ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ತಲುಪಿದ ಕನ್ನಡ ಗೀತೆ

‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ...’: ಕೋಟ್ಯಂತರ ಮನಸ್ಸು ಮುಟ್ಟಿದ ಹಾಡು
Published 14 ಜನವರಿ 2024, 20:41 IST
Last Updated 14 ಜನವರಿ 2024, 20:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ದಿನ ಹತ್ತಿರವಾಗುತ್ತಿದ್ದಂತೆ ದೇಶದ ವಿವಿಧೆಡೆಗಳಿಂದ ಬಗೆ ಬಗೆಯ ರೂಪದಲ್ಲಿ ಕಾಣಿಕೆಗಳು, ಉಡುಗೊರೆಗಳು ತಲುಪುತ್ತಿರುವುದು ಒಂದೆಡೆಯಾದರೆ, ಕನ್ನಡಿಗರೊಬ್ಬರು ರಚಿಸಿದ ಪ್ರಸಿದ್ಧ ‘ರಾಮಸ್ತುತಿ’ಯೊಂದು ಅಯೋಧ್ಯೆ ತಲುಪಿ ರಾಮನಂಗಳದಲ್ಲೂ ರಿಂಗಣಿಸುತ್ತಿದೆ.

‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ...ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ’ ಎಂಬ ಕನ್ನಡ ಗೀತೆಯೇ ಅಯೋಧ್ಯೆ ತಲುಪಿದ ಹಾಡು. ಯು ಟ್ಯೂಬ್‌ನಲ್ಲಿ 4–6 ಕೋಟಿ ಜನ ವೀಕ್ಷಿಸಿ ಆನಂದಪಟ್ಟಿದ್ದಾರೆ. ಬಹಳಷ್ಟು ಮನೆಗಳಲ್ಲಿ ಪ್ರತಿದಿನ ಸುಪ್ರಭಾತ ಈ ಹಾಡಿನ ಮೂಲಕವೇ ಆಗುತ್ತಿದೆ. ನಾಡಿನ ಹಲವು ಮಠ,ಮಂದಿರಗಳಲ್ಲಿಯೂ ಈ ಹಾಡು ಮೊಳಗುತ್ತಿದೆ. 

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಈ ಹಾಡನ್ನು ಮೆಚ್ಚಿಕೊಂಡಿದ್ದು, ಇಂಥದ್ದೊಂದು ಅರ್ಥಗರ್ಭಿತ ಹಾಡನ್ನು ನೀಡಿದ್ದಕ್ಕೆ ‘ಎಕ್ಸ್‌’ ಖಾತೆಯಲ್ಲಿ ಕನ್ನಡದಲ್ಲಿಯೇ ಟ್ವೀಟ್ ಮಾಡಿ ಅಭಿನಂದಿಸಿದೆ.

ಇಷ್ಟೊಂದು ವ್ಯಾಪಕವಾಗಿ ಜನಮನಗೆದ್ದಿರುವ ಹಾಡಿನ ರಚನಾಕಾರರು ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಮೂಲದ ಪ್ರಸ್ತುತ ಬೆಂಗಳೂರು ನಿವಾಸಿ, ಸಾಹಿತಿ ಗಜಾನನ ಶರ್ಮಾ ಅವರು. 

‘ಈ ಹಾಡು ಕನ್ನಡವಲ್ಲದೇ ತಮಿಳು, ತೆಲುಗಿಗೂ ಅನುವಾದಗೊಂಡಿದ್ದು ಅಲ್ಲಿಯೂ ಜನಪ್ರಿಯಗೊಂಡಿದೆ. ನನ್ನ ಗೀತೆ ಇಷ್ಟೊಂದು ಜನಮೆಚ್ಚುಗೆ ಪಡೆದು, ರಾಮ ಮಂದಿರ ಉದ್ಘಾಟನಾ ಸಂದರ್ಭದಲ್ಲಿ ಅಲ್ಲಿಗೆ ಈ ಹಾಡು ತಲುಪುತ್ತದೆಂದು ಊಹೆ ಕೂಡ ಮಾಡಿರಲಿಲ್ಲ. ಇದು ವಿಸ್ಮಯ ಹಾಗೂ ಧನ್ಯತೆಯ ಕ್ಷಣ’ ಎಂದು ಗಜಾನನ ಶರ್ಮಾ ‘ಪ್ರಜಾವಾಣಿ’ಯೊಂದಿಗೆ ಸಂತಸ ವ್ಯಕ್ತಪಡಿಸಿದರು.

ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಸೂಪರಿಂಟೆಂಡೆಂಟ್ ಎಂಜಿನಿಯರ್ ಆಗಿ ನಿವೃತ್ತರಾಗಿರುವ ಶರ್ಮಾ, ನಾಟಕ, ರಂಗಭೂಮಿ, ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರು. ಅವರ ಶರಾವತಿ ಸುತ್ತಮುತ್ತಲಿನ ಬದುಕಿನ ಕಥನ ‘ಪುನರ್ವಸು’ ಹಾಗೂ ಕೆಳದಿಯ ಕರಿಮೆಣಸಿನ ರಾಣಿ ‘ಚೆನ್ನಭೈರಾದೇವಿ’ ಕಾದಂಬರಿಗಳು, ಸರ್‌.ಎಂ.ವಿಶ್ವೇಶ್ವರಯ್ಯನವರ ವೃತ್ತಿಜೀವನದ ಆತ್ಮಕಥೆ ‘ನನ್ನ ವೃತ್ತಿಜೀವನದ ನೆನಪುಗಳು’ ಅನುವಾದ, ‘ಕಾಡು ಕಣಿವೆಯ ಹಾಡುಹಕ್ಕಿ ಗರ್ತೀಕೆರೆ ರಾಘಣ್ಣ’ ಇವರ ಪ್ರಮುಖ ಕೃತಿಗಳು.

ಹಾಡು ಹುಟ್ಟಿದ್ದು...:

‘ಈ ಹಾಡು ಹುಟ್ಟಿದ್ದು ಮೂಲತಃ ರಾಮನಿಗಾಗಿಯೇ. ಗಿರಿನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ರಾಮಕಥೆಗಾಗಿ ಚಾತುರ್ಮಾಸದ ವೇಳೆ ಉತ್ತಮ ಗೀತ ರಚನೆಗೆ ಕೋರಿದ್ದರು. ಹೀಗೆ ಹುಟ್ಟಿಕೊಂಡ ಈ ಗೀತೆಯನ್ನು ಸ್ವಾಮೀಜಿಯಲ್ಲದೇ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಕೂಡ ಹಾಡಿದ್ದರು. ಆ ನಂತರ ಅದಕ್ಕೆ ನನ್ನ  ಪುತ್ರ ಸಾಕೇತ್ ಶರ್ಮಾ ಸಂಗೀತ ನೀಡಿದರು. ಗಾಯಕಿ ಸುಪ್ರಭಾ ಧ್ವನಿ ನೀಡಿ ಅದನ್ನು ಯು ಟ್ಯೂಬ್‌ಗೆ ಬಿಟ್ಟರು. ಅಲ್ಲಿಂದ ಈ ಗೀತೆಗೆ ಹಲವು ಗಾಯಕರು ಧ್ವನಿ ನೀಡಿದ್ದಾರೆ. ಅವೆಲ್ಲವೂ ಜನಪ್ರಿಯಗೊಂಡಿವೆ’ ಎಂದು ಗಜಾನನ ಶರ್ಮಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT