ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಗದೀಶ ಶೆಟ್ಟರ್‌ ಮತ್ತೆ ಬಿಜೆಪಿ ಸೇರಿದ್ದು ಯಾಕೆ?

ಲಿಂಗಾಯತ ವಿರೋಧಿ ಕಿಡಿ ಶಮನಕ್ಕೆ ಯತ್ನ
Published 25 ಜನವರಿ 2024, 21:53 IST
Last Updated 25 ಜನವರಿ 2024, 21:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿಯು, ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಯೋಜನೆ ಹಾಕಿಕೊಂಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊತ್ತಿದ್ದ ‘ಲಿಂಗಾಯತ ವಿರೋಧಿ’ ಕಿಡಿಯನ್ನು ಶಮನಗೊಳಿಸಲು ಪ್ರಯತ್ನ ನಡೆಸಿದೆ. ಆ ಕಿಡಿ ಹೊತ್ತಿಸಿದ್ದ ಜಗದೀಶ ಶೆಟ್ಟರ್‌ ಅವರನ್ನೇ ಪಕ್ಷಕ್ಕೆ ಮರುಸೇರ್ಪಡೆ ಮಾಡಿಕೊಂಡಿದೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ. 

ವಿಧಾನಸಭೆ ಚುನಾವಣೆಯಲ್ಲಿ ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಶೆಟ್ಟರ್‌ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿತು. ಇದರಿಂದ ಸಿಟ್ಟಿಗೆದ್ದ ಅವರು, ‘ಬಿಜೆಪಿಯಲ್ಲಿ ಲಿಂಗಾಯತರ ಕಡೆಗಣನೆ ಆಗುತ್ತಿದೆ’ ಎಂದು ಕಿಡಿಕಾರಿದ್ದರು. ಪಕ್ಷ ತೊರೆದು, ಕಾಂಗ್ರೆಸ್‌ನಿಂದ ಚುನಾವಣಾ ಕಣಕ್ಕಿಳಿದರು. ಪರಾಭವಗೊಂಡರೂ ವಿಧಾನ ಪರಿಷತ್‌ ಸದಸ್ಯರಾಗುವಲ್ಲಿ ಸಫಲರಾದರು.

ತಮಗೆ ಟಿಕೆಟ್‌ ತಪ್ಪಿಸಿದ್ದನ್ನೇ ಗುರಿಯಾಗಿಸಿಕೊಂಡು ಶೆಟ್ಟರ್ ಸಭೆ, ಸಮಾರಂಭಗಳಲ್ಲಿ ಬಿಜೆಪಿ ವಿರುದ್ಧ ‘ಲಿಂಗಾಯತ ವಿರೋಧಿ ಪಕ್ಷ’ ಎಂದು ಬಿಂಬಿಸಲು ಪ್ರಯತ್ನಿಸಿದರು. ಇದಕ್ಕೆ ಕೆಲ ಲಿಂಗಾಯತ ಮುಖಂಡರು, ಮಠಾಧೀಶರು ಧ್ವನಿಗೂಡಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಇದು ಪರಿಣಾಮ ಬೀರಿತು. ಬಿಜೆಪಿ ಹಲವೆಡೆ ಪರಾಭವಗೊಂಡಿತು.

‘ವಿಧಾನಸಭೆಯಲ್ಲಿ ಉಂಟಾದ ಪರಿಸ್ಥಿತಿ ಲೋಕಸಭೆಯಲ್ಲಿ ಪುನರಾವರ್ತನೆ ಆಗದಿರಲಿ ಎಂಬ ಉದ್ದೇಶದಿಂದ ಶೆಟ್ಟರ್‌ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿದೆ. ಲೋಕಸಭೆ ಚುನಾವಣೆಯಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಹಕಾರಿಯಾಗಲಿದೆ’ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.

ಒಗ್ಗದ ಕಾಂಗ್ರೆಸ್‌ ವಾತಾವರಣ

ಜನಸಂಘದ ಶಿಸ್ತನ್ನು ಮೈಗೂಡಿಸಿಕೊಂಡಿದ್ದ ಶೆಟ್ಟರ್‌ ಅವರಿಗೆ ಕಾಂಗ್ರೆಸ್‌ ವಾತಾವರಣ ಹಿಡಿಸಲಿಲ್ಲ. ಸಮಯ ಪಾಲನೆ, ಶಿಸ್ತು ಬದ್ಧ ಕಾರ್ಯನಿರ್ವಹಣೆ ಹೇಗಿರಬೇಕೆಂದು ಅವರು ಸಭೆಯೊಂದರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಚಾಟಿ ಬೀಸಿದ್ದರು. ಇದಕ್ಕೆ ಕಾರ್ಯಕರ್ತರು ಆಕ್ಷೇಪಿಸಿದ್ದರು. ‘ಶೆಟ್ಟರ್‌ ಜೊತೆ ಬಂದಿದ್ದ ಮುಖಂಡರಾದ ನಾಗೇಶ ಕಲಬುರ್ಗಿ ಹಾಗೂ ಮಲ್ಲಿಕಾರ್ಜುನ ಸಾಹುಕಾರ್‌ ಅವರನ್ನು ಕೂಡ ಕಾರ್ಯಕರ್ತರು ಕಡೆಗಣಿಸುತ್ತಿದ್ದರು’ ಎಂಬ ಮಾತುಗಳೂ ಇವೆ.

ಬೆಳಗಾವಿ ಟಿಕೆಟ್‌

ಬೆಳಗಾವಿ ಬಿಜೆಪಿ ಸಂಸದೆ ಮಂಗಲಾ ಅಂಗಡಿ ಈ ಸಲ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವ ಸಾಧ್ಯತೆ ಹೆಚ್ಚಿದೆ. ಈ ಕ್ಷೇತ್ರದಿಂದ ಸ್ಪರ್ಧಿಸಲು ಜಗದೀಶ ಶೆಟ್ಟರ್‌ ಅಥವಾ ಅವರ ಸೊಸೆ (ಮಂಗಲಾ ಅಂಗಡಿ ಅವರ ಪುತ್ರಿ) ಅವರಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

‘ಸಚಿವ ಸ್ಥಾನ ಸಿಗಲಿಲ್ಲ’

ಜಗದೀಶ ಶೆಟ್ಟರ್‌ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಅಲ್ಲಲ್ಲಿ ಕೆಲ ಮುಖಂಡರು ಒತ್ತಾಯಿಸಿದರೂ ಸ್ಪಂದನೆ ಸಿಕ್ಕಿರಲಿಲ್ಲ. ಶೆಟ್ಟರ್‌ ಬಿಜೆಪಿ ತೊರೆದಾಗ ಅವರಿಗೆ ಪ್ರಮುಖ ಮುಖಂಡರು ಅಥವಾ  ಮಹಾನಗರ ಪಾಲಿಕೆಯ ಸದಸ್ಯರು ಜೊತೆಯಾಗಲಿಲ್ಲ. ಇದರಿಂದ ಅವರಿಗೆ ಭ್ರಮನಿರಸನವಾಯಿತು. ಕಾಂಗ್ರೆಸ್‌ ತೊರೆಯಲು ಅವರಿಗೆ ಇವೆಲ್ಲ ಕಾರಣವಾಗಿರಬಹುದು ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT