ಮೈಸೂರು: ಗೋವಾ- ಕಾರವಾರ ಸಂಪರ್ಕಿಸುವ ಕಾಳಿ ನದಿ ಸೇತುವೆ ಕುಸಿದು ಬಿದ್ದಿರುವ ಕುರಿತು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಅವರಿಗೆ ಕರೆ ಮಾಡಿ ಬುಧವಾರ ಮಾಹಿತಿ ಪಡೆದರು.
ಆ ಜಿಲ್ಲೆಯಲ್ಲಿ ಎಲ್ಲ ಸೇತುವೆಗಳು, ರಸ್ತೆಗಳ ಸುರಕ್ಷತೆಯ ಕುರಿತು ಖಾತರಿಪಡಿಸುವಂತೆ ಹಾಗೂ ಯಾವುದೇ ಜೀವ ಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಮುಖ್ಯಮಂತ್ರಿ ಸೂಚನೆ ನೀಡಿದರು.
ಘಟನೆಯ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ, ‘ಸೇತುವೆ ಕುಸಿದ ಸಂದರ್ಭದಲ್ಲಿ ಗಾಯಗೊಂಡ ಲಾರಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣ ಕಾರ್ಯಚರಣೆಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸೇತುವೆಯ ಪರಿಶೀಲನೆಗಾಗಿ ಮತ್ತು ಪ್ರದೇಶದಲ್ಲಿನ ಎಲ್ಲಾ ಸೇತುವೆಗಳ ಸುರಕ್ಷತೆಯನ್ನು ಖಚಿತಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅಧಿಕೃತ ಪತ್ರವನ್ನು ಕಳುಹಿಸಲಾಗಿದೆ’ ಎಂದು ವಿವರಿಸಿದರು.