ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಿಂದ ರಾಜ್ಯಕ್ಕೆ 3 ವಿಧದ ಅನ್ಯಾಯ: ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಕಿಡಿ

Published 16 ಫೆಬ್ರುವರಿ 2024, 6:53 IST
Last Updated 16 ಫೆಬ್ರುವರಿ 2024, 6:53 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರವು ತೆರಿಗೆ ಪಾವತಿಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿರುವ ಸಿಎಂ ಸಿದ್ದರಾಮಯ್ಯ, ಹಿಂದಿನ ಬಿಜೆಪಿ ಸರ್ಕಾರವು ರಾಜ್ಯಕ್ಕಾದ ನಷ್ಟವನ್ನು ಸರಿಪಡಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಇಂದು (ಶುಕ್ರವಾರ) ವಿಧಾನಸಭೆಯಲ್ಲಿ ಮಂಡಿಸಿದ 2024-25ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ರಾಜ್ಯದಲ್ಲಿ ಸಂಗ್ರಹವಾಗಿರುವ ತೆರಿಗೆ ಮೌಲ್ಯದ ಕುರಿತು ಸಿಎಂ ವಿವರಿಸಿದ್ದಾರೆ.

ತೆರಿಗೆ ಸಂಗ್ರಹ: ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನ

ಕರ್ನಾಟಕ ರಾಜ್ಯವು ದೇಶದಲ್ಲಿ ಅತಿ ಹೆಚ್ಚು ಜಿಎಸ್‌ಟಿ ತೆರಿಗೆ ಸಂಗ್ರಹಿಸುವ 2ನೇ ರಾಜ್ಯವಾಗಿದೆ. 2022-23ಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಜಿಎಸ್‌ಟಿ ತೆರಿಗೆ ಸಂಗ್ರಹಣೆಯು ಶೇ.18ರಷ್ಟು ಹೆಚ್ಚಳ ಕಂಡಿದೆ. ಗ್ಯಾರಂಟಿ ಯೋಜನೆಗಳಿಂದ ಜನರ ಆದಾಯ ಪ್ರಮಾಣ ಹೆಚ್ಚಾಗಿ, ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಿರುವುದನ್ನು ಇದು ತೋರಿಸುತ್ತದೆ ಎಂದು ಸಿಎಂ ತಿಳಿಸಿದ್ದಾರೆ.

ಅಂದಾಜಿಗಿಂತ ಕಡಿಮೆ ತೆರಿಗೆ ಸಂಗ್ರಹ: ಕೇಂದ್ರ ಸರ್ಕಾರದ ನೆರವು

ಸರಕು ಮತ್ತು ಸೇವಾ ತೆರಿಗೆಯನ್ನು ಪರಿಚಯಿಸುವ ಮೂಲಕ ರಾಜ್ಯಗಳ ತೆರಿಗೆ ಸಂಗ್ರಹಣೆಯು ಶೇ.14ರಷ್ಟು ಬೆಳವಣಿಗೆ ಹೊಂದಲಿದೆ. ಒಂದು ವೇಳೆ ಅಂದಾಜಿಗಿಂತ ಕಡಿಮೆ ತೆರಿಗೆ ಸಂಗ್ರಹವಾದರೆ, ಕೇಂದ್ರ ಸರ್ಕಾರದಿಂದ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರಗಳಿಗೆ ಭರವಸೆ ನೀಡಲಾಗಿತ್ತು ಎಂದು ಸಿಎಂ ಹೇಳಿದ್ದಾರೆ.

ರಾಜ್ಯಕ್ಕೆ 7 ವರ್ಷಗಳಲ್ಲಿ ಒಟ್ಟು ₹59,274 ಕೋಟಿ ನಷ್ಟ

ಇದರನ್ವಯ ಶೇ. 14ರಷ್ಟು ಬೆಳವಣಿಗೆ ದರದಂತೆ 2017 ರಿಂದ 2023-24ರವರೆಗೆ ರಾಜ್ಯದಲ್ಲಿ ಒಟ್ಟು ₹4,92,296 ಕೋಟಿ ಜಿಎಸ್‌ಟಿ ತೆರಿಗೆ ಸಂಗ್ರಹಣೆಯಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ವಾಸ್ತವಿಕವಾಗಿ ರಾಜ್ಯದಲ್ಲಿ ₹3,26,764 ಕೋಟಿ ತೆರಿಗೆ ಸ್ವೀಕೃತವಾಗಿದೆ. ಜಿಎಸ್‌ಟಿ ತೆರಿಗೆ ಸಂಗ್ರಹಣೆಯಲ್ಲಿ ₹1,65,532 ಕೋಟಿ ಕೊರತೆ ಉಂಟಾಗಿತ್ತು. ಇದಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೇವಲ ₹1,06,258 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಜಿಎಸ್‌ಟಿ ತೆರಿಗೆಯ ಈ ಅವೈಜ್ಞಾನಿಕ ಅನುಷ್ಠಾನದಿಂದ ರಾಜ್ಯಕ್ಕೆ ಕಳೆದ ಏಳು ವರ್ಷಗಳ ಅವಧಿಯಲ್ಲಿ ಒಟ್ಟು ₹59,274 ಕೋಟಿ ನಷ್ಟವಾಗಿದೆ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಕ್ಕಾದ ಅನ್ಯಾಯ ಸರಿಪಡಿಸುವಲ್ಲಿ ಬಿಜೆಪಿ ಸರ್ಕಾರ ವಿಫಲ

15ನೇ ಹಣಕಾಸು ಆಯೋಗವು 2020-21ಕ್ಕೆ ಅನ್ವಯವಾಗುವಂತೆ ನೀಡಿದ್ದ ಮಧ್ಯಂತರ ವರದಿಯ ಶಿಫಾರಸ್ಸಿನಿಂದ ರಾಜ್ಯಕ್ಕಾದ ಅನ್ಯಾಯವನ್ನು ಸರಿಪಡಿಸುವಲ್ಲಿ ಹಿಂದಿನ ಬಿಜೆಪಿ ಸರ್ಕಾರವು ವಿಫಲವಾಗಿದೆ. ರಾಜ್ಯದ ಜಿಎಸ್‌ಡಿಪಿ ಲೆಕ್ಕಾಚಾರ ಮಾಡುವ ವಿಧಾನದಲ್ಲಿನ ಬದಲಾವಣೆ ಹಾಗೂ 1971ರ ಬದಲು 2011ರ ಜನಗಣತಿ ವರದಿಯ ಬಳಕೆಯಿಂದಾಗಿ ಅಭಿವೃದ್ಧಿಶೀಲ ರಾಜ್ಯಗಳಿಗೆ ಭಾರೀ ನಷ್ಟ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.

14ನೇ ಹಣಕಾಸು ಆಯೋಗ ಶಿಫಾರಸ್ಸು ನೀಡಿದ್ದ ಹಂಚಿಕೆಯ ಸೂತ್ರವನ್ನು ಪಾಲಿಸಿದ್ದರೆ ಕರ್ನಾಟಕ ರಾಜ್ಯಕ್ಕೆ ₹2,77,350 ಕೋಟಿ ತೆರಿಗೆ ಪಾಲು ಸ್ವೀಕೃತವಾಗುತ್ತಿತ್ತು. ಆದರೆ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಿಂದ ರಾಜ್ಯಕ್ಕೆ ₹2,15,253 ಕೋಟಿ ಮಾತ್ರ ಹಂಚಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. 15ನೇ ಹಣಕಾಸು ಆಯೋಗದ ಆರು ವರ್ಷದ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಹಂಚಿಕೆಯಾಗುವ ಒಟ್ಟು ತೆರಿಗೆ ಹಂಚಿಕೆಯಲ್ಲಿ, ರಾಜ್ಯಕ್ಕೆ ₹62,098 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಸೆಸ್‌ ಮತ್ತು ಸರ್‌ಜಾರ್ಜ್‌ ಹೆಚ್ಚಳ

ಕೇಂದ್ರ ಸರ್ಕಾರವು ಸೆಸ್‌ ಮತ್ತು ಸರ್‌ಚಾರ್ಜ್‌ಗಳನ್ನು ಹೆಚ್ಚಿಸುತ್ತಿದ್ದು, ಅವುಗಳನ್ನು ರಾಜ್ಯಗಳೊಂದಿಗೆ ಹಂಚಿಕೆ ಮಾಡುವುದಿಲ್ಲ. ಕೇಂದ್ರ ಸರ್ಕಾರವು ವಿಧಿಸುವ ಸೆಸ್‌ ಮತ್ತು ಸರ್‌ಚಾರ್ಜ್‌ಗಳು 2017-18 ರಿಂದ 2023-24ರ ಅವಧಿಯಲ್ಲಿ ಶೇ.153ರಷ್ಟು ಹೆಚ್ಚಾಗಿದೆ. ಸೆಸ್‌ ಮತ್ತು ಸರ್‌ಚಾರ್ಜ್‌ಗಳನ್ನು ರಾಜ್ಯಗಳೊಂದಿಗೆ ಹಂಚಿಕೆ ಮಾಡಿದ್ದರೆ, ರಾಜ್ಯಗಳಿಗೆ ಒಟ್ಟು ₹11,34,301 ಕೋಟಿ ಹಂಚಿಕೆಯಾಗುತ್ತಿತ್ತು. ಇದರಿಂದ ಕಳೆದ ಏಳು ವರ್ಷಗಳ ಅವಧಿಯಲ್ಲಿ ಒಟ್ಟು ಕರ್ನಾಟಕ ರಾಜ್ಯಕ್ಕೆ ₹45,322 ಕೋಟಿ ನಷ್ಟ ಉಂಟಾಗಿದೆ ಎಂದು ವಿವರಿಸಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ 3 ರೀತಿಯ ಅನ್ಯಾಯ

ಕೇಂದ್ರ ಸರ್ಕಾರದ ಜಿಎಸ್‌ಟಿಯ ಅವೈಜ್ಞಾನಿಕ ಅನುಷ್ಠಾನ, ಸೆಸ್‌ ಮತ್ತು ಸರ್‌ಚಾರ್ಜ್‌ಗಳ ಹೆಚ್ಚಳ ಮತ್ತು ತೆರಿಗೆ ಹಂಚಿಕೆಯ ಸೂತ್ರ ಬದಲಾವಣೆ ಈ ಮೂರು ರೀತಿಯ ಅನ್ಯಾಯಗಳಿಂದ ಹಾಗೂ ರಾಜ್ಯಗಳಿಗೆ ನ್ಯಾಯಯುತವಾಗಿ ಹಣ ಬಿಡುಗಡೆ ಮಾಡದ ಕಾರಣ ದೇಶದ ಎಲ್ಲಾ ರಾಜ್ಯಗಳ ಹಣಕಾಸು ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಸಿಎಂ ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT