ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಮಳೆ, ಭೋರ್ಗರೆವ ಜಲಪಾತಗಳು: ತುಂಗಾ, ಹೇಮಾವತಿ ಜಲಾಶಯ ಭರ್ತಿ

ಕೆಆರ್‌ಎಸ್‌ ಭರ್ತಿಗೆ ಒಂದು ಅಡಿಯಷ್ಟೇ ಬಾಕಿ
Last Updated 10 ಜುಲೈ 2022, 18:47 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಬಿರುಸು ಮುಂದುವರಿದಿದ್ದು, ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಹೆಚ್ಚುತ್ತಿದೆ. ನದಿಗೆ ಹೆಚ್ಚಿನ ನೀರು ಹರಿಸಲಾಗುತ್ತಿದ್ದು, ವಿವಿಧ ಜಲಪಾತಗಳು ಮೈದುಂಬಿದ್ದು, ಜೀವಕಳೆ ಪಡೆದುಕೊಂಡಿವೆ.

ಮಂಡ್ಯ ವರದಿ: ಜಿಲ್ಲೆಯ ಕೆಆರ್‌ಎಸ್‌ ಜಲಾಶಯದಿಂದ ಭಾನುವಾರ ಸಂಜೆ 26,143 ಕ್ಯುಸೆಕ್‌ ನೀರು ಹೊರಬಿಡಲಾಗಿದೆ. ನದಿ ಪಾತ್ರದ ಜನರಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳಲು ಸೂಚಿಸಲಾಗಿದೆ.

ಜಲಾಶಯದ ನೀರಿನ ಮಟ್ಟ ಸಂಜೆ ವೇಳೆಗೆ 123 ಅಡಿ ಗಡಿ ದಾಟಿದ್ದು, ಭರ್ತಿಗೆ ಒಂದು ಅಡಿಯಷ್ಟೇ ಬಾಕಿ ಇದೆ. 26 ಸಾವಿನ ಕ್ಯುಸೆಕ್‌ ನೀರು ಬಿಡಲಾಗುತ್ತಿದೆ. ಜಿಲ್ಲೆಯ ಗಗನಚುಕ್ಕಿ ಜಲಪಾತದಲ್ಲಿ ನೀರು ಭೋರ್ಗರೆಯುತ್ತಿದೆ.

ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಮುಂಜಾಗ್ರತೆಯಾಗಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ನದಿಯಲ್ಲಿ ನೀರಿನ ಮಟ್ಟ ಇಳಿಯುವವರೆಗೆ ದೋಣಿ ವಿಹಾರ ಇರುವುದಿಲ್ಲ. ಪಕ್ಷಿಗಳು ಸುರಕ್ಷಿತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಆರ್‌ಎಸ್ ಮತ್ತು ಕಬಿನಿ ಎರಡು ಜಲಾಶಯದಿಂದ ನೀರು ಹರಿಸಲಾಗಿದೆ. ಗಗನಚುಕ್ಕಿಯಲ್ಲಿ419 ಅಡಿ ಆಳದ ಪ್ರಪಾತಕ್ಕೆ ಧುಮ್ಮಿಕ್ಕುತ್ತಿದ್ದ ಜಲ ವೈಭವ ವೀಕ್ಷಣೆಗೆ ಬೆಂಗಳೂರು, ಮೈಸೂರು, ಚಾಮರಾಜನಗರ, ರಾಮನಗರ ಕಡೆಯಿಂದ ಪ್ರವಾಸಿಗರ ಭೇಟಿ ಹೆಚ್ಚುತ್ತಿದೆ.

ಶಿವಮೊಗ್ಗ ವರದಿ: ಮಲೆನಾಡಿನಲ್ಲಿ ತುಂಗಾ, ಭದ್ರಾ, ಶರಾವತಿ, ಕುಮದ್ವತಿ ನದಿಗಳು ಭೋರ್ಗರೆಯುತ್ತಿವೆ. ಲಕ್ಕವಳ್ಳಿಯ ಭದ್ರಾ ಜಲಾಶಯದಲ್ಲಿ ಭಾನುವಾರ ನೀರಿನ ಮಟ್ಟ 171.3 ಅಡಿಗೆ (ಗರಿಷ್ಠ ಮಟ್ಟ 186 ಅಡಿ) ಏರಿದೆ.

ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಇಳಿಕೆಯಾಗಿದ್ದು, ಜಲಾಶಯ ಭರ್ತಿಗೆ ಇನ್ನೂ 43.65 ಅಡಿ ನೀರು ಬರಬೇಕಿದೆ.

ಗಾಜನೂರಿನಲ್ಲಿರುವ ತುಂಗಾ ಜಲಾಶಯ ಭರ್ತಿಯಾಗಿದೆ. 51,386 ಕ್ಯುಸೆಕ್ ನೀರು ನದಿಗೆ ಹರಿಸಲಾಗಿದೆ. ಮಾಣಿ ಜಲಾಶಯಕ್ಕೆ 7,366 ಕ್ಯುಸೆಕ್ ನೀರು ಹರಿದುಬರುತ್ತಿದೆ. ಭರ್ತಿಗೆ 17.30 ಅಡಿ ನೀರು ಅಗತ್ಯವಿದೆ.

ಹೇಮಾವತಿ ಜಲಾಶಯ ಭರ್ತಿ
ಹಾಸನ ವರದಿ: ತಾಲ್ಲೂಕಿನ ಗೊರೂರು ಬಳಿಯ ಹೇಮಾವತಿ ಜಲಾಶಯದಿಂದ 29ಸಾವಿರ ಕ್ಯುಸೆಕ್‌ ಹಾಗೂ ಆಲೂರು ತಾಲ್ಲೂಕಿನ ವಾಟೆಹೊಳೆ ಜಲಾಶಯದಿಂದ 360 ಕ್ಯುಸೆಕ್‌ ನೀರನ್ನು ಹೊರಗೆ ಬಿಡಲಾಗಿದೆ.

ಸಕಲೇಶಪುರ ತಾಲ್ಲೂಕಿನಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಅರಕಲಗೂಡು ತಾಲ್ಲೂಕಿನಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶನಿವಾರ ಲಾರಿ ಮೇಲೆ ಮರ ಬಿದಿದೆ. ಕೊಣನೂರು ಸಮೀಪದ ಹಿರೇಹಳ್ಳಿಯಲ್ಲಿ 3 ಮನೆಗಳ ಗೋಡೆ ಕುಸಿದು ಬಿದ್ದಿದ್ದು, ಗೋಡೆಗಳ ಅಡಿಯಲ್ಲಿ ಸಿಲುಕಿ ಹಸುವೊಂದು ಮೃತಪಟ್ಟಿದೆ. ಅರಕಲಗೂಡಿನಲ್ಲಿ 2 ಮನೆಗಳು ಕುಸಿದಿವೆ.

ಅಪಾಯದ ಮಟ್ಟ ತಲುಪಿದ ನೇತ್ರಾವತಿ: ಮಂಗಳೂರು ವರದಿ: ಬಂಟ್ವಾಳದ ಸಮೀಪ ನೇತ್ರಾನತಿ ನದಿ ಈ ಮುಂಗಾರಿನಲ್ಲಿ ಮೊದಲ ಬಾರಿಗೆ ಭಾನುವಾರ ಅಪಾಯದ ಮಟ್ಟ (8.6 ಮೀ.) ತಲುಪಿದೆ. ನೇತ್ರಾವತಿಯಲ್ಲಿ ನೀರು ಹರಿವಿನ ಮಟ್ಟ 9 ಮೀ. ಮೀರಿದೆ. ಅಜಿಲಮೊಗರು ಜುಮ್ಮಾ ಮಸೀದಿ ಬಳಿ ನದಿ ನೀರು ಉಕ್ಕಿ ಹರಿದಿದ್ದು, ರಸ್ತೆ ಜಲಾವೃತಗೊಂಡಿತ್ತು. ಸುಳ್ಯ ತಾಲ್ಲೂಕಿನ ಸುಬ್ರಹ್ಮಣ್ಯ ಹಾಗೂಕುಮಾರ ಪರ್ವತದ ಸುತ್ತ ಭಾರಿ ಮಳೆಯಾಗಿದ್ದರಿಂದ ಕುಮಾರಧಾರಾ
ನದಿ ತುಂಬಿ ಹರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT