧ್ಯಾಯದ ಷರತ್ತು 12 (ಎ)ಗೆ ತರಬೇಕೆಂದಿರುವ ಉದ್ದೇಶಿತ ತಿದ್ದುಪಡಿಗೆ ಅನುಮೋದನೆ ಸಿಗುವ ತನಕ, ಕರ್ನಾಟಕ ಸೆಂಟ್ರಲ್ ಡಯಾಸೆಸ್‌ನ (ಬಿಷಪ್‌ ಆಡಳಿತ ನಿರ್ವಹಿಸುವ ಪ್ರಾಂತ್ಯ ವ್ಯಾಪ್ತಿ) ಬಿಷಪ್ ಅವರು ಯಾವುದೇ ಆಡಳಿತಾತ್ಮಕ ನಿರ್ಧಾರ ಅಥವಾ ಚಟುವಟಿಕೆ ಕೈಗೊಳ್ಳದಂತೆ ಹೈಕೋರ್ಟ್‌ ನಿರ್ಬಂಧ ವಿಧಿಸಿದೆ.

ಈ ಕುರಿತಂತೆ ನಗರದ ಮನೋರಾಯನಪಾಳ್ಯದ ಹಿರಿಯ ನಾಗರಿಕ ಜೆ.ಸಿ. ಸಂಪತ್‌ ಕುಮಾರ್ ಅವರು, ಸಲ್ಲಿಸಿರುವ ಪ್ರಥಮ ಮೇಲ್ಮನವಿಯ (ಎಂಎಫ್‌ಎ 318/2023) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಕರ್ನಾಟಕ ಸೆಂಟ್ರಲ್ ಡಯಾಸೆಸ್‌ನ ಬಿಷಪ್‌ ಪ್ರಸನ್ನ ಕುಮಾರ್ ಸ್ಯಾಮ್ಯುಯೆಲ್‌ ಅವರು ವಿಚಾರಣಾ ನ್ಯಾಯಾಲಯದಲ್ಲಿನ ಸಿವಿಲ್‌ ದಾವೆ ಇತ್ಯರ್ಥಗೊಳ್ಳುವ ತನಕ ಯಥಾಸ್ಥಿತಿ ಕಾಯ್ದುಕೊಂಡು ಹೋಗಬೇಕು’ ಎಂದು ತೀರ್ಪು ನೀಡಿದೆ.

ಈ ಸಂಬಂಧ ಸಿಟಿ ಸಿವಿಲ್‌ ಕೋರ್ಟ್‌ (ಸಿಸಿಎಚ್‌–7) 2023ರ ಜನವರಿ 3ರಂದು ನೀಡಿದ್ದ ಆದೇಶವನ್ನು ವಜಾಗೊಳಿಸಿರುವ ನ್ಯಾಯಪೀಠ, ‘ಸ್ವಾಯತ್ತ ಘಟಕವೆನಿಸಿದ ದಕ್ಷಿಣ ಭಾರತದ ಚರ್ಚ್‌ಗಳ ಸಿನಾಡ್‌ (ಪಾದ್ರಿಗಳ ಪರಿಷತ್‌) ತನ್ನ ಸಂವಿಧಾನಕ್ಕೆ ತಿದ್ದುಪಡಿ ತರುವ ಪರಮಾಧಿಕಾರ ಹೊಂದಿರುವುದು ನಿಜವೇ ಆದರೂ, ತಿದ್ದುಪಡಿಗೆ ಅಗತ್ಯವಾದ ಮೂರನೇ ಎರಡರಷ್ಟು ಸದಸ್ಯರ ಬಹುಮತದಲ್ಲಿ ಎಷ್ಟು ಜನ ಸದಸ್ಯರು ಪರವಾಗಿದ್ದಾರೆ ಮತ್ತು ಎಷ್ಟು ಜನ ವಿರೋಧವಾಗಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾದ ವಿವರಣೆ ನೀಡಿಲ್ಲ. ಈ ಅಂಶವನ್ನು ವಿಚಾರಣಾ ನ್ಯಾಯಾಲಯ ಸೂಕ್ತ ರೀತಿಯಲ್ಲಿ ಪರಿಗಣಿಸಿಲ್ಲ. ಹೀಗಾಗಿ, ಈ ಕುರಿತ ಮಧ್ಯಂತರ ಅರ್ಜಿಯ ಮೇಲೆ ವಿಚಾರಣಾ ನ್ಯಾಯಾಲಯವು ತನ್ನ ವ್ಯಾಪ್ತಿ ಮೀರಿ ನೀಡಿರುವ ಆದೇಶ ಕಾನೂನುಬಾಹಿರವಾಗಿದೆ’ ಎಂದು ಅಭಿಪ್ರಾಯಪಟ್ಟಿದೆ.

ಏನಿದು ಅರ್ಜಿ?

 ದಕ್ಷಿಣ ಭಾರತದ ಪ್ರಾಟೆಸ್ಟೆಂಟ್‌ ಚರ್ಚ್‌ಗಳ ಸಂವಿಧಾನದ ಪ್ರಕಾರ ಬಿಷಪ್‌ಗಳ ನಿವೃತ್ತಿ ವಯೋಮಿತಿ 67 ವರ್ಷಗಳು. ಆದರೆ, 2022ರ ಡಿಸೆಂಬರ್‌ 21ರಂದು ಸಿನಾಡ್‌ನಲ್ಲಿ ಮಂಡಿಸಲಾಗಿರುವ ತಿದ್ದುಪಡಿ ಅನುಸಾರ ಈ ವಯೋಮಿತಿಯನ್ನು 67 ರಿಂದ 70 ವರ್ಷಕ್ಕೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಇದು ದುರುದ್ದೇಶಪೂರ್ವಕ ಎಂದು ಆರೋಪಿಸಿ ಜೆ.ಸಿ. ಸಂಪತ್‌ಕುಮಾರ್ ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಸಿವಿಲ್‌ ದಾವೆ ಹೂಡಿದ್ದಾರೆ.

ಲಾಯರ್‌ ನೋಟಿಸ್‌

ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಬಿಷಪ್‌ ಪ್ರಸನ್ನ ಕುಮಾರ್ ಸ್ಯಾಮ್ಯುಯೆಲ್‌, ಚರ್ಚ್‌ ಆಫ್‌ ಸೌಥ್‌ ಇಂಡಿಯಾದ ಚೆನ್ನೈ ಕಚೇರಿಯ ಸಿನಾಡ್‌ನ ಕಾರ್ಯದರ್ಶಿ, ತಿರುವನಂತಪುರಂನಲ್ಲಿರುವ ಮಾಡರೇಟರ್‌ ಧರ್ಮರಾಜ ಪ್ರಸಾಲಮ್‌, ಬೆಂಗಳೂರು ಘಟಕದ ಕಾರ್ಯದರ್ಶಿ ಸೇರಿದಂತೆ ಇತರರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

ಹೈಕೋರ್ಟ್‌, 2023ರ ಏಪ್ರಿಲ್‌ 21ರಂದು ತೀರ್ಪು ನೀಡಿದ ನಂತರ ಅರ್ಜಿದಾರ ಜೆ.ಸಿ.ಸಂಪತ್‌ ಕುಮಾರ್‌ ಅವರು ತಮ್ಮ ವಕೀಲರಾದ ಕೆ.ಬಿ.ಎಸ್‌.ಮಣಿಯನ್‌ ಮುಖಾಂತರ ಬಿಷಪ್‌ ಪ್ರಸನ್ನ ಕುಮಾರ್ ಸ್ಯಾಮ್ಯುಯೆಲ್‌ ಸೇರಿದಂತೆ ಚರ್ಚ್‌ ಆಫ್‌ ಸೌಥ್‌ ಇಂಡಿಯಾದ ಸಿನಾಡ್‌ನ ಕಾರ್ಯದರ್ಶಿ ಫರ್ನಾಂಡಿಸ್ ರಥಿನಾ ರಾಜ, ಚೆನ್ನೈನ ಮಾಡರೇಟರ್‌ ಎ.ಧರ್ಮರಾಜ ರಸಾಲಮ್‌ ಹಾಗೂ ಇತರರಿಗೆ ವಕೀಲರ ನೋಟಿಸ್ ನೀಡಿದ್ದಾರೆ.

‘ಬಿಷಪ್‌ ಪ್ರಸನ್ನ ಕುಮಾರ್ ಸ್ಯಾಮ್ಯುಯೆಲ್‌ 2023ರ ಫೆಬ್ರುವರಿ 10ರಂದೇ ನಿವೃತ್ತಿ ಹೊಂದಿದ್ದಾರೆ. ಅವರೀಗಾಗಲೇ ತಮ್ಮ ಕಚೇರಿಯಲ್ಲಿ ಮುಂದುವರಿಯುವ ಎಲ್ಲ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಒಂದು ವೇಳೆ ಅವರೇನಾದರೂ ಈ ಅವಧಿಯಲ್ಲಿ ಯಾವುದಾದರೂ ಆಡಳಿತಾತ್ಮಕ ತೀರ್ಮಾನಗಳನ್ನು ಕೈಗೊಂಡಿದ್ದೇ ಆದಲ್ಲಿ ಅದು ಹೈಕೋರ್ಟ್‌ನಲ್ಲಿರುವ ಮೇಲ್ಮನವಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ. ಅಂತೆಯೇ, ಹೊಸ ಬಿಷಪ್‌ ಆಯ್ಕೆಯಾಗುವತನಕ ಕರ್ನಾಟಕ ಸೆಂಟ್ರಲ್‌ ಡಯಾಸೆಸ್‌ಗೆ ತಾತ್ಕಾಲಿಕವಾಗಿ ಮಾಡರೇಟರ್‌ ಕಮಿಷರಿ ನೇಮಕ ಮಾಡಬೇಕು. ಬಿಷಪ್‌ ಅವರು ತಕ್ಷಣವೇ ತಮ್ಮ ಕಚೇರಿ ಖಾಲಿ ಮಾಡಬೇಕು. ನೋಟಿಸ್‌ಗೆ ಸೂಕ್ತ ಉತ್ತರ ನೀಡದೇ ಹೋದಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದಲ್ಲಿ ಪ್ರಾಟೆಸ್ಟೆಂಟ್‌ ಸಮುದಾಯವು ಉತ್ತರ, ದಕ್ಷಿಣ ಮತ್ತು ಕೇಂದ್ರ ಸ್ಥಾನ ಎಂಬ ಮೂರು ವಿಭಾಗಗಳನ್ನು ಒಳಗೊಂಡಿದೆ. ಕರ್ನಾಟಕ ಮಧ್ಯ ಪ್ರಾಂತ್ಯದ (ಕೇಂದ್ರ) ಧರ್ಮಾಧಿಕಾರಿ ಎನಿಸಿದ ಪ್ರಸನ್ನ ಕುಮಾರ್ ಸ್ಯಾಮ್ಯುಯೆಲ್‌ ಅವರ ಅಧಿಕಾರ ವ್ಯಾಪ್ತಿಯಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಮತ್ತು ರಾಮನಗರ ಜಿಲ್ಲೆಯ ವಿವಿಧ ತಾಲ್ಲೂಕುಗಳು ಒಳಗೊಂಡಿವೆ.

ಇ.ಡಿ ನೋಟಿಸ್‌: ಅಕ್ರಮ ಹಣ ವರ್ಗಾವಣೆ ಆರೋಪದಡಿ 2020ರ ಆಗಸ್ಟ್‌ನಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಬೆಂಗಳೂರು ಘಟಕದ ಕಚೇರಿಯು, ಧನ ಶೋಧನ ನಿವಾರಣಾ ಕಾಯ್ದೆ–2002ರ (ಪಿಎಂಎಲ್‌ಎ) ಅನ್ವಯ ಬಿಷಪ್‌ ಪ್ರಸನ್ನ ಕುಮಾರ್ ಸ್ಯಾಮ್ಯುಯೆಲ್‌ ಅವರಿಗೆ ಖುದ್ದು ಹಾಜರಾಗಿ ಹೇಳಿಕೆ ನೀಡುವಂತೆ ಸಮನ್ಸ್ ಜಾರಿಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT