ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಆಯೋಗ ಆಯುಕ್ತರ ಹುದ್ದೆ ಖಾಲಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್

Published 23 ಆಗಸ್ಟ್ 2023, 16:14 IST
Last Updated 23 ಆಗಸ್ಟ್ 2023, 16:14 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಖಾಲಿ ಇರುವ ಮಾಹಿತಿ ಆಯುಕ್ತರ ಹುದ್ದೆ ಭರ್ತಿ ಮಾಡಬೇಕು ಮತ್ತು ನಾಲ್ಕು ವರ್ಷಗಳಿಂದ  ಸ್ಥಗಿತಗೊಂಡಿರುವ ಕಲಬುರಗಿ ಪೀಠದ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶಿಸಬೇಕು‘ ಎಂದು ಕೋರಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ವಕೀಲೆ ಸುಧಾ ಕಾಟ್ವ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ. ಅರ್ಜಿದಾರರ ಪರ ವಕೀಲ ಎಸ್. ಉಮಾಪತಿ ವಾದ ಮಂಡಿಸಿದರು.

ಅರ್ಜಿಯಲ್ಲಿ ಏನಿದೆ?: ‘ರಾಜ್ಯ ಸರ್ಕಾರ 2019ರಲ್ಲಿ ಬೆಳಗಾವಿ ಮತ್ತು ಕಲಬುರಗಿಯಲ್ಲಿ ಮಾಹಿತಿ ಆಯೋಗದ ಪೀಠಗಳನ್ನು ರಚನೆ ಮಾಡಿದೆ. ಆದರೆ, ಕಲಬುರಗಿ ಪೀಠ ಇನ್ನೂ ಕಾರ್ಯಾರಂಭ ಮಾಡಿಲ್ಲ. ಈ ಪೀಠಕ್ಕೆ 2022ರ ಏಪ್ರಿಲ್‌ನಲ್ಲಿ ರವೀಂದ್ರ ಢಾಕಪ್ಪ ಅವರನ್ನು ಆಯುಕ್ತರನ್ನಾಗಿ ನೇಮಕ ಮಾಡಲಾಯಿತು. ಆದರೆ, ಅವರು ಕಲಬುರಗಿ ಬದಲಿಗೆ ಬೆಂಗಳೂರಿನಲ್ಲೇ ಕಲಾಪ ನಡೆಸುತ್ತಿದ್ದಾರೆ‘ ಎಂದು ಅರ್ಜಿಯಲ್ಲಿ ದೂರಲಾಗಿದೆ.

‘ಬೆಳಗಾವಿ ಪೀಠದಲ್ಲಿದ್ದ ಗೀತಾ ಅವರ ರಾಜೀನಾಮೆ ಬಳಿಕ 2022ರ ಏಪ್ರಿಲ್‌ನಿಂದ ಆಯುಕ್ತರ ನೇಮಕ ಆಗಿಲ್ಲ. ಇಲ್ಲಿ 7,783 ಪ್ರಕರಣ  ಬಾಕಿ ಇವೆ. ಪ್ರತಿ ತಿಂಗಳೂ ಈ ಪೀಠದಲ್ಲಿ ಏಳು ಜಿಲ್ಲೆಗಳ ದೂರು ಮತ್ತು ಮೇಲ್ಮನವಿ ವಿಚಾರಣೆ ನಡೆಸಲಾಗುತ್ತದೆ. ಇಲ್ಲಿ 500ರಿಂದ 700ವರೆಗೆ ಮೇಲ್ಮನವಿ ದಾಖಲಾಗುತ್ತವೆ. ಈತನಕ ಇಲ್ಲಿ ಆಯುಕ್ತರ ನೇಮಕ ಆಗಿಲ್ಲವಾದ ಕಾರಣ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿದೆ‘ ಎಂದು ವಿವರಿಸಲಾಗಿದೆ. 

‘ಮಾಹಿತಿ ಆಯೋಗದಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಸರಿಸುಮಾರು 31 ಸಾವಿರ ಆರ್‌ಟಿಐ ಮನವಿಗಳು ಬಾಕಿ ಇವೆ. ಇವುಗಳಲ್ಲಿ 19,131 ಮನವಿಗಳು ಬೆಳಗಾವಿ ಹಾಗೂ ಕಲಬುರಗಿ ಪೀಠಕ್ಕೆ ಸಂಬಂಧಿಸಿವೆ‘ ಎಂದು ಅರ್ಜಿದಾರರು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT