ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣ ಪ್ರತಾಪ ಸಿಂಹ ನಾಡಕಳ್ಳ, ತಮ್ಮ ವಿಕ್ರಂ ಸಿಂಹ ಕಾಡುಗಳ್ಳ: ಕಾಂಗ್ರೆಸ್‌ ಲೇವಡಿ

Published 27 ಡಿಸೆಂಬರ್ 2023, 10:56 IST
Last Updated 27 ಡಿಸೆಂಬರ್ 2023, 10:56 IST
ಅಕ್ಷರ ಗಾತ್ರ

ಬೆಂಗಳೂರು: ಕಾಡುಗಳ್ಳ ವೀರಪ್ಪನ್‌ನಿಂದ ತೆರವಾದ ಸ್ಥಾನಕ್ಕೆ ತಮ್ಮ ಸಹೋದರನನ್ನು ಪ್ರತಿಷ್ಠಾಪಿಸಲು ಸಂಸದ ಪ್ರತಾಪ ಸಿಂಹ ಅವರು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ನಂದಗೋಡನಹಳ್ಳಿಯ 10 ಎಕರೆಯಲ್ಲಿ ಬೆಳೆದಿದ್ದ 126 ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್, ‘ಅಣ್ಣ ಪ್ರತಾಪ ಸಿಂಹ ನಾಡಕಳ್ಳ, ತಮ್ಮ ವಿಕ್ರಂ ಸಿಂಹ ಕಾಡುಗಳ್ಳ!. ಹತ್ತಾರು ಎಕರೆಯಲ್ಲಿದ್ದ ಸಾವಿರಾರು ಮರಗಳನ್ನು ಮಾರಣ ಹೋಮ ಮಾಡಿ, ಕಳ್ಳಸಾಗಣೆಗೆ ಮುಂದಾಗಿದ್ದ ಪ್ರತಾಪ್ ಸಿಂಹನ ಸಹೋದರನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುತ್ತಿದೆ’ ಎಂದು ತಿಳಿಸಿದೆ.

‘ಕಾಡುಗಳ್ಳ ವೀರಪ್ಪನ್‌ನಿಂದ ತೆರವಾದ ಸ್ಥಾನಕ್ಕೆ ತಮ್ಮ ಸಹೋದರನನ್ನು ಪ್ರತಿಷ್ಠಾಪಿಸಲು ಸಂಸದ ಪ್ರತಾಪ್ ಸಿಂಹ ಅವರು ಮುಂದಾಗಿರುವಂತಿದೆ. ಬಿಜೆಪಿಗರೇ, ಈ ಅಣ್ಣ –ತಮ್ಮಂದಿರಿಂದ ನಾಡು, ಕಾಡು ಎರಡಕ್ಕೂ ಆಪತ್ತು ಅಲ್ಲವೇ’ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಪ್ರತಾಪ ತಿರುಗೇಟು...

‘ಕಾಂಗ್ರೆಸ್ಸಿಗರೇ, ಬೇರೆಯವರಿಗೆ ಏಕವಚನ, ಬಹುವಚನ ಮತ್ತು ವ್ಯಾಕರಣದ ಪಾಠ ಹೇಳುವ ಮೊದಲು ಸ್ವತಃ ತಿದ್ದಿಕೊಳ್ಳಿ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡುವ ಮೂಲಕ ಸಂಸದ ಪ್ರತಾಪ ಸಿಂಹ ತಿರುಗೇಟು ನೀಡಿದ್ದಾರೆ.

ಏನಿದು ಪ್ರಕರಣ...?: ಬೇಲೂರು ತಾಲ್ಲೂಕಿನ ನಂದಗೋಡನಹಳ್ಳಿಯ 10 ಎಕರೆಯಲ್ಲಿ ಬೆಳೆದಿದ್ದ 126 ಮರಗಳನ್ನು ಕಡಿಯಲಾಗಿದ್ದು, ಈ ಸಂಬಂಧ ಬೇಲೂರು ಆರ್‌ಎಫ್‌ಒ ಜಮೀನಿನ ಮಾಲೀಕರಾದ ಜಯಮ್ಮ, ರಾಕೇಶ್ ಶೆಟ್ಟಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಡಿದಿರುವ ಮರಗಳನ್ನು ಅರಣ್ಯ ಇಲಾಖೆಯ ಡಿಪೊದಲ್ಲಿ ಸಂಗ್ರಹಿಸಲಾಗಿದೆ.

‘ನಂದಗೋಡನಹಳ್ಳಿ‌ಯ ಸರ್ವೆ ನಂಬರ್ 16/ಪಿ2ಯಲ್ಲಿರುವ 3 ಎಕರೆ 10 ಗುಂಟೆ ಜಮೀನನ್ನು ಜಯಮ್ಮ, ಸಕಲೇಶಪುರ ತಾಲ್ಲೂಕಿನ ಬಿರಡಹಳ್ಳಿಯ ವಿಕ್ರಂ ಸಿಂಹ ಬಿ.ಜಿ. ಅವರಿಗೆ ಶುಂಠಿ ಬೆಳೆಯಲು ಕರಾರು ಪತ್ರ ಮಾಡಿಕೊಟ್ಟಿದ್ದಾರೆ. ಇದೇ ಸರ್ವೆ ನಂಬರ್‌ನ 10 ಎಕರೆ ಪ್ರದೇಶದಲ್ಲಿದ್ದ ಸಾಗವಾನಿ, ಹೊನ್ನೆ, ಬೀಟೆ, ಹಲಸು ಸೇರಿದಂತೆ ಬೆಲೆ ಬಾಳುವ ಮರ ಕಡಿಯಲಾಗಿದೆ. ಇದು ಸರ್ಕಾರಿ ಗೋಮಾಳ. ಕರಾರು ಮಾಡಿಕೊಟ್ಟಿರುವ ಜಾಗವು ಇದರ ಪಕ್ಕದಲ್ಲಿದೆ’ ಎಂದು ಸ್ಥಳೀಯರು ಹೇಳಿದ್ದಾರೆ.

ಡಿ.17ರಂದು ಗ್ರಾಮಕ್ಕೆ ಭೇಟಿ ನೀಡಿದ್ದ ಬೇಲೂರು ತಹಶೀಲ್ದಾರ್‌ ಮಮತಾ, ಮರ ಕಡಿದಿದ್ದನ್ನು ಗಮನಿಸಿ, ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಆರ್‌ಎಫ್‌ಒಗೆ ಸೂಚಿಸಿದ್ದರು.

‘ಇದು ಮೇಲ್ನೋಟಕ್ಕೆ ಸರ್ಕಾರಿ ಗೋಮಾಳವೆಂದು ಕಂಡು ಬರುತ್ತಿದೆ. ಸರ್ವೆಗೆ ಪತ್ರ ಬರೆಯಲಾಗಿದ್ದು, ತನಿಖೆ ನಡೆದಿದೆ’ ಎಂದು ಡಿಎಫ್‌ಒ ಮೋಹನ್‌ಕುಮಾರ್ ತಿಳಿಸಿದ್ದರು.

‘ಜಯಮ್ಮ ಅವರಿಗೆ ಮಂಜೂರಾಗಿರುವ 3 ಎಕರೆ 10 ಗುಂಟೆ ಜಮೀನು ಸೇರಿದಂತೆ ಸುತ್ತಲಿನ 12 ಎಕರೆ ಗೋಮಾಳ ಭೂಮಿಯಲ್ಲಿದ್ದ ಬೆಲೆ ಬಾಳುವ ಮರಗಳನ್ನು ಕಡಿಯಲಾಗಿದೆ. ಕಂದಾಯ ಇಲಾಖೆಯಿಂದ ಸರ್ವೆ ಮಾಡಲಾಗಿದೆ. ಜಯಮ್ಮ ಅವರ ಜಾಗದಲ್ಲಿನ ಮರ ಕಡಿದರೂ ಅದು ಕಾನೂನು ಬಾಹಿರವೇ. ಅನುಮತಿ ಇಲ್ಲದೇ ಮರಗಳನ್ನು ಕಡಿಯುವಂತಿಲ್ಲ. ತನಿಖೆ ನಡೆಸಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ’ ಎಂದು ತಹಶೀಲ್ದಾರ್ ಎಂ.ಮಮತಾ ಸ್ಪಷ್ಟಪಡಿಸಿದ್ದರು.

ವಿಕ್ರಂ ಸಿಂಹ ವಿರುದ್ಧ ಆರೋಪ

‘ಸಂಸದ ಪ್ರತಾಪ ಸಿಂಹ ಸಹೋದರ ವಿಕ್ರಂ ಸಿಂಹ ಅವರೇ ಈ ಮರಗಳನ್ನು ಕಡಿದು ಸಾಗಿಸಲು ಯತ್ನಿಸಿದ್ದಾರೆ’ ಎಂದು ಕಾಂಗ್ರೆಸ್‌ ಆರೋಪಿಸಿತ್ತು.

‘ಹಾಸನ ಜಿಲ್ಲೆಯಲ್ಲಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದಿದ್ದಾರೆ. ಇದು ಕಾನೂನು ಉಲ್ಲಂಘನೆ. ವಿಕ್ರಂ ಸಿಂಹ ಎನ್ನುವವರು ಜಮೀನನ್ನು ಕರಾರು ಮಾಡಿಕೊಂಡಿದ್ದು, ಈ ಮರಗಳ್ಳತನದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಅವರು ಬಿಜೆಪಿ ಸಂಸದರ ಸಹೋದರರೋ ಅಥವಾ ಯಾರೆಂಬುದು ನನಗೆ ಗೊತ್ತಿಲ್ಲ. ತನಿಖೆ ನಡೆಯುತ್ತಿದ್ದು, ಸತ್ಯಾಸತ್ಯತೆ ಆಧಾರದ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹೇಳಿದ್ದರು.

2024ರ ಜ.1ರಿಂದ ಆ ಜಮೀನು ಲೀಸ್‌ಗೆ ಪಡೆದಿದ್ದೇನೆ. ಶುಂಠಿ ಕೃಷಿ ಮಾತ್ರ ನನಗೆ ಸಂಬಂಧ. ಮರ ಕಡಿದಿರುವುದಕ್ಕೂ–ನನಗೂ ಯಾವುದೇ ಸಂಬಂಧವಿಲ್ಲ.
–ವಿಕ್ರಂ ಸಿಂಹ, ಸಂಸದ ಪ್ರತಾಪ ಸಿಂಹ ಸಹೋದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT