ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯಲ್ಲಿ ಗೋಲ್‌ಮಾಲ್; ಕಮಿಷನ್‌ಗೆ ಡೀಲ್‌!

ಎಗ್ಗಿಲ್ಲದೆ ದುಡ್ಡು ಹೊಡೆಯುವ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಎಂಬ ‘ಗಂಜಿ ಕೇಂದ್ರ’
Last Updated 10 ನವೆಂಬರ್ 2018, 19:43 IST
ಅಕ್ಷರ ಗಾತ್ರ

ಬೆಂಗಳೂರು: ಗಡಿ ಪ್ರದೇಶಗಳ ‘ಅಭಿವೃದ್ಧಿ’ಗೆಂದೇ ರಾಜ್ಯ ಸರ್ಕಾರ ‘ಪ್ರಾಧಿಕಾರ’ ರಚಿಸಿದೆ. ಆದರೆ, ಇಲ್ಲಿ ನಡೆಯುತ್ತಿರುವ ಗೋಲ್‌ಮಾಲ್‌; ‘ಕಮಿಷನ್‌’ಗಾಗಿ ಡೀಲ್‌ ಬಹಿರಂಗವಾದರೂ ಸರ್ಕಾರ ನಿದ್ದೆ ಮಾಡುತ್ತಿದೆ!

ಪ್ರಾಧಿಕಾರಕ್ಕೆ ‘ಅಪ್ಪ, ಅಮ್ಮ ಯಾರು’ ಎಂದು ಕೇಳಿದರೆ ಉತ್ತರಿಸುವವರೇ ಇಲ್ಲ. ಇದು ಅಕ್ಷರಶಃ, ರಾಜಕಾರಣಿಗಳಿಗೆ ‘ಆಶ್ರಯ’ ನೀಡುವ ಗಂಜಿ ಕೇಂದ್ರದಂತಿದೆ. ವಿಪರ್ಯಾಸವೆಂದರೆ, ಪ್ರಾಧಿಕಾರಕ್ಕೆ ಬಿಡುಗಡೆಯಾದ ಕೋಟಿಗಟ್ಟಲೆ ಅನುದಾನ ನಯಾಪೈಸೆ ಉಳಿಕೆ ಇಲ್ಲದಂತೆ ವೆಚ್ಚವಾಗಿರುವ ಲೆಕ್ಕ ಮಾತ್ರ ಪಕ್ಕಾ ಇದೆ.

ಈ ‘ವ್ಯವಹಾರ’ ಎಲ್ಲ ಸರ್ಕಾರಗಳ ಅವಧಿಯಲ್ಲೂ ತಡೆ ಇಲ್ಲದೆ ಮುಂದುವರಿದಿದೆ. ಇಲ್ಲಿನ ಕಮಿಷನ್ ದಂಧೆಯನ್ನು ಮಟ್ಟ ಹಾಕಬೇಕೆಂಬ ಬೇಡಿಕೆಗೆ ಕಿವಿಗೊಡುವವರೇ ಇಲ್ಲ. ಹಣ ಪೋಲಾಗುತ್ತಿರುವ ವಿಷಯ ವಿಧಾನಸಭೆ– ವಿಧಾನಪರಿಷತ್‌ನಲ್ಲಿ ಪ್ರತಿಧ್ವನಿಸಿದರೂ ಪ್ರಯೋಜನ ಆಗಿಲ್ಲ. ಪ್ರಾಧಿಕಾರದಲ್ಲಿ ಏನು ನಡೆಯುತ್ತಿದೆ ಅನ್ನುವುದು ಸದಸ್ಯರಿಗೇ ಗೊತ್ತಿಲ್ಲ. ಸದಸ್ಯರೊಬ್ಬರಿಗೆ ಕರೆ ಮಾಡಿದರೆ, ‘ನಾನು ಇನ್ನೂ ಸದಸ್ಯನಾಗಿದ್ದೇನೆಯೇ?’ ಎಂಬ ಅನುಮಾನ ವ್ಯಕ್ತಪಡಿಸಿದರು.

10 ತಿಂಗಳ ಹಿಂದೆ ಅವ್ಯವಹಾರ ಆರೋಪ ಕೇಳಿಬಂದಾಗ ನಡೆದ ಪ್ರಾಧಿಕಾರದ ಸಭೆಯಲ್ಲಿ ‘ಎಲ್ಲವನ್ನೂ ಸರಿ ಮಾಡೋಣ’ ಎಂದು ಅಧ್ಯಕ್ಷರಾಗಿದ್ದ ಬಾಬುರಾವ್‌ ಚಿಂಚನಸೂರ ಸದಸ್ಯರಿಗೆ ಸಬೂಬು ಹೇಳಿದ್ದರಂತೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸದಸ್ಯ ಎಂ. ಮಾರುತಿ ವರಪ್ರಸಾದ ರೆಡ್ಡಿ, ‘ಪ್ರಾಧಿಕಾರದಲ್ಲಿ ಉತ್ತರ ಕೊಡುವವರಿಗೆ ದಿಕ್ಕಿಲ್ಲ’ ಎಂದರು.

2009ರಲ್ಲಿ ಅಸ್ತಿತ್ವಕ್ಕೆ ಬಂದ ‘ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ದ ಅಧ್ಯಕ್ಷ ಪಟ್ಟವನ್ನು ಈವರೆಗೆ ನಾಲ್ವರು ಅಲಂಕರಿಸಿದ್ದಾರೆ. 11 ಕಾರ್ಯದರ್ಶಿಗಳು ಕರ್ತವ್ಯ ನಿರ್ವಹಿಸಿದ್ದಾರೆ. ಈ ಪೈಕಿ, ಐವರು ಪ್ರಭಾರ ಹೊಣೆ ಹೊತ್ತಿದ್ದರು. ₹ 120 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದೆ.

ಸದ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಅಧ್ಯಕ್ಷರು. ಈ ವರ್ಷ ₹ 38.06 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಎಂಟು ತಿಂಗಳು ಕಳೆದರೂ ಇನ್ನೂ ಕ್ರಿಯಾಯೋಜನೆ ಸಿದ್ಧಗೊಂಡಿಲ್ಲ. ಕಾರ್ಯದರ್ಶಿ ಇಲ್ಲದ ಕಾರಣಕ್ಕೆ ಇಲಾಖೆಯ ಜಂಟಿ ನಿರ್ದೇಶಕರೊಬ್ಬರಿಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಇತರೆ ಸಿಬ್ಬಂದಿ ಪೈಕಿ ಬಹುತೇಕರು ಹೊರಗುತ್ತಿಗೆ ನೌಕರರು.

19 ಗಡಿ ಜಿಲ್ಲೆ, 55 ತಾಲ್ಲೂಕು ಹಾಗೂ ಆರು ಹೊರ ರಾಜ್ಯಗಳ (ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಗೋವಾ) ಗಡಿ ಕನ್ನಡ ಪ್ರದೇಶಗಳ ಅಭಿವೃದ್ಧಿ ಉಸ್ತುವಾರಿಯನ್ನು ಪ್ರಾಧಿಕಾರ ಹೊಂದಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಬರಗೂರು ರಾಮಚಂದ್ರಪ್ಪ ಮತ್ತು ವಾಟಾಳ್‌ ನಾಗರಾಜ್‌ ಅವರ ಶಿಫಾರಸುಗಳ ಆಧಾರದ ಮೇಲೆ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ.

ಅನುದಾನ ಕೋರಿ ಪ್ರಾಧಿಕಾರಕ್ಕೆ ಸಲ್ಲಿಕೆಯಾದ ಅರ್ಜಿಗಳು, ವಿಲೇವಾರಿ ವೇಳೆ ಪಕ್ಷಪಾತ ಧೋರಣೆ, ಸ್ವಜನಪಕ್ಷಪಾತ ತವರು ಪ್ರೇಮಕ್ಕೆ ಬಲಿಯಾಗಿವೆ. ಅರ್ಜಿ ಹಾಕದ ಸಂಸ್ಥೆಗಳಿಗೂ ಅನುದಾನ ನೀಡಿರುವ ಆರೋಪವಿದೆ.

ಕಲಾವಿದರ ಹೆಸರಿನಲ್ಲಿ ಸಂಸ್ಥೆಗಳನ್ನು ನೋಂದಾಯಿಸಿ ಕೋಟ್ಯಂತರ ಹಣ ವ್ಯಯಿಸಲಾಗಿದೆ. ದಾಖಲೆಗಳಲ್ಲಿ ಭ್ರಷ್ಟಾಚಾರದ ದಟ್ಟ ವಾಸನೆ ಬಡಿಯುತ್ತಿದೆ.

ಪ್ರಾಧಿಕಾರದ ಮೊದಲ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವಧಿಯಲ್ಲಿ ಬಿಡುಗಡೆಯಾದ ಅನುದಾನ ಖರ್ಚಾಗದೆ ಹಿಂದಕ್ಕೆ ಹೋಗಿದೆ ಎಂಬ ಆರೋಪ ಇತ್ತು. ಆದರೆ, ಆ ವರ್ಷದ ಲೆಕ್ಕಪತ್ರದಲ್ಲಿ ಅಷ್ಟೂ ಹಣ ವಿನಿಯೋಗವಾದ ದಾಖಲೆ ಇದೆ! ನಿಕಟಪೂರ್ವ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಆಪ್ತ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ವಿರುದ್ಧ ಭ್ರಷ್ಟಾಚಾರದ ಆರೋಪಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಈ ಹಿಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಮತ್ತೀಹಳ್ಳಿ ಅವರನ್ನು ಮಾತೃ ಇಲಾಖೆಗೆ ಕಳುಹಿಸಿ, ಅಕ್ರಮದ ಬಗ್ಗೆ ತನಿಖೆಗೆ ಆದೇಶಿಸಿದ್ದರು. ಅವ್ಯವಹಾರ ಬಯಲಿಗೆಳೆದ ವ್ಯಕ್ತಿಗೆ ಲಂಚದ ಆಮಿಷ ಒಡ್ಡಿದ್ದರೆಂಬ ಆರೋಪವೂ ರಂಪಾಟಕ್ಕೆ ಕಾರಣವಾಗಿತ್ತು.

ನಿಯಮಗಳನ್ನು ಪಾಲಿಸದೆ ‘ವ್ಯವಹಾರ’ ನಡೆಸುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಮಾಹಿತಿ ಹಕ್ಕಿನಡಿ ಪಡೆದ ವಿವರ ಆಧರಿಸಿಯೂ ದೂರುಗಳು ಸಲ್ಲಿಕೆಯಾಗಿದ್ದವು. ಈ ಬಗ್ಗೆ ತನಿಖೆಗೆ ಸಿದ್ದರಾಮಯ್ಯ ಸರ್ಕಾರ ಆದೇಶಿಸಿತ್ತು. ಮುಂದೇನಾಯಿತೋ ಭಗವಂತನೇ ಬಲ್ಲ. ಸಂಘಸಂಸ್ಥೆಗಳಿಗೆ ನೇರವಾಗಿ ಧನಸಹಾಯ ನೀಡಲಾಗಿದೆ ಎಂಬುದು ಮತ್ತೊಂದು ದೂರು. ಎಷ್ಟು ಮೊತ್ತದ ಹಣ ಬಿಡುಗಡೆಗೊಳಿಸಬೇಕೆಂಬ ಬಗ್ಗೆಯೂ ನಿಯಮವಿಲ್ಲ. ಲೆಕ್ಕ ಪರಿಶೋಧನೆ ನಡೆದಿದ್ದರೂ ಮಾಹಿತಿ ಬಹಿರಂಗ ಆಗಿಲ್ಲ.

ಬಳ್ಳಾರಿ ಗಡಿಯಲ್ಲಿರುವ ಅನಂತಪುರ ಜಿಲ್ಲೆಯ ಕನ್ನಡ ಶಾಲೆಗಳಿಗೆ ಪಠ್ಯಪುಸ್ತಕ ಶೈಕ್ಷಣಿಕ ವರ್ಷಾಂತ್ಯದ ವೇಳೆಗೆ ತಲುಪುತ್ತವೆ. ಕಾಸರ­ಗೋಡು ಕರ್ನಾಟಕದ ಗಡಿ ಜಿಲ್ಲೆ ಎಂಬು­ದನ್ನು ಸರ್ಕಾರ ಮರೆ­ತಂತಿದೆ. ಗೋವಾ ಬೈನಾ ಬೀಚ್‌ನಲ್ಲಿ ಕನ್ನಡಿಗರ ಮನೆಗಳನ್ನು ಧ್ವಂಸ ಮಾಡಿರುವ ಪ್ರಕರಣದ ಕುರಿತು ಬಾಬುರಾವ್ ಚಿಂಚನಸೂರ ಅವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಅಧ್ಯಯನ ವರದಿಯೂ ದೂಳು ತಿನ್ನುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT