ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗೀತ ನೃತ್ಯ ಅಕಾಡೆಮಿ | ಕೃಪಾ ಫಡಕೆ ನೇಮಕ ರದ್ದು; ಶುಭಾ ಧನಂಜಯ್ ನೇಮಕ

Published 12 ಜೂನ್ 2024, 23:30 IST
Last Updated 12 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ತಿಂಗಳ ಹಿಂದಷ್ಟೇ ಸಂಗೀತ ನೃತ್ಯ ಅಕಾಡೆಮಿಗೆ ಡಾ. ಕೃಪಾ ಫಡಕೆ ಅವರನ್ನು ನೇಮಕ ಮಾಡಿದ್ದ ಸರ್ಕಾರ, ಆ ಆದೇಶವನ್ನು ರದ್ದು ಪಡಿಸಿ ಈ ಸ್ಥಾನಕ್ಕೆ ಶಿವಮೊಗ್ಗದ ಶುಭಾ ಧನಂಜಯ ಅವರನ್ನು ನೇಮಕ ಮಾಡಿದೆ.

ಕನ್ನಡ ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುವ ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ಇದೇ ವರ್ಷದ ಮಾರ್ಚ್‌ 15ರಂದು ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ನೇಮಕಾತಿ ಆದೇಶದ ಬೆನ್ನಲ್ಲೇ, ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದಾಗಿ ಯಾರೊಬ್ಬರೂ ಅಧಿಕಾರ ಸ್ವೀಕರಿಸಿರಲಿಲ್ಲ.

ಆದೇಶ ಹೊರಬಿದ್ದ ಬೆನ್ನಲ್ಲೇ, ‘ಸಂಘಪರಿವಾರದ ಚಿಂತನೆಯಿರುವವರನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೇಮಕ ಮಾಡಲಾಗಿದೆ’ ಎಂದು ಕೆಲವರು ಹುಯಿಲೆಬ್ಬಿಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು. ಜಾತ್ಯತೀತ, ಸೌಹಾರ್ದತೆಯ ಆಶಯ ಇರುವವರನ್ನು ನೇಮಕ ಮಾಡಿ ಎಂದು ಆಗ್ರಹಿಸಿದ್ದ ಕೆಲವರು, ನೇಮಕವಾದವರು ಬಿಜೆಪಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಚಿತ್ರಗಳನ್ನೂ ಲಗತ್ತಿಸಿದ್ದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ಹೊರಡಿಸಿದ ಆದೇಶದಲ್ಲಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಮೈಸೂರಿನ ಡಾ. ಕೃಪಾ ಫಡಕೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯೆ ವಿಜಯಲಕ್ಷ್ಮಿ ಕೌಟಗಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಮಾಲೂರು ವಿಜಿ ಅವರ ನಾಮನಿರ್ದೇಶನವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಇವರ ಪೈಕಿ, ಫಡಕೆ ಮತ್ತು ಕೌಟಗಿ ನೇಮಕಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಮಾಲೂರು ವಿಜಿ ಅವರು ಹಿಂದಿನ ಅವಧಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಕಾರಣಕ್ಕೆ ಬದಲಾವಣೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರಾಗಿ ರಿಪ್ಪನ್ ಪೇಟೆಯ ಸರ್ಕಾರಿ ಪದವಿ ಕಾಲೇಜಿನ ಇಂಗ್ಲಿಷ್‌ ಉಪನ್ಯಾಸಕ ಬಿ.ಎಲ್. ರಾಜು ಮತ್ತು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ರಂಗ ಕಲಾವಿದ ಜಿ.ವಿ. ರವೀಂದ್ರನಾಥ (ರವೀಂದ್ರನಾಥ ಸಿರಿವರ) ಅವರನ್ನು ನೇಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT