ಬೆಂಗಳೂರು: ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ’ ಎನ್ನಲಾದ ಬಹುಕೋಟಿ ಬಿಟ್ ಕಾಯಿನ್ ಪ್ರಕರಣದ ತನಿಖೆಗೆ ಪರಿಣಿತ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ತೆರೆಮರೆಯಲ್ಲಿ ಸಿದ್ಧತೆ ಆರಂಭವಾಗಿದೆ.
‘ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿರುವ ಬಿಟ್ ಕಾಯಿನ್ ಪ್ರಕರಣದ ಮರು ತನಿಖೆ ನಡೆಸಿ’ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್, ಈಗಾಗಲೇ ಸಿಐಡಿ ಡಿಜಿಪಿ ಎಂ.ಎ. ಸಲೀಂ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಅಲೋಕ್ ಮೋಹನ್ ಅವರಿಗೆ ಪತ್ರ ಬರೆದಿದ್ದಾರೆ.
‘ಪತ್ರ ಆಧರಿಸಿ ಗೃಹ ಇಲಾಖೆಗೆ ಪ್ರಸ್ತಾವ ಸಲ್ಲಿಸಲು ಡಿಜಿ– ಐಜಿಪಿ, ಸಿದ್ಧತೆ ನಡೆಸುತ್ತಿದ್ದಾರೆ. ಪ್ರಸ್ತಾವ ಸಲ್ಲಿಕೆಯಾದ ನಂತರ ಗೃಹ ಇಲಾಖೆಯಿಂದ ಎಸ್‌ಐಟಿ ರಚನೆಗೆ ಆದೇಶ ಹೊರಬೀಳಲಿದೆ. ಎಸ್‌ಐಟಿಗೆ ಯಾವೆಲ್ಲ ಅಧಿಕಾರಿಗಳು ಸೂಕ್ತ? ಎಂಬುದರ ಬಗ್ಗೆ ಹಿರಿಯ ಅಧಿಕಾರಿಗಳು ಈಗಾಗಲೇ ಚಿಂತನೆ ಆರಂಭಿಸಿದ್ದಾರೆ.
ಆರೋಪ– ಪ್ರತ್ಯಾರೋಪ: ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಸಿಸಿಬಿ ಹಾಗೂ ಸಿಐಡಿ ಎರಡೂ ಕಡೆ ದೂರುಗಳು ದಾಖಲಾಗಿದ್ದವು. ‘ಸೂಕ್ತ ತನಿಖೆ ಮಾಡಿಲ್ಲ’ ಎಂಬುದಾಗಿ ಸಿಐಡಿ, ಸಿಸಿಬಿ ಮೇಲೆ ಆರೋಪ ಹೂರಿಸಿತ್ತು. ಅದಕ್ಕೆ ಪ್ರತಿಕ್ರಿತಿಸಿದ ಸಿಸಿಬಿ, ‘ಎಲ್ಲವೂ ಕಾನೂನಿನಡಿ ನಡೆದಿದೆ’ ಎಂದಿತ್ತು. ಪ್ರಕರಣದಲ್ಲಿ ಆರೋಪ–ಪ್ರತ್ಯಾರೋಪ ಇಂದಿಗೂ ಮುಂದುವರಿದಿದೆ.
ಇದರ ಬೆನ್ನಲ್ಲೇ ನಗರದ ಹಿಂದಿನ ಕಮಿಷನರ್ ಕಮಲ್ ಪಂತ್ ಸಹ ಡಿಜಿ–ಐಜಿಪಿಗೆ ಪತ್ರ ಬರೆದಿರುವುದಾಗಿ ಗೊತ್ತಾಗಿದೆ.
‘ನನ್ನ ಅಧಿಕಾರ ಅವಧಿಯಲ್ಲಿ ಸಿಸಿಬಿ ಉತ್ತಮವಾಗಿ ಕೆಲಸ ಮಾಡಿದೆ. ಬಿಟ್ ಕಾಯಿನ್ ಪ್ರಕರಣದ ತನಿಖೆಯೂ ಪಾರದರ್ಶಕವಾಗಿ ನಡೆದಿದೆ. ಸಿಸಿಬಿ ಹಾಗೂ ಸಿಐಡಿ ಎರಡೂ ಕಡೆ ಬಿಟ್ ಕಾಯಿನ್ ಸಂಬಂಧ ಪ್ರಕರಣಗಳು ದಾಖಲಾಗಿವೆ. ಆದರೆ, ವೃತ್ತಿ ವೈಷಮ್ಯದಿಂದಾಗಿ ಕೆಲ ಆರೋಪಗಳನ್ನು ಮಾಡಲಾಗುತ್ತಿದೆ. ತನಿಖೆ ಮಾಡುವುದಾದರೆ, ಸ್ವತಂತ್ರ ತನಿಖಾ ತಂಡದಿಂದ ಮಾಡಿಸಿ’ ಎಂದು ಪತ್ರದಲ್ಲಿ ತಿಳಿಸಿರುವುದಾಗಿ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.