ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣದಿಂದ ರಾಜಕೀಯದ ಹೊಸ ಅಧ್ಯಾಯ ಶುರು ಮಾಡಲು ಬಂದಿದ್ದೇನೆ: ಡಿಕೆಶಿ

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧೆ ಇಂಗಿತ ವ್ಯಕ್ತಪಡಿಸಿದ ಡಿಸಿಎಂ
Published 19 ಜೂನ್ 2024, 11:22 IST
Last Updated 19 ಜೂನ್ 2024, 11:22 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ‘ಚನ್ನಪಟ್ಟಣ ಕ್ಷೇತ್ರದ ಮಹಾಜನತೆಯ ಋಣ ತೀರಿಸುವುದಕ್ಕಾಗಿ, ಇಲ್ಲಿಂದ ನನ್ನ ರಾಜಕೀಯದ ಹೊಸ ಅಧ್ಯಾಯ ಶುರು ಮಾಡಲು ಬಂದಿದ್ದೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ತಾಲ್ಲೂಕಿನ ಕೆಂಗಲ್‌ನಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು, ಎಚ್‌.ಡಿ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.

‘ದಶರಥ ರಾಮನ ತಂದೆಯಾದರೆ, ಆಂಜನೇಯ ಆತನ ನೆಚ್ಚಿನ ಬಂಟ. ಎಲ್ಲೇ ಹೋದರೂ ಆಂಜನೇಯನ ದೇವಸ್ಥಾನ ಸಿಗುತ್ತದೆಯೇ ಹೊರತು ದಶರಥನದ್ದಲ್ಲ. ಆಂಜನೇಯ ಸಮಾಜಸೇವೆಯ ಪ್ರತೀಕ. ಅಂತಹ ಆಂಜನೇಯನ ಸನ್ನಿಧಿಯಿಂದ ಹೊಸ ಅಧ್ಯಾಯ ಶುರು ಮಾಡಲು ಹೆಜ್ಜೆ ಇಟ್ಟಿದ್ದೇನೆ’ ಎಂದರು.

‘ಚನ್ನಪಟ್ಟಣದ ಭಾಗವಾಗಿ ನಾನು ರಾಜಕಾರಣ ಆರಂಭಿಸಿದಾಗ, ಇಲ್ಲಿನ ಎರಡ್ಮೂರು ಹೋಬಳಿಯವರು ನನ್ನ ಬೆಂಬಲಕ್ಕೆ ನಿಂತು ಬೆಳೆಸಿದರು. ಕ್ಷೇತ್ರ ಮರುವಿಂಗಡಣೆಯಾಗಿ ಚನ್ನಪಟ್ಟಣ ಬಿಡುವಾಗ ನೋವಾಗಿತ್ತು. ಆದರೂ, ಇಲ್ಲಿನ ಜನ ಅಂದಿನಂತೆಯೇ ಪ್ರೀತಿಯಿಂದ ಕಾಣುತ್ತಾರೆ. ಎಲ್ಲಾ ಜಾತಿ ಮತ್ತು ಧರ್ಮಗಳ ಪ್ರಜ್ಞಾವಂತ ಜನರಿರುವ ಕ್ಷೇತ್ರವಿದು’ ಎಂದು ಬಣ್ಣಿಸಿದರು.

‘ಹಿಂದೆ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಕೋಮುಗಲಭೆಯಾದಾಗ ರಾಜೀವ್ ಗಾಂಧಿ ಅವರೊಂದಿಗೆ ಇದೇ ಮಾರ್ಗದಲ್ಲಿ ಕಾರಿನಲ್ಲಿ ಹೋಗಿದ್ದೆ. ಬದಲಾದ ಸಂದರ್ಭದಲ್ಲಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರು ಅಂದು ರಾಜೀನಾಮೆ ಕೊಟ್ಟಿದ್ದರು. ನಂತರ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪ ಅವರ ಸಂಫುಟದಲ್ಲಿ ನಾನು ಕಿರಿಯ ವಯಸ್ಸಿನಲ್ಲೇ ಸಚಿವನಾದೆ. ನನ್ನ ರಾಜಕೀಯ ಜೀವನದ ದೊಡ್ಡ ಬದಲಾವಣೆ ಆಗಿರುವುದೇ ಚನ್ನಪಟ್ಟಣದಿಂದ’ ಎಂದು ನೆನೆದರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಕೇವಲ 16 ಸಾವಿರ ಮತಗಳಷ್ಟೇ ಬಂದಿದ್ದರಿಂದ ನನಗೆ ನೋವಾಗಿತ್ತು. ಆದರೂ, ಜಿಲ್ಲೆಯ ಜನ ಸ್ವಇಚ್ಛೆಯಿಂದ ತೀರ್ಮಾನಿಸಿ, 4 ಕ್ಷೇತ್ರಗಳ ಪೈಕಿ 3ರಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದರು. ರಾಜ್ಯದಲ್ಲಿ 136 ಸೀಟು ಕೊಟ್ಟು, ನಾನು ಉಪ ಮುಖ್ಯಮಂತ್ರಿಯಾಗಲು ಕಾರಣವಾದರು. ನಾನು ಎಷ್ಟೇ ದೊಡ್ಡವನಾದರೂ ನಿಮ್ಮ ಮನೆಯ ಮಗ. ಆ ಕಾರಣಕ್ಕೆ ನಿಮ್ಮ ಋಣ ತೀರಿಸಲು ಬಂದಿರುವೆ’ ಎಂದರು.

‘ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 85 ಸಾವಿರ ಮತಗಳನ್ನು ಕೊಟ್ಟಿದ್ದೀರಿ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷ, ರೈತ ಸಂಘ ಸೇರಿದಂತೆ ಎಲ್ಲಾ ವರ್ಗದವರು ನಮಗೆ ಸಹಾಯ ಮಾಡಿದ್ದೀರಿ. ಆ ಋಣ ತೀರಿಸುವುದಕ್ಕಾಗಿ ಚನ್ನಪಟ್ಟಣದಲ್ಲಿ ಬದಲಾವಣೆ ತರಬೇಕಿದೆ. ಹಿಂದೆ ರಾಮನಗರದಲ್ಲಿ ಪ್ರಧಾನಮಂತ್ರಿಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲಿಂಗಪ್ಪ ಅವರನ್ನು ಗೆಲ್ಲಿಸುವ ಮೂಲಕ ಚರಿತ್ರೆ ಸೃಷ್ಟಿಸಿದ್ದೀರಿ. ರಾಮನಗರಕ್ಕೆ ಮತ್ತೆ ನಮ್ಮ ಶಾಸಕರು ಬಂದ ಮೇಲೆ ಸುಮಾರು ಒಂದು ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಮಂಜೂರಾತಿ ನೀಡಿ ಕೆಲಸ ಆರಂಭಿಸಿದ್ದೇವೆ’ ಎಂದು ಹೇಳಿದರು.

‘ನನಗೆ ನೀವು ಕೊಟ್ಟಿರುವ ಅಧಿಕಾರದಿಂದ ಚನ್ನಪಟ್ಟಣದಲ್ಲಿ ಏನೇನು ಬದಲಾವಣೆ ತರಬೇಕು ಎಂಬುದರ ಕುರಿತು ರೂಪುರೇಷೆ ಸಿದ್ಧ ಮಾಡಿಕೊಳ್ಳುತ್ತಿದ್ದೇನೆ. ಅದಕ್ಕಾಗಿ, ಎಲ್ಲಾ ಕಡೆ ಪ್ರವಾಸ ಮಾಡುವೆ. ತಾಲ್ಲೂಕಿನ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುವೆ. ಚರ್ಚ್ ಮತ್ತು ಮಸೀದಿಗಳಿಗೂ ಭೇಟಿ ನೀಡುವೆ. ಮುಂದಿನ ದಿನಗಳಲ್ಲಿ ಪಂಚಾಯಿತಿ ಮಟ್ಟದಲ್ಲಿ ಪ್ರವಾಸ ಮಾಡುವೆ’ ಎಂದು ತಿಳಿಸಿದರು.

‘ತಿದ್ದಿಕೊಳ್ಳಪ್ಪ ಎಂಬ ತೀರ್ಪು ಕೊಟ್ಟಿದ್ದೀರಿ’

‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಜನರು ಕೊಟ್ಟಿರುವ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ನನ್ನ ತಮ್ಮನಿಗಾದ ಸೋಲಿಗೆ ಯಾರನ್ನೂ ದೂರುವುದಿಲ್ಲ. ನನ್ನಲ್ಲೇ ಏನೊ ತಪ್ಪಿದೆ ಎಂದು ಅರಿತಿದ್ದೇನೆ. ನನಗೆ ಬುದ್ಧಿ ಹೇಳಲು ಹಾಗೂ ತಪ್ಪನ್ನು ತಿದ್ದಿಕೊಳ್ಳಲು ಇಂತಹದ್ದೊಂದು ತೀರ್ಪು ಕೊಟ್ಟಿದ್ದೀರಿ ಎಂದು ಭಾವಿಸಿದ್ದೇನೆ. ನಾನು ಹೆದರಿ ಧೈರ್ಯ ಕಳೆದುಕೊಳ್ಳುವವನಲ್ಲ. ಬದಲಿಗೆ, ಹೋರಾಟ ಮಾಡುವವನು. ತಪ್ಪು ತಿದ್ದಿಕೊಂಡು ನೀವು ಕೊಟ್ಟಿರುವ ಈ ಅಧಿಕಾರದ ಶಕ್ತಿಯಿಂದ ಮತ್ತಷ್ಟು ಕೆಲಸ ಮಾಡುವೆ. ಇಲ್ಲಿ ಗೆದ್ದಿರುವವರು ಸುರೇಶ್‌ಗಿಂತ ಚನ್ನಾಗಿ ಸೇವೆ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ’ ಎಂದು ಶಿವಕುಮಾರ್ ಮಾರ್ಮಿಕವಾಗಿ ನುಡಿದರು.

ಗದರಿದ ಶಿವಕುಮಾರ್

ಭಾಷಣದ ಶುರುವಿನಲ್ಲಿ ಶಿವಕುಮಾರ್ ಅವರು, ‘ಇಲ್ಲಿಂದ ರಾಜಕೀಯದ ಹೊಸ ಅಧ್ಯಾಯ ಶುರುವಾಗಿದೆ’ ಎಂದಾಗ, ನೆರೆದಿದ್ದ ಮುಖಂಡರು, ‘ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಜಯವಾಗಲಿ’ ಎಂದು ಘೋಷಣೆಗಳನ್ನು ಕೂಗಿದರು. ಆಗ ಶಿವಕುಮಾರ್, ‘ಏನೇನೊ ಕೂಗಿ, ತರಲೆ ಮಾಡಬೇಡಿ. ಸುಮ್ಮನಿರಿ’ ಎಂದು ಗದರಿದರು.

ಜಿಲ್ಲೆಗೆ ಮರುನಾಮಕರಣ

ಶಿವಕುಮಾರ್ ತಮ್ಮ ಭಾಷಣದಲ್ಲಿ ಮತ್ತೆ ‘ನಾವು ಬೆಂಗಳೂರು ಜಿಲ್ಲೆಯವರು’ ಎಂಬುದನ್ನು ಪುನರುಚ್ಛರಿಸಿದರು. ‘ಮದ್ದೂರು ಗಡಿಯಿಂದ ಆರಂಭಗೊಂಡು ಸಂಗಮ, ನಂದಿ ಬೆಟ್ಟ, ಕೋಲಾರದ ಗಡಿ, ಹುಲಿಯೂರುದುರ್ಗದ ಗಡಿವರೆಗೆ ಇರುವ ನಾವೆಲ್ಲರೂ ಬೆಂಗಳೂರಿನವರು. ಮುಂದೆ ಜಿಲ್ಲೆಗೆ ಹೊಸ ರೀತಿಯ ನಾಮಕರಣ ಆಗುತ್ತದೆ. ಆ ಕುರಿತು ಈಗಲೇ ಮಾತನಾಡಲಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT