ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನವಿಗಿಂತಲೂ ಹೆಚ್ಚಿನ ಮರ ಕಡಿಯಲು ಆದೇಶ!

ತೇಗದ ಮರ ಕಡಿದ ಪ್ರಕರಣ: ಅಧಿಕಾರಿಗಳು ನಡೆಸಿದ ಪರಿಶೀಲನೆಯಿಂದ ಬಹಿರಂಗ
Published 1 ಜನವರಿ 2024, 0:15 IST
Last Updated 1 ಜನವರಿ 2024, 0:15 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದ ಎಂ.ಎನ್‌.ರಮೇಶ್‌ ಅವರ ಜಮೀನಿನಲ್ಲಿದ್ದ ಕೋಟ್ಯಂತರ ರೂ‍ಪಾಯಿ ಮೌಲ್ಯದ ತೇಗದ ಮರಗಳನ್ನು ಕಡಿದ ಪ್ರಕರಣದಲ್ಲಷ್ಟೇ ಹಗರಣ ನಡೆದಿಲ್ಲ. ಈ ಬಗ್ಗೆ ತನಿಖೆ ನಡೆಸಿರುವ ಅರಣ್ಯ ಇಲಾಖೆಯ ನಾಲ್ವರು ಸದಸ್ಯರ ತಂಡ, ವಿಭಾಗದ ಮೂರು ವಲಯಗಳಲ್ಲಿ 14 ಭಾರಿ ಲೋಪವಾಗಿರುವುದನ್ನು ಪತ್ತೆ ಹಚ್ಚಿದೆ. ಇಲಾಖೆಗೆ ವರದಿ ಸಲ್ಲಿಸಿದೆ.

ವಿರಾಜಪೇಟೆ ವ್ಯಾಪ್ತಿಯಲ್ಲಿ ನೂರು ವರ್ಷದ ಹಳೆಯ ಮರಗಳು ಸೇರಿ 66 ತೇಗದ ಮರಗಳನ್ನು ಅಕ್ರಮವಾಗಿ ಕಡಿಯಲಾಗಿತ್ತು. ಇದು ಜ.20ರಂದು ‘ಪ್ರಜಾವಾಣಿ’ ಸಹೋದರ ಪತ್ರಿಕೆ ‘ಡೆಕ್ಕನ್ ಹೆರಾಲ್ಡ್‌’ನಲ್ಲಿ ವರದಿಯಾಗಿತ್ತು. ಈ ಪ್ರಕರಣದಲ್ಲಿ, ಕೆಲವು ಅಧಿಕಾರಿಗಳ ಜೊತೆ ಭಾಗಿಯಾಗಿರುವುದು ಮೇಲ್ನೋಟಕ್ಕೆ ದೃಢಪಟ್ಟಿದ್ದರಿಂದಾಗಿ, ಪ್ರಕರಣ ನಡೆದಾಗ ವಿರಾಜಪೇಟೆಯಲ್ಲಿ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ (ಡಿಸಿಎಫ್‌) ವೈ. ಚಕ್ರಪಾಣಿ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿತ್ತು.

ಈ ಪ್ರಕರಣದ ತನಿಖೆಗಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ದಳದ ಮುಖ್ಯಸ್ಥ) ಕೆ.ಆರ್.ಸಿಂಗ್‌ ಅವರು, ಐಎಫ್‌ಎಸ್ ಅಧಿಕಾರಿ ಸೌರಭ್‌ಕುಮಾರ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದ್ದರು. ವಿರಾಜಪೇಟೆ ಡಿಸಿಎಫ್‌ 2020ರ ಏಪ್ರಿಲ್‌ನಿಂದ 2023ರ ಏಪ್ರಿಲ್‌ವರೆಗೆ ಮರ ಕಡಿಯಲು ನೀಡಿದ್ದ ಆದೇಶಗಳ ಸಮಗ್ರ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.

71 ಕಡತ ಪರಿಶೀಲನೆ:

ತಂಡವು, ತಿತಿಮತಿ, ವಿರಾಜಪೇಟೆ ಹಾಗೂ ಪೊನ್ನಂಪೇಟೆ ವಿಭಾಗದಲ್ಲಿ ನೀಡಲಾದ ಮರ ಕಡಿತಲೆ ಆದೇಶಗಳಿಗೆ ಸಂಬಂಧಿಸಿದ 71 ಕಡಗಳನ್ನು ಪರಿಶೀಲಿಸಿದ್ದು, ಆದೇಶ ನೀಡುವಲ್ಲಿ ಆಗಿರುವ ಲೋಪಗಳು ಮತ್ತು ನಿಯಮ ಉಲ್ಲಂಘನೆ ಆಗಿರುವುದನ್ನು ಪತ್ತೆ ಹಚ್ಚಿದೆ.

ವಿಭಾಗದಲ್ಲಿನ ಮರಗಳ ರಕ್ಷಣೆ ಆಯಾ ಡಿಸಿಎಫ್‌ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಅವರಿಗೆ ಅಧಿಕಾರದ ಬಲವೂ ಇರುತ್ತದೆ. ನಿಯಮದ ಪ್ರಕಾರ, ಸಾರ್ವಜನಿಕರು ತಮ್ಮ ಜಾಗ ಅಥವಾ ಜಮೀನಿನಲ್ಲಿ ಬೆಳೆದಿರುವ ಮರ ಕಡಿಯುವ ಮುನ್ನ ಡಿಸಿಎಫ್‌ ಬಳಿ ಅನುಮತಿ ಪಡೆಯಬೇಕಾಗುತ್ತದೆ. ಕರ್ನಾಟಕ ಅರಣ್ಯ ನಿಯಮದ ಪ್ರಕಾರ, ಗುತ್ತಿಗೆ ಪಡೆದ ಭೂಮಿಯಲ್ಲಿ ಬೆಳೆದ ಎಲ್ಲಾ ಮರಗಳನ್ನು ಮತ್ತು ಸಾಗುವಳಿಗೆ ನೀಡಿದ ಭೂಮಿಯಲ್ಲಿರುವ ಎಲ್ಲಾ ಮರಗಳನ್ನೂ ಸರ್ಕಾರಿ ಆಸ್ತಿ ಎಂದು ಘೋಷಿಸುತ್ತದೆ. ಆದರೆ, ಡಿಸಿಎಫ್‌ ನೀಡಿದ ಕನಿಷ್ಠ 9 ಆದೇಶಗಳಲ್ಲಿ ಅನುಮತಿಗಿಂತಲೂ ಹೆಚ್ಚಿನ ತೇಗ, ರೋಸ್‌ವುಡ್ ಮೊದಲಾದ ಮರಗಳನ್ನು ಕಡಿದಿರುವುದನ್ನು ಗುರುತಿಸಲಾಗಿದೆ.

ಉದಾಹರಣೆಗೆ, ತಿತಿಮತಿ ವಲಯದ ಗಂಗಮ್ಮ ಎನ್ನುವವರು 5 ರೋಸ್‌ವುಡ್ (ಬೀಟೆ), 8 ಇತರ ಮರಗಳನ್ನು ಕಡಿಯಲು ಅನುಮತಿ ಕೇಳಿದ್ದರು. ಆದರೆ, ಡಿಸಿಎಫ್‌ 55 ರೋಸ್‌ವುಡ್ ಹಾಗೂ 65 ಇತರ ಮರಗಳನ್ನು ಕಡಿಯಲು ಆದೇಶ ನೀಡಿದ್ದಾರೆ!

ಇನ್ನೊಂದು ಪ್ರಕರಣದಲ್ಲಿ, ಮನುಸೋಮಯ್ಯ ಅವರು 40 ತೇಗದ ಮರಗಳನ್ನು ಕಡಿಯಲು ಅನುಮತಿ ಕೇಳಿದ್ದರೆ, ಡಿಸಿಎಫ್‌ 55 ಮರಗಳನ್ನು ಕತ್ತರಿಸಲು ಆದೇಶಿಸಿರುವುದನ್ನು ಗುರುತಿಸಲಾಗಿದೆ. ಅಚ್ಚರಿಯೆಂದರೆ, ಡಿಸಿಎಫ್‌ ಕಂದಾಯ ಇಲಾಖೆ ಆದೇಶ ಧಿಕ್ಕರಿಸಿರುವುದೂ ಕಂಡುಬಂದಿದೆ. ಆ 40 ತೇಗದ ಮರಗಳೂ ಮನುಸೋಮಯ್ಯ ಅವರಿಗೆ ಸೇರಿದ್ದಲ್ಲ ಎಂದು ಕಂದಾಯ ಇಲಾಖೆ ಗಮನಕ್ಕೆ ತಂದಿತ್ತು. ಆದರೆ, ಈ ವಿಷಯವನ್ನು ಡಿಸಿಎಫ್‌ ಅನುಮತಿ ಪತ್ರದಲ್ಲಿ ದಾಖಲಿಸದೇ ಮರೆಮಾಚಿದ್ದರು ಎಂಬ ಸಂಗತಿಯೂ ಹೊರಬಿದ್ದಿದೆ.

ಅಧಿಕಾರವೇ ಇಲ್ಲದವರಿಗೆ:

ಇತರ ಎರಡು ಪ್ರಕರಣಗಳಲ್ಲಿ, ಸಾಗುವಳಿ ಪತ್ರವಿಲ್ಲದ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದ ಇಬ್ಬರು, ಅಲ್ಲಿದ್ದ ಮರಗಳನ್ನು ಕಡಿಯಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನೂ ಡಿಸಿಎಫ್‌ ಪುರಸ್ಕರಿಸಿರುವುದನ್ನು ಗಮನಿಸಲಾಗಿದೆ. ಅಧಿಕಾರವೇ ಇಲ್ಲದವರಿಗೂ ಅವಕಾಶ ಕೊಟ್ಟಿರುವುದು ಕಂಡುಬಂದಿದೆ.

ಕೆಲವು ಪ್ರಕರಣಗಳಲ್ಲಿ ಜಮೀನು ಅಥವಾ ಜಾಗ ಹಾಗೂ ಮರಗಳ ಮಾಲೀಕತ್ವವನ್ನು ಖಚಿತಪಡಿಸಿಕೊಳ್ಳಲು ಕಂದಾಯ ಇಲಾಖೆಯ ದಾಖಲೆಗಳನ್ನು ಪರಿಶೀಲಿಸದೇ ಮತ್ತು ಸಂಬಂಧಿಸಿದ ಅಧಿಕಾರಿಗಳ ಅಭಿಪ್ರಾಯವನ್ನೂ ಕೇಳದೇ ಮರಗಳನ್ನು ಕಡಿಯಲು ಆದೇಶ ನೀಡಿರುವುದನ್ನು ಗುರುತಿಸಲಾಗಿದೆ.

ಇತರ ಪ್ರಕರಣಗಳಲ್ಲಿ, ಕೆಳಹಂತದ ಅಧಿಕಾರಿಗಳಿಂದ ಅನುಮತಿ ಪಡೆದುಕೊಂಡಿರುವ ಬಗ್ಗೆ ದಾಖಲೆಗಳು ದೊರೆತಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೊಸದಾಗಿ ಸಲ್ಲಿಕೆಯಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಹೊಸದಾಗಿ ಅಭಿ‍ಪ್ರಾಯ ಪಡೆಯುವ ಬದಲಿಗೆ, 10 ವರ್ಷಗಳ ಹಿಂದಿನ ಅಭಿಪ್ರಾಯವನ್ನು ‍ಪರಿಗಣಿಸುವ ಚಮತ್ಕಾರವೂ ನಡೆದಿದೆ!

ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, ‘ಹೀಗೆ ಕಡಿಯಲಾದ ತೇಗ, ರೋಸ್‌ವುಡ್ ಹಾಗೂ ಇತರ ಮರಗಳ ಒಟ್ಟು ಮೌಲ್ಯ ₹ 100 ಕೋಟಿಯನ್ನೂ ಮೀರಿದ್ದಾಗಿದೆ ಎಂದು ಅಂದಾಜಿಸಲಾಗಿದೆ. ಹಲವು ದಾಖಲೆಗಳನ್ನು ಪರಿಶೀಲಿಸಿದಾಗ, ಎಷ್ಟು ಮರಗಳನ್ನು ಕಡಿಯಲಾಗಿದೆ ಎಂಬ ನಿಖರ ಮಾಹಿತಿಯೇ ಇಲ್ಲದಿರುವುದನ್ನೂ ಗುರುತಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಸೂಕ್ಷ್ಮ ವಿಚಾರಗಳನ್ನು ತಿಳಿಯಲು ಕ್ರಮಿನಲ್‌ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕಾದ ಅಗತ್ಯವಿದೆ’ ಎನ್ನುತ್ತಾರೆ ಅವರು.

‘ಆ ವರದಿಯನ್ನು ಪರಿಶೀಲಿಸಲಾಗುವುದು. ನಿಯಮ ಉಲ್ಲಂಘನೆ ಆಗಿರುವುದು ಕಂಡುಬಂದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಪ್ರತಿಕ್ರಿಯಿಸಿದರು. ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ಚಕ್ರಪಾಣಿ ಪ್ರತಿಕ್ರಿಯಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT