ಬೆಂಗಳೂರು: ಡೆಂಗಿ ಜ್ವರವನ್ನು ಸಾಂಕ್ರಾಮಿಕ ಕಾಯಿಲೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ.
ರಾಜ್ಯದಲ್ಲಿ ಈ ವರ್ಷ ಡೆಂಗಿ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ವರದಿಯಾದ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಾಂಕ್ರಾಮಿಕ ರೋಗಗಳ ಕಾಯ್ದೆ–2020ರ ಅಡಿಯಲ್ಲಿನ ನಿಯಮಗಳನ್ನು ತಿದ್ದುಪಡಿ ಮಾಡಿ, ‘ಕರ್ನಾಟಕ ಸಾಂಕ್ರಾಮಿಕ ರೋಗಗಳು (ತಿದ್ದುಪಡಿ ನಿಯಮಗಳು) 2024’ ಎಂಬ ಶೀರ್ಷಿಕೆಯಡಿ ಅಧಿಸೂಚನೆ ಹೊರಡಿಸಲಾಗಿದೆ.
ಜಮೀನು, ನಿವೇಶನ, ಕಟ್ಟಡ, ನೀರಿನ ಟ್ಯಾಂಕ್, ಉದ್ಯಾನ, ಆಟದ ಮೈದಾನ ಸೇರಿ ಯಾವುದೇ ಸ್ಥಳದಲ್ಲಿ ಮಾಲೀಕರು ಅಥವಾ ಸಂಬಂಧಪಟ್ಟ ವ್ಯಕ್ತಿಗಳು ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗೆ ಅಗತ್ಯ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು. ನೀರಿನ ಸಂಗ್ರಹ ಪಾತ್ರೆಗಳು, ಸಂಪ್‌ಗಳು ಮತ್ತು ಓವರ್‌ಹೆಡ್ ಟ್ಯಾಂಕ್‌ಗಳು ಸುರಕ್ಷಿತವಾಗಿ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.
ಸ್ವಚ್ಛತೆ ಬಗ್ಗೆ ನಿಗಾ ವಹಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯನ್ನು ಒಳಗೊಂಡ ಸಕ್ಷಮ ಪ್ರಾಧಿಕಾರ ರಚಿಸಲಾಗಿದೆ. ಈ ಪ್ರಾಧಿಕಾರವು ಡೆಂಗಿ ನಿಯಂತ್ರಣಾ ಕ್ರಮಗಳನ್ನು ಜಾರಿಗೆ ತರುವ, ಪರಿಶೀಲಿಸುವ ಮತ್ತು ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಅಧಿಕಾರ ಹೊಂದಿರಲಿದೆ.
ಸ್ವಚ್ಛತೆ ಕಾಯ್ದುಕೊಳ್ಳದಿದ್ದರೆ ದಂಡ: ಡೆಂಗಿ ಹರಡುವ ಸೊಳ್ಳೆಗಳ ಲಾರ್ವಾ ಉತ್ಪತ್ತಿಯಾಗಲು ಅವಕಾಶ ಮಾಡಿಕೊಟ್ಟರೆ ದಂಡ ವಿಧಿಸಲಾಗುತ್ತದೆ. ಮನೆಯ ಒಳಗೆ ಹಾಗೂ ಹೊರಗೆ ಸ್ವಚ್ಛತೆ ಕಾಯ್ದುಕೊಳ್ಳದಿದ್ದರೆ ನಗರ ಪ್ರದೇಶಗಳಲ್ಲಿನ ಕುಟುಂಬಗಳಿಗೆ ₹400 ಗ್ರಾಮೀಣ ಪ್ರದೇಶಗಳಲ್ಲಿನ ಕುಟುಂಬಗಳಿಗೆ ₹200 ದಂಡ ವಿಧಿಸಲಾಗುತ್ತದೆ. ವಾಣಿಜ್ಯ ಸಂಸ್ಥೆಗಳು ಕಚೇರಿಗಳು ಶಾಲಾ–ಕಾಲೇಜುಗಳು ಆರೋಗ್ಯ ಸೇವಾ ಕ್ಷೇತ್ರಗಳಲ್ಲಿ ನಿಯಮ ಉಲ್ಲಂಘನೆಗೆ ನಗರ ಪ್ರದೇಶಗಳಿಗೆ ₹1 ಸಾವಿರ ಗ್ರಾಮೀಣ ಪ್ರದೇಶಗಳಿಗೆ ₹500 ಗೊತ್ತುಪಡಿಸಲಾಗಿದೆ. ಕಟ್ಟಡ ನಿರ್ಮಾಣ ಸ್ಥಳಗಳು ಮತ್ತು ಖಾಲಿ ನಿವೇಶನಗಳಿಗೆ ಸಂಬಂಧಿಸಿದಂತೆ ನಗರ ಪ್ರದೇಶಗಳಿಗೆ ₹2 ಸಾವಿರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ₹1 ಸಾವಿರ ದಂಡ ನಿಗದಿಪಡಿಸಲಾಗಿದೆ.
Government of Karnataka notifies Dengue fever, including severe forms of Dengue fever as an Epidemic Diseases in the state and makes regulations to amend the Karnataka Epidemic Diseases Regulations 2020 pic.twitter.com/OZZRGMqTXP
— ANI (@ANI) September 3, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.