ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿಯಲ್ಲಿ ಜೆಡಿಎಸ್‌ ವಿಲೀನ: ಡಿಕೆಶಿ ವ್ಯಂಗ್ಯ

Published 31 ಜನವರಿ 2024, 0:30 IST
Last Updated 31 ಜನವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕುಮಾರಸ್ವಾಮಿಯವರು ಜೆಡಿಎಸ್ ಪಕ್ಷವನ್ನು  ಬಿಜೆಪಿಯಲ್ಲಿ ಬಹುತೇಕ ವಿಲೀನ ಮಾಡಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಕೇಸರಿ ಶಾಲು ಧರಿಸಿ ಬಿಜೆಪಿ ನಾಯಕರ ಜತೆ ಸೇರಿ ಮಂಡ್ಯದಲ್ಲಿ ಪ್ರತಿಭಟನೆ ಮಾಡಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಗೆ ಮಂಡ್ಯದಲ್ಲಿ ರಾಜಕೀಯ ನೆಲೆ ಇಲ್ಲ. ಅಲ್ಲಿ ನೆಲೆ ಕಂಡುಕೊಳ್ಳಲು ಅವರಿಬ್ಬರಲ್ಲಿ ಯಾರು ಯಾರನ್ನು ನುಂಗುತ್ತಾರೊ ಗೊತ್ತಿಲ್ಲ’ ಎಂದರು.

‘ಇದು ಅವರ ಪಕ್ಷದ ವಿಚಾರ. ಅವರು ಏನಾದರೂ ಮಾಡಿಕೊಳ್ಳಲಿ. ನಮಗೂ ಅದಕ್ಕೂ ಸಂಬಂಧವಿಲ್ಲ. ಅವರು ಯಾವ ಬಣ್ಣದ ಶಾಲು ಬೇಕಾದರೂ ಧರಿಸಲಿ’ ಎಂ‌ದರು. 

‘ಶಾಂತಿ ಕದಡಬೇಕು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬೇಕು ಎಂದು ಮುಗ್ಧ ಹಳ್ಳಿ ಜನರನ್ನು ಬಿಜೆಪಿಯವರು ಎತ್ತಿಕಟ್ಟುತ್ತಿದ್ದಾರೆ. ನಮ್ಮ ಭಾಗದ ಎಲ್ಲ ಜಾತಿ ಹಾಗೂ ಧರ್ಮದ ಜನರು ಸೌಹಾರ್ದದಿಂದ ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದರು. ಬಿಜೆಪಿಯವರು ಈಗ ಹೊಸ ಪ್ರಯೋಗ ಮಾಡುತ್ತಿದ್ದಾರೆ’ ಎಂದು ದೂರಿದರು.

ಬಿಜೆಪಿಯವರು ಮನೆ, ಮನೆಗೆ ಹನುಮಧ್ವಜ ಹಂಚುವ ಬಗ್ಗೆ ಕೇಳಿದಾಗ, ‘ಬೇಡ ಎಂದು ಹೇಳಿದವರು ಯಾರು? ಬಿಜೆಪಿಯವರು ಹರ್ ಘರ್ ತಿರಂಗಾ ಎಂದು ಪ್ರಚಾರ ಮಾಡಿದ್ದರು. ಈಗ ಆ ತಿರಂಗಾವನ್ನು ಯಾಕೆ ಮರೆತಿದ್ದಾರೆ? ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ತಿರಂಗಾ ಬದಲಿಗೆ ಕೇಸರಿ ಧ್ವಜವನ್ನೇ ಕಾನೂನು ಮೂಲಕ ತರಲಿ’ ಎಂದು ಛೇಡಿಸಿದರು.

ಕರ್ನಾಟಕದಿಂದ ರಾಜ್ಯಸಭೆಗೆ ಸೋನಿಯಾ ಗಾಂಧಿ ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆಗೆ, ‘ಅದೆಲ್ಲವೂ ಊಹಾಪೋಹ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT