ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ದಾಳಿ: ಗ್ರಾಮ ಪಂಚಾಯ್ತಿ ಸದಸ್ಯನ ಬಳಿ ₹ 25 ಕೋಟಿ ಆಸ್ತಿ ಪತ್ತೆ

Published 9 ಜನವರಿ 2024, 14:40 IST
Last Updated 9 ಜನವರಿ 2024, 14:40 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಚನ್ನೇನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಎಚ್.ಎಸ್.ಸುರೇಶ್ ಬಳಿ ₹ 25 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಲೋಕಾಯುಕ್ತ ಪೊಲೀಸರು ಇಂದು (ಮಂಗಳವಾರ) ಪತ್ತೆ ಮಾಡಿದ್ದಾರೆ.

ರಾಜ್ಯದ ಆರು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ಪತ್ತೆ ಮಾಡಿದ್ದಾರೆ.

ಇದರಲ್ಲಿ ಗರಿಷ್ಠ ಪ್ರಮಾಣದ ಆಸ್ತಿ ಪತ್ತೆಯಾಗಿರುವುದು ಸುರೇಶ್ ಬಳಿ. ಇವರಿಗೆ ಸೇರಿದ 6 ಕಡೆಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು. ಇದರಲ್ಲಿ 16 ನಿವೇಶನ, 1 ವಾಸದ ಮನೆ, 7.6 ಎಕರೆ ಕೃಷಿ ಜಮೀನು ಸೇರಿ ₹ 21.27 ಕೋಟಿಯಷ್ಟು ಸ್ಥಿರಾಸ್ತಿ ಪತ್ತೆಯಾಗಿದೆ.

₹ 11.97 ಲಕ್ಷ ನಗದು, ₹ 2.11 ಕೋಟಿ ಮೌಲ್ಯದ ಚಿನ್ನಾಭರಣ, ₹ 2.07 ಕೋಟಿ ಮೌಲ್ಯದ ಬೆಲೆಬಾಳುವ ವಾಹನಗಳು ಸೇರಿ ಒಟ್ಟು ₹ 4.30 ಕೋಟಿ ಮೊತ್ತದ ಚರಾಸ್ತಿ ಪತ್ತೆಯಾಗಿದೆ.

ಬೆಸ್ಕಾಂ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್ ಬಳಿ ₹6.37 ಕೋಟಿ

ಬೆಸ್ಕಾಂನ ಮುಖ್ಯ ಕಚೇರಿಯಲ್ಲಿ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಂ.ಎಲ್.ನಾಗರಾಜ್ ಅವರ ಬಳಿ ₹ 6.37 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಇವರಿಗೆ ಸೇರಿದ ಏಳು ಕಡೆಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದರು. 13 ನಿವೇಶನ, 2 ವಾಸದ ಮನೆಗಳು, ಕೃಷಿ ಜಮೀನು ಸೇರಿ ಒಟ್ಟು ₹ 5.35 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ.

₹ 6.77 ಲಕ್ಷ ನಗದು, ₹ 16.44 ಲಕ್ಷ ಮೌಲ್ಯದ ಆಭರಣ, ₹ 13.50 ಲಕ್ಷ ಬೆಲೆಯ ವಾಹನಗಳು, ₹ 11.19 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳ ಸಹಿತ ಒಟ್ಟು ₹ 63.66 ಲಕ್ಷ ಬೆಲೆಯ ಚರಾಸ್ತಿಗಳು ಪತ್ತೆಯಾಗಿವೆ.

ಪಿಡಿಒ ಪದ್ಮನಾಭ್ ಬಳಿ ₹ 5.98 ಕೋಟಿ ಆಸ್ತಿ

ದೇವನಹಳ್ಳಿ ತಾಲ್ಲೂಕಿನ ಗ್ರಾಮ ಪಂಚಾಯ್ತಿ ಅಧಿಕಾರಿ ಡಿ.ಎಂ.ಪದ್ಮನಾಭ ಬಳಿ ₹ 5.98 ಕೋಟಿ ಮೌಲ್ಯದ ಆಸ್ತಿಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ.

ಇವರಿಗೆ ಸೇರಿದ ಒಟ್ಟು 6 ಕಡೆಗಳಲ್ಲಿ ಪೊಲೀಸರು ದಾಳಿ ನಡೆಸಿದರು. ಒಂದು ಕೈಗಾರಿಕಾ ನಿವೇಶನ, 2 ವಾಸದ ಮನೆಗಳು, 8.18 ಎಕರೆ ಕೃಷಿ ಜಮೀನು, ಒಂದು ಫಾರ್ಮ್‌ ಹೌಸ್ ಸೇರಿ ಒಟ್ಟು ₹ 5.35 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ.

₹ 2.62 ಲಕ್ಷ ನಗದು, ₹ 17.24 ಲಕ್ಷದ ಬೆಲೆಯ ಚಿನ್ನಾಭರಣ, ₹ 28.75 ಲಕ್ಷ ಬೆಲೆಯ ವಾಹನಗಳು ಮತ್ತು ₹ 15 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ₹ 63.66 ಲಕ್ಷ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ.

ಕೆಆರ್‌ಐಡಿಎಲ್‌ ಪ್ರಭಾರ ಇಇ ಸೈಯದ್ ಮುನೀರ್ ಅಹಮದ್ ಬಳಿ ₹ 5.48 ಕೋಟಿ

ರಾಮನಗರ ಜಿಲ್ಲೆಯ ಕೆಆರ್‌ಯಡಿಎಲ್‌ ಕಚೇರಿಯ ಪ್ರಭಾರ ಕಾರ್ಯ ನಿರ್ವಾಹಕ ಎಂಜಿನಿಯರ್ ಸೈಯದ್ ಮುನೀರ್ ಅಹಮದ್ ಬಳಿ ₹ 5.48 ಕೋಟಿ ಮೌಲ್ಯದ ಆಸ್ತಿಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ.

ಸೈಯದ್ ಮುನೀರ್ ಅವರಿಗೆ ಸೇರಿದ 6 ಸ್ಥಳಗಳಲ್ಲಿ ಮಂಗಳವಾರ ನಡೆದ ಶೋಧ ಕಾರ್ಯದಲ್ಲಿ, 2 ನಿವೇಶನ, ಒಟ್ಟು 7 ವಾಸದ ಮನೆಗಳು, ಕೃಷಿ ಜಮೀನು ಸೇರಿ ಒಟ್ಟು ₹ 4.10 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ.

₹ 8.54 ಲಕ್ಷ ನಗದು, ₹ 73.47 ಲಕ್ಷದ ಚಿನ್ನಾಭರಣ, ₹ 21 ಲಕ್ಷ ಮೌಲ್ಯದ ವಾಹನಗಳು ಹಾಗೂ ₹ 35 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು ₹ 1.38 ಕೋಟಿ ಮೌಲ್ಯದ ಚರಾಸ್ತಿ ಪತ್ತೆಯಾಗಿವೆ.

ಪಿಡಬ್ಲೂಡಿ ಸೂಪರಿಂಟೆಂಡೆಂಟ್ ಎಂಜಿನಿಯರ್ ಸತೀಶ್ ಬಾಬು ಬಳಿ ₹ 4.52 ಕೋಟಿ

ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿಯ ಕಟ್ಟಡ ವೃತ್ತದ ಸೂಪರಿಂಟೆಂಡೆಂಟ್ ಎಂಜಿನಿಯರ್ ಎನ್.ಸತೀಶ್ ಬಾಬು ಅವರ ಬಳಿ ₹ 4.52 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಇವರಿಗೆ ಸೇರಿದ 5 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಮಂಗಳವಾರ ಶೋಧ ಕಾರ್ಯ ನಡೆಸಿದರು. ಇದರಲ್ಲಿ 1 ನಿವೇಶನ, 2 ವಾಸದ ಮನೆಗಳು, 15 ಎಕರೆ ಕೃಷಿ ಜಮೀನು ಸೇರಿ ಒಟ್ಟು ₹ 3.70 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ.

₹ 9 ಲಕ್ಷ ನಗದು, ₹ 64.62 ಲಕ್ಷ ಮೌಲ್ಯದ ಚಿನ್ನಾಭರಣ, ₹ 8.70 ಲಕ್ಷ ಬೆಲೆಯ ವಾಹನಗಳು ಸೇರಿ ಒಟ್ಟು ₹ 82.32 ಲಕ್ಷ ಮೌಲ್ಯದ ಚರಾಸ್ತಿಗಳು ಪತ್ತೆಯಾಗಿವೆ.

ನಗರ ಯೋಜನೆಯ ಜಂಟಿ ನಿರ್ದೇಶಕ ಬಿ.ಮಂಜೇಶ್ ಬಳಿ ₹ 3.18 ಕೋಟಿ

ಆನೇಕಲ್ ತಾಲ್ಲೂಕಿನ ಯೋಜನಾ ಪ್ರಾಧಿಕಾರದ ನಗರ ಮತ್ತು ಯೋಜನೆ ವಿಭಾಗದ ಸದಸ್ಯ ಕಾರ್ಯದರ್ಶಿ ಮತ್ತು ಜಂಟಿ ನಿರ್ದೇಶಕ ಬಿ.ಮಂಜೇಶ್ ಬಳಿ ₹ 3.18 ಕೋಟಿ ಮೌಲ್ಯದ ಆಸ್ತಿಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ.

ಅವರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಮಂಗಳವಾರ ದಾಳಿ ನಡೆಸಿದ ಪೊಲೀಸರು, 11 ನಿವೇಶನಗಳು, 1 ವಾಸದ ಮನೆ ಸೇರಿ ಒಟ್ಟು ₹ 1.20 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆ ಮಾಡಿದ್ದಾರೆ.

₹ 5.07 ಲಕ್ಷ ನಗದು, ₹ 35.97 ಲಕ್ಷ ಮೌಲ್ಯದ ಚಿನ್ನಾಭರಣ, ₹ 7.71 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ₹ 1.98 ಕೋಟಿ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT