ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Politics | ಸೋತವರ ಸೆಳೆಯಲು ‘ಆಪರೇಷನ್ ಹಸ್ತ’

‘ಉಪಾಹಾರ ಸಭೆ’ಯಲ್ಲಿ ಸಿದ್ದರಾಮಯ್ಯ ಸೂಚನೆ * ಪ‍ರಾಜಿತ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಮೇಲೆ ಕಣ್ಣು
Published 4 ನವೆಂಬರ್ 2023, 19:54 IST
Last Updated 4 ನವೆಂಬರ್ 2023, 19:54 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲಿಸಿಕೊಡಬೇಕೆಂದು ಪಣ ತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋಲು ಕಂಡಿರುವ ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳನ್ನು ಕಾಂಗ್ರೆಸ್‌ಗೆ ಕರೆ ತರುವಂತೆ ಸಚಿವರಿಗೆ ಗುರಿ ನೀಡಿದ್ದಾರೆ.

‘ಕಾಂಗ್ರೆಸ್‌ನ 50ಕ್ಕೂ ಹೆಚ್ಚು ಶಾಸಕರು ಸಂಪರ್ಕದಲ್ಲಿದ್ದಾರೆ, ಸರ್ಕಾರ ಸದ್ಯವೇ ಪತನವಾಗಲಿದೆ’ ಎಂದು ಬಿಜೆಪಿ, ಜೆಡಿಎಸ್ ನಾಯಕರು ಪದೇ ಪದೇ ಹೇಳುತ್ತಿದ್ದಾರೆ. ಎದುರಾಳಿ ಪಕ್ಷದ ಶಾಸಕರನ್ನು ಸೆಳೆಯುವ ಬದಲು, ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರವಲ್ಲದೇ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಭಾವಿಯಾಗಿರುವ ನಾಯಕರನ್ನು ಸೆಳೆದು ಕಾಂಗ್ರೆಸ್‌ ಮತ ಭದ್ರಪಡಿಸುವುದು ಸಿದ್ದರಾಮಯ್ಯ ಲೆಕ್ಕಾಚಾರ’ ಎಂದು ಮೂಲಗಳು ಹೇಳಿವೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ 15 ಸಚಿವರನ್ನು ಬೆಳಗ್ಗಿನ ಉಪಾಹಾರ ಕೂಟದ ನೆಪದಲ್ಲಿ ತಮ್ಮ ನಿವಾಸ ‘ಕಾವೇರಿ’ಗೆ ಶನಿವಾರ ಆಹ್ವಾನಿಸಿದ್ದ ಸಿದ್ದರಾಮಯ್ಯ, ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮತ್ತು ಪಕ್ಷವನ್ನು ಸಜ್ಜುಗೊಳಿಸುವ ಕುರಿತಂತೆ ಚರ್ಚೆ ನಡೆಸಿದರು.

ಪಕ್ಷ ಸಂಘಟನೆಯನ್ನು ಬಲಪಡಿಸುವ ಜೊತೆಗೆ ‘ಆಪರೇಷನ್‌ ಹಸ್ತ’ದ ವಿಚಾರವನ್ನೂ ಸಚಿವರ ಜೊತೆಗಿನ ಸಭೆಯಲ್ಲಿ ಪ್ರಸ್ತಾಪಿಸಿದ ಅವರು, ‘ಜನವಿರೋಧಿಯಾಗಿರುವ ಬಿಜೆಪಿಯನ್ನು ಮಣಿಸಬೇಕಾದರೆ ಹಲವು ತಂತ್ರಗಳನ್ನು ಹೆಣೆಯಬೇಕಿದೆ. ನಿಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ, ಪ್ರಭಾವಿಯಾಗಿದ್ದರೂ ಸೋತಿರುವ ಬಿಜೆಪಿ, ಜೆಡಿಎಸ್‌ ನಾಯಕರನ್ನು ಪಕ್ಷಕ್ಕೆ ಕರೆತರಲು ಮುಂದಾಗಿ. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಗುರಿ ಮುಟ್ಟಲು ಸಾಧ್ಯವೆಂದು ಸೂಚಿಸಿದ್ದಾಗಿ ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಗೆ ಯಾರನ್ನು ಕಣಕ್ಕೆ ಇಳಿಸಿದರೆ ಗೆಲುವು ಸಲೀಸು ಎಂಬ ಬಗ್ಗೆ ಸಚಿವರಿಂದ ವಿವರ ಪಡೆದ ಸಿದ್ದರಾಮಯ್ಯ, ಇನ್ನಷ್ಟು ಮಾಹಿತಿಯೊಂದಿಗೆ ವರದಿಯನ್ನು ನೀಡಿ ಎಂದೂ ಹೇಳಿದರು. 

ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿ, ಅವುಗಳ ಮೇಲ್ವಿಚಾರಣೆ ವಿಚಾರವಾಗಿಯೂ ಸಚಿವರ ಜೊತೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಚರ್ಚೆ ಮಾಡಿದರು.

ಸಭೆಯ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಮತದಾರರ ಅಭಿಪ್ರಾಯ ಪಡೆಯಲಾಗುವುದು. ಹೀಗಾಗಿ, ತಮ್ಮ ಜಿಲ್ಲೆಯಲ್ಲಿ ಪ್ರವಾಸ ಮಾಡುವಂತೆ ಸಚಿವರುಗಳಿಗೆ ಸೂಚನೆ ನೀಡಿದ್ದೆವು. ಕೆಲವು ಸಚಿವರ ಪ್ರವಾಸ ಮಾಡಿಲ್ಲ. ಈ ಬಗ್ಗೆ ಚರ್ಚೆ ಮಾಡಲಾಯಿತು. ಜೊತೆಗೆ, ಗ್ಯಾರಂಟಿ ಯೋಜನೆಗಳ ಜಾರಿ ಮತ್ತು ಅವುಗಳನ್ನು ಜನರಿಗೆ ತಲುಪಿಸುವ ಬಗ್ಗೆ ಪರಿಶೀಲನಾ ಸಭೆ ಮಾಡುವಂತೆ ಸೂಚಿಸಲಾಗಿದೆ’ ಎಂದರು.

‘ಕೇವಲ 15 ಸಚಿವರ ಜತೆ ಚರ್ಚೆ ಮಾಡಿದ್ದೇವೆ. ಉಳಿದವರ ಜತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಲೋಕಸಭೆ ಚುನಾವಣೆ, ಗ್ಯಾರಂಟಿ ಯೋಜನೆ ಜಾರಿ ನಮ್ಮ ಪ್ರಮುಖ ಆದ್ಯತೆ’ ಎಂದರು.

ಲೋಕಸಭೆ ಚುನಾವಣೆಯಲ್ಲಿ ಸಚಿವರಿಗೆ ಗುರಿ ನೀಡಿದ್ದೀರಾ ಎಂದು ಕೇಳಿದಾಗ, ‘ಲೋಕಸಭೆ ಚುನಾವಣೆಯಲ್ಲಿ ಆಯಾ ಸಚಿವರುಗಳಿಗೆ ತಮ್ಮ ಉಸ್ತುವಾರಿ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ಆದರೆ, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಆಯಾ ಸಚಿವರಿಗೆ ಆ ಜಿಲ್ಲೆಯ ಜವಾಬ್ದಾರಿ ನೀಡಿಲ್ಲ’ ಎಂದರು.

ಬಿಜೆಪಿ ಬರ ಅಧ್ಯಯನ ಕೈಗೊಂಡಿರುವ ಬಗ್ಗೆ ಕೇಳಿದಾಗ, ‘ಬಿಜೆಪಿ ನಾಯಕರು ಬರ ಪ್ರವಾಸ ಮಾಡಿದರೆ ಮಾಡಲಿ, ನಾವು ಬೇಡ ಎನ್ನುವುದಿಲ್ಲ. ವಾಸ್ತವಾಂಶ ಅಧ್ಯಯನ ಮಾಡಿ ಕೇಂದ್ರ ಸರ್ಕಾರದಿಂದ ಹಣ ಕೊಡಿಸಲಿ. ಕೇವಲ ಖಾಲಿ ಮಾತನಾಡಿದರೆ ಪ್ರಯೋಜನವಿಲ್ಲ’ ಎಂದರು.

‘ಕಾಂತರಾಜ ಆಯೋಗದ ವರದಿ ಬಗ್ಗೆ ಸಭೆಯಲ್ಲಿ ಚರ್ಚೆ ಆಯಿತೇ?’ ಎಂದು ಕೇಳಿದಾಗ, ‘ಈ ವರದಿ ಬಗ್ಗೆ ನಮ್ಮ ಸಮುದಾಯದವರಿಗೆ (ಒಕ್ಕಲಿಗ) ಅನುಮಾನಗಳಿದ್ದು, ಸರ್ಕಾರ ಅವುಗಳನ್ನು ಬಗೆಹರಿಸುತ್ತದೆ. ಈವರೆಗೂ ವರದಿ ಬಗ್ಗೆ ಸರಿಯಾದ ತೀರ್ಮಾನ ಆಗಿಲ್ಲ. ವರದಿ ಇನ್ನೂ ಸಲ್ಲಿಕೆ ಆಗಿಲ್ಲ’ ಎಂದರು.

‘ಬರ ಪರಿಶೀಲನೆ; ತಾಲ್ಲೂಕುಗಳಿಗೆ ಭೇಟಿ ಕೊಡಿ’

ಬರ ಪರಿಸ್ಥಿತಿಯ ಅಧ್ಯಯನಕ್ಕೆ ಬಿಜೆಪಿ, ಜೆಡಿಎಸ್‌ ನಾಯಕರು ಪ್ರವಾಸ ತೆರಳುತ್ತಿರುವುದನ್ನು ಗಂಭೀರ
ವಾಗಿ ಪರಿಗಣಿಸಬೇಕು. ಉಸ್ತುವಾರಿ ಸಚಿವರು ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುವ ಜತೆಗೆ, ತಾಲ್ಲೂಕು
ಹಂತದಲ್ಲಿ ಸಭೆ ನಡೆಸಿ ಅಧಿಕಾರಿಗಳನ್ನು ಚುರುಕುಗೊಳಿಸುವ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.

ಬರ ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಸಚಿವರು ನಿಗಾವಹಿಸಿದರೆ ಮಾತ್ರ ಅಧಿಕಾರಿಗಳು ಎಚ್ಚರದಿಂದ ಕೆಲಸ ಮಾಡುತ್ತಾರೆ. ಸಣ್ಣ ವೈಫಲ್ಯವನ್ನೇ ಬಿಜೆಪಿ, ಜೆಡಿಎಸ್‌ ನಾಯಕರು ದೊಡ್ಡದು ಮಾಡಿ ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಅವಕಾಶ ಕೊಡದಂತೆ, ಸಚಿವರು ತಕ್ಷಣದಿಂದಲೇ ಕಾರ್ಯಪವೃತ್ತರಾಗಿ ಎಂದು ನಿರ್ದೇಶನ ನೀಡಿದರು.

ಈ ಕುರಿತು ಪ್ರತ್ಯೇಕ ಟಿಪ್ಪಣಿ ಹೊರಡಿಸಿರುವ ಸಿದ್ದರಾಮಯ್ಯ, ಸ್ಥಳೀಯ ಶಾಸಕರೊಂದಿಗೆ ತಾಲ್ಲೂಕಿಗೆ ಭೇಟಿ ನೀಡಿ ಕುಡಿಯುವ ನೀರು, ಮೇವಿನ ಪರಿಸ್ಥಿತಿ, ಬೆಳೆ ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಇದೇ 15ರೊಳಗೆ ವರದಿ ನೀಡಬೇಕು ಎಂದು ಕೋರಿದ್ದಾರೆ.

‘ಅನಗತ್ಯ ಹೇಳಿಕೆ ನೀಡಬಾರದು’

‘ಪಕ್ಷ ಮತ್ತು ಸರ್ಕಾರದ ಆಂತರಿಕ ವಿಚಾರದಲ್ಲಿ ತನ್ನನ್ನೂ ಸೇರಿ ಯಾರೊಬ್ಬರೂ ಅನಗತ್ಯ ಹೇಳಿಕೆ ನೀಡಬಾರದು ಎಂದು  ‘ಉಪಾಹಾರ ಸಭೆ’ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಿಗೆ ನೇರವಾಗಿ ತಿಳಿಸಿದ್ದಾರೆ.

ಸುದ್ದಿಗಾರರ ಜೊತೆ ಈ ವಿಷಯ ಹಂಚಿಕೊಂಡ ಶಿವಕುಮಾರ್‌ ಅವರು, ‘ಮಾಧ್ಯಮದವರು ಪ್ರಶ್ನೆ ಕೇಳಿದರೂ ಪ್ರತಿಕ್ರಿಯೆ ನೀಡಬೇಡಿ. ಮಾಧ್ಯಮಗಳ ರಾಜಕೀಯ ಬಲೆಗೆ ಬೀಳಬೇಡಿ ಎಂದು ಸಚಿವರಿಗೆ ಸೂಚಿಸಿದ್ದೇವೆ’ ಎಂದರು.

‘ಶಾಸಕ ಇಕ್ಬಾಲ್ ಹುಸೇನ್‌ಗೂ ನೋಟಿಸ್’

‘ನನಗೆ ಸರ್ಕಾರದಲ್ಲಿ ಯಾರ ಶಾಸಕರ ಬೆಂಬಲವೂ ಬೇಡ. ನನ್ನ ಪರವಾಗಿ ಮಾತನಾಡಿರುವ ಶಾಸಕ ಇಕ್ಬಾಲ್ ಹುಸೇನ್‌ಗೂ ನೋಟಿಸ್ ನೀಡುತ್ತೇನೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.‌

‘ನನ್ನ ಮತ್ತು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪಕ್ಷ ಚುನಾವಣೆ ಎದುರಿಸಿದ್ದು, ರಾಜ್ಯದ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಉತ್ತಮ ಆಡಳಿತ ನೀಡುವುದು ನಮ್ಮ ಗುರಿ. ನನಗೆ ಯಾವುದಕ್ಕೂ ಆತುರವಿಲ್ಲ. ನಾನು ಯಾರಿಗೂ ಬೆಂಬಲ ನೀಡಿಲ್ಲ. ನಮ್ಮ ಹೈಕಮಾಂಡ್ ತೀರ್ಮಾನ ಮಾಡಲಿದೆ. ನಮ್ಮ ಪಕ್ಷದ ನಾಯಕರಿಗೆ ಏನು ಹೇಳಬೇಕೋ ಹೇಳಿದ್ದೇವೆ’ ಎಂದರು.

‘ಸಿದ್ದರಾಮಯ್ಯ ಅವರು ಹೇಳಿದ್ದನ್ನು ಮಾಧ್ಯಮಗಳು ತಿರುಚಿವೆ. ಸಿದ್ದರಾಮಯ್ಯ ನಮ್ಮ ನಾಯಕರು. ನಾವು ಅವರ ನಾಯಕತ್ವ ಒಪ್ಪಿದ್ದೇವೆ. ಪಕ್ಷ ಹೇಳಿದಂತೆ ನಾವು ಕೇಳುತ್ತೇವೆ’ ಎಂದೂ ತಿಳಿಸಿದರು.

‘ಬಿ ರಿಪೋರ್ಟ್ ಬರೆಯುವ ಕಾಲ ಬರಲಿದೆ’

‘ನನ್ನ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ದಾಖಲಿಸಿರಬಹುದು. ಆದರೆ, ನಾನು ಯಾವುದೇ ತಪ್ಪು
ಮಾಡಿಲ್ಲ. ನನ್ನ ಎಲ್ಲ ದಾಖಲೆಗಳು ಸಾರ್ವಜನಿಕವಾಗಿವೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

‘ಐಟಿ, ಇಡಿ ನೋಟಿಸ್ ಬಂದಿದೆಯೇ?’ ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಅವರು, ‘ನಾನು ಮತ್ತು ನನ್ನ ಪತ್ನಿ ಇಬ್ಬರೂ ತೆರಿಗೆ ಪಾವತಿದಾರರು. ನಾನು ಹೆಚ್ಚಿಗೆ ಆಸ್ತಿ ಗಳಿಸಿದ್ದೇನೆಂಬ ವಿಚಾರ ಸಿಬಿಐಗೆ ನೀಡುವ ಪ್ರಕರಣವಲ್ಲ ಎಂದು ಅಡ್ವೋಕೇಟ್‌ ಜನರಲ್‌ ಹೇಳಿದ್ದರೂ, ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಸಿಬಿಐಗೆ ನೀಡಿದ್ದಾರೆ. ನೋಟಿಸ್‌ ಕೊಟ್ಟರೆ ಉತ್ತರ ನೀಡುತ್ತೇನೆ. ಬಿ ರಿಪೋರ್ಟ್ ಬರೆಯುವ ಕಾಲ ಬರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT