ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ: ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಕೆಂಡ

Published : 19 ಆಗಸ್ಟ್ 2024, 15:58 IST
Last Updated : 19 ಆಗಸ್ಟ್ 2024, 15:58 IST
ಫಾಲೋ ಮಾಡಿ
Comments

ಬೆಂಗಳೂರು:‌ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸಿ ರಾಜ್ಯದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದರೆ, ಅನೇಕ ಜಿಲ್ಲಾ ಕೇಂದ್ರಗಳಲ್ಲಿ ಸಚಿವರು ಹಾಗೂ ಸಂಸದರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರತಿಭಟನಾ ಸಮಾವೇಶ, ರ‍್ಯಾಲಿಗಳಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು ಹಾಗೂ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೆಲವಡೆ ರಾಜ್ಯಪಾಲರ ಪ್ರತಿಕೃತಿಯನ್ನು ದಹಿಸಿದರು. 

ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಕೆಲವು ಕಿಡಿಗೇಡಿಗಳು ಸಿಟಿ ಬಸ್ಸೊಂದಕ್ಕೆ ಕಲ್ಲು ತೂರಿದ್ದರಿಂದ ಪ್ರಯಾಣಿಕ ಮಹಿಳೆಯೊಬ್ಬರಿಗೆ ಗಾಯವಾಯಿತು. ರಸ್ತೆ ತಡೆ ನಡೆಸಿ, ಟೈರ್‌ಗಳಿಗೆ ಬೆಂಕಿ ಹಚ್ಚಿದವರನ್ನು ಪೊಲೀಸರು ವಶಕ್ಕೆ ಪಡೆದರು. ಆಕ್ರೋಶಿತ ಕಾರ್ಯಕರ್ತರು ರಾಜ್ಯಪಾಲ ಮತ್ತು ಬಿಜೆಪಿ ನಾಯಕರಿಗೆ ಧಿಕ್ಕಾರ ಕೂಗಿದರು.

ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಲು ಪೆಟ್ರೋಲ್ ಸುರಿಯುವಾಗ ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ‌ ಬೆಂಕಿ ತಗಲಿತು. ತಕ್ಷಣ ಸುತ್ತಲಿನ ಜನರು ಬೆಂಕಿ ನಂದಿಸಿದರು. ದಾವಣಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರ ಅಣಕು ಶವಯಾತ್ರೆ ನಡೆಸಿದರು. ಅಲ್ಲದೆ, ಅವರ ಪ್ರತಿಕೃತಿ ನಿರ್ಮಿಸಿ ಹೆಗಲ ಮೇಲೆ ಹೊತ್ತು ಮಂಡಕ್ಕಿ ತೂರಿದರು. ಅಣಕು ಶವ ಸುಡಲು ಮುಂದಾದ ಪ್ರತಿಭಟನೆಕಾರರನ್ನು ಪೊಲೀಸರು ತಡೆದರು. ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.

ಕೆಲವೆಡೆ ‘ರಾಜ್ಯಪಾಲರು ಬಿಜೆಪಿ-ಜೆಡಿಎಸ್ ಏಜೆಂಟರಾಗಿದ್ದಾರೆ’, ‘ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ’ ಎಂಬ ಬರಹಗಳಿದ್ದ ಫಲಕಗಳು, ಪ್ರಧಾನಿ ನರೇಂದ್ರ ಮೋದಿಯೊಂದಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಇರುವ ಚಿತ್ರಗಳನ್ನು ಕಾರ್ಯಕರ್ತರು ಪ್ರದರ್ಶಿಸಿದರು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ  ಡಿ.ಕೆ. ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಸತೀಶ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಜಮೀರ್ ಅಹಮದ್ ಖಾನ್, ಕೃಷ್ಣ ಬೈರೇಗೌಡ, ಈಶ್ವರ್ ಖಂಡ್ರೆ, ರಹೀಂ ಖಾನ್ ಮತ್ತು ಕೆಲವು ಶಾಸಕರು ಭಾಗವಹಿಸಿದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಹುತೇಕ ಸಚಿವರು, ರಾಜ್ಯಪಾಲರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

‘ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ಬಳಸಿಕೊಂಡು ರಾಜಕೀಯ ಪಿತೂರಿ ಮೂಲಕ ಕರ್ನಾಟಕದಲ್ಲಿನ ಚುನಾಯಿತ ಸರ್ಕಾರವನ್ನು ವಜಾಗೊಳಿಸುವ ಹುನ್ನಾರ ನಡೆಸಿದೆ. ರಾಜಭವನವನ್ನು ರಾಜಕೀಯದ ಅಂಗಳವನ್ನಾಗಿ ಮಾಡಲಾಗಿದೆ. ಸಂವಿಧಾನದ ರಕ್ಷಣೆ ಹೊತ್ತ ರಾಜ್ಯಪಾಲರು ರಾಜಕೀಯ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT