ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಮಿಯೋಪಥಿ ಆಯೋಗದ ಅಧ್ಯಕ್ಷ: ಅಧಿಸೂಚನೆ ರದ್ದು

Published 25 ಜನವರಿ 2024, 16:27 IST
Last Updated 25 ಜನವರಿ 2024, 16:27 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಹೋಮಿಯೋಪಥಿ ಆಯೋಗದ ಅಧ್ಯಕ್ಷರನ್ನಾಗಿ ಡಾ.ಅನಿಲ್ ಖುರಾನಾ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ.

ನೇಮಕಾತಿ ಪ್ರಶ್ನಿಸಿ ರಾಜ್ಯ ಆಯುಷ್ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಅಮರಗೌಡ ಎಲ್.ಪಾಟೀಲ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಹೊಸದಾಗಿ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.

‘ಆಯೋಗದ ಅಧ್ಯಕ್ಷರಾಗಲು ಹೋಮಿಯೋಪಥಿ ಕ್ಷೇತ್ರದಲ್ಲಿ ಕನಿಷ್ಠ 20 ವರ್ಷಗಳ ಸೇವಾನುಭವ ಹೊಂದಿರಬೇಕು. ಅಂತೆಯೇ, ಕನಿಷ್ಠ 10 ವರ್ಷಗಳ ಕಾಲ ಹೋಮಿಯೋಪಥಿ ಮತ್ತು ಹೋಮಿಯೋಪಥಿ ಶಿಕ್ಷಣಕ್ಕೆ ಸಂಬಂಧಿಸಿದ ಅಭಿವೃದ್ಧಿ, ಬೆಳವಣಿಗೆ, ಆರೋಗ್ಯ ಸೇವೆ ಒದಗಿಸುವ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿರಬೇಕು ಎಂದು ರಾಷ್ಟ್ರೀಯ ಹೋಮಿಯೋಪಥಿ ಆಯೋಗ ಕಾಯ್ದೆ-2020ರ ಕಲಂ 4(2) ಹೇಳುತ್ತದೆ. ಆದರೆ, ಡಾ.ಖುರಾನಾ ಇಂತಹ ಸೇವಾನುಭವ ಹೊಂದಿಲ್ಲ. ಹೀಗಾಗಿ, ಅವರ ನೇಮಕಾತಿ ಕಾಯ್ದೆಗೆ ವಿರುದ್ಧವಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇದೇ ವೇಳೆ ರಾಷ್ಟ್ರೀಯ ಹೋಮಿಯೋಪಥಿ ಆಯೋಗದ ಮೆಡಿಕಲ್ ಅಸಸ್‌ಮೆಂಟ್ ಆ್ಯಂಡ್ ರೇಟಿಂಗ್ ಬೋರ್ಡ್‌ನ ಅಧ್ಯಕ್ಷರನ್ನಾಗಿ ಡಾ. ಕೆ.ಆರ್.ಜನಾರ್ದನ ನಾಯರ್ ಅವರ ನೇಮಕ ಪ್ರಶ್ನಿಸಿ ಡಾ. ಅಮರಗೌಡ ಎಲ್.ಪಾಟೀಲ ಸಲ್ಲಿಸಿದ್ದ ಮತ್ತೊಂದು ಪ್ರತ್ಯೇಕ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಪೀಠ, ‘ಡಾ.ಜನಾರ್ದನ ನಾಯರ್ ನೇಮಕಾತಿ ಕ್ರಮಬದ್ಧವಾಗಿದೆ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT