ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ಹಂಚಿಕೆಗೆ ಕೆಐಎಡಿಬಿ ಆತುರ

ಏರೋಸ್ಪೇಸ್ ಪಾರ್ಕ್‌ನ ಬಹುಕೋಟಿ ರೂಪಾಯಿ ಬೆಲೆಯ ಆಸ್ತಿ
Published 7 ಮಾರ್ಚ್ 2024, 23:30 IST
Last Updated 7 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಅಭಿವೃದ್ಧಿ ಪಡಿಸಿದ ಬಡಾವಣೆಗಳಲ್ಲಿನ ಎಕರೆಗಟ್ಟಲೇ ಜಮೀನುಗಳನ್ನು ಗುತ್ತಿಗೆ ಅಥವಾ ಮಾರಾಟದ ಆಧಾರದಲ್ಲಿ ಹಂಚಿಕೆ ಮಾಡಲು ತರಾತುರಿಯಲ್ಲಿ ಪ್ರಕ್ರಿಯೆ ನಡೆಸಿದೆ.

ಉದ್ಯಮಿಗಳು ಹೂಡಿಕೆಗೆ ಆಸಕ್ತಿ ತೋರದ ಹಿಂದುಳಿದ ಜಿಲ್ಲೆ ಅಥವಾ ಎರಡು ಮತ್ತು ಮೂರನೇ ಹಂತದ ನಗರಗಳಿಗೆ ಬಂಡವಾಳ ಆಕರ್ಷಿಸಲು ತ್ವರಿತ ಪ್ರಕ್ರಿಯೆ ನಡೆಸಿ, ಜಮೀನು ಹಂಚಿಕೆ ಮಾಡಿದ್ದರೆ ತಕರಾರು ಇರುತ್ತಿರಲಿಲ್ಲ. ಜಮೀನಿಗೆ ಅತಿ ಹೆಚ್ಚಿನ ಬೇಡಿಕೆ ಇರುವ ಕೈಗಾರಿಕಾ ವಸಾಹತುಗಳಲ್ಲಿನ ಆಸ್ತಿಗಳನ್ನು ಹಂಚಿಕೆ ಮಾಡುವಲ್ಲಿ ತರಾತುರಿ ತೋರಿರುವುದಕ್ಕೆ ಬಂಡವಾಳ ಹೂಡಿಕೆದಾರರು ಆಕ್ಷೇಪ ತೆಗೆದಿದ್ದಾರೆ.

ಅದರಲ್ಲೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಗ್ಗುಲಲ್ಲೇ ಇರುವ ಹೂವಿನಾಯಕನಹಳ್ಳಿಯ ಹೈಟೆಕ್‌ ಡಿಫೆನ್ಸ್‌ ಅಂಡ್‌ ಏರೋಸ್ಪೇಸ್ ಪಾರ್ಕ್‌(ಐಟ ಸೆಕ್ಟರ್ ಅಂಡ್ ಹಾರ್ಡ್‌ವೇರ್ ಸೆಕ್ಟರ್‌), ಗ್ರಾಮಾಂತರ ಜಿಲ್ಲೆಯ ಡಿಫೆನ್ಸ್ ಅಂಡ್ ಏರೋಸ್ಪೇಸ್ ಪಾರ್ಕ್‌ (ಏರೋಸ್ಪೇಸ್ ಸೆಕ್ಟರ್‌–ಏರೋಸ್ಪೇಸ್ ಎಸ್‌ಇಝೆಡ್‌) ಗ್ರಾಮಾಂತರ ಜಿಲ್ಲೆಯ ಸೋಂ‍ಪುರ 1 ಮತ್ತು ಎರಡನೇ ಹಂತ, ರಾಮನಗರ ಜಿಲ್ಲೆಯ ಬಿಡಿದಿ ಎರಡನೇ ಹಂತದ ಸೆಕ್ಟರ್1, ಕೋಲಾರ ಜಿಲ್ಲೆಯ ನರಸಾಪುರ, ತುಮಕೂರಿನ ವಸಂತನರಸಾಪುರದ 1, 2, 3 ನೇ ಹಂತ, ಧಾರವಾಡ ಜಿಲ್ಲೆಯ ಗಾಮನಗಟ್ಟಿ ಹಾಗೂ ಮುಮ್ಮಿಗಟ್ಟಿ ಕೈಗಾರಿಕೆ ವಸಾಹತುಗಳಲ್ಲಿ ಲಭ್ಯವಿರುವ ಜಮೀನುಗಳ ಹಂಚಿಕೆ ಪ್ರಕ್ರಿಯೆಯನ್ನು ದಿಢೀರ್‌ ಪೂರ್ಣಗೊಳಿಸಲು ಕೆಐಎಡಿಬಿ ಮುಂದಾಗಿದೆ.

ಅರ್ಜಿ ಸಲ್ಲಿಕೆಗೆ ಸಮಯ ಕಡಿಮೆ: ಕೈಗಾರಿಕೆ ಉದ್ದೇಶಕ್ಕಾಗಿ ನಿವೇಶನ ಅಥವಾ ಎಕರೆವಾರು ಆಸ್ತಿ ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸುವಾಗ ಕನಿಷ್ಠ 30 ದಿನ ಸಮಯ ಕೊಡಬೇಕು ಎಂಬ ನಿಯಮ ಇದೆ. ಈ ವಸಾಹುತಗಳಲ್ಲಿನ ನಾಗರಿಕ ಸೌಲಭ್ಯ(ಸಿ.ಎ) ಹಾಗೂ ಇತರ ಸೌಲಭ್ಯಗಳಿಗೆ (ಅಮೆನಿಟಿ) ಮೀಸಲಿಟ್ಟ ಜಾಗಗಳ ಹಂಚಿಕೆಗೆ ಫೆಬ್ರುವರಿ 5ರಂದು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಫೆ.23ರಂದೇ ಕೊನೆ ದಿನ. ಹಂಚಿಕೆಗೆ ಪ್ರಸ್ತಾಪಿಸಲಾದ ಸಿಎ/ಅಮೆನಿಟಿ ನಿವೇಶನಗಳ ಪಟ್ಟಿಯನ್ನು ಫೆ.8ರಂದು ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಕೆಗೆ ರಜೆ ದಿನ ಸೇರಿ 18 ದಿನಗಳ ಕಾಲಾವಕಾಶವನ್ನು ಕೊಡಲಾಗಿತ್ತು. ರಜೆ ದಿನಗಳಲ್ಲಿ ಕಳೆದರೆ 15 ದಿನ ಮಾತ್ರ ಅರ್ಜಿದಾರರಿಗೆ ಅವಕಾಶ ಸಿಗಲಿತ್ತು.

1991ರಲ್ಲಿ ಕೆಐಎಡಿಬಿ ಹೊರಡಿಸಿದ್ದ ಅಧಿಸೂಚನೆಯಲ್ಲಿ ಕೆಲವು ಚಟುವಟಿಕೆಗಳನ್ನು ಅಮೆನಿಟಿ ಎಂದು ನಿಗದಿಪಡಿಸಲಾಗಿತ್ತು. 2023 ನವೆಂಬರ್ 11ರಂದು ಹೊರಡಿಸಲಾದ ಅಧಿಸೂಚನೆ (ಸಿಐ78 ಎಸ್‌ಪಿಕ್ಯೂ 2021)ಯಲ್ಲಿ ನಿಗದಿಪಡಿಸಲಾದ ಅಮೆನಿಟಿ ಚಟುವಟಿಕೆಗಳನ್ನು ಪಟ್ಟಿಯಿಂದ ಹಿಂಪಡೆಯಲಾಗಿತ್ತು. ಆ ಮೂಲಕ ನಿರ್ದಿಷ್ಟ ಸೌಲಭ್ಯ ಕಲ್ಪಿಸಲು ಮೀಸಲಾಗಿದ್ದ ನಿವೇಶನ/ಆಸ್ತಿಗಳನ್ನು ಬೇರೆ ಉದ್ದೇಶಕ್ಕೆ ಬಳಸಲು ಅವಕಾಶ ಕಲ್ಪಿಸಲಾಗಿದೆ ಎಂಬ ಆರೋಪವೂ ಇದೆ.

ಅರ್ಜಿಯ ಜತೆಗೆ ಉದ್ದೇಶಿತ ಸೌಲಭ್ಯ ಕಲ್ಪಿಸಲು ಸಂಸ್ಥೆ/ ಕಂಪನಿಗಿರುವ ಸಾಮರ್ಥ್ಯ, ಸಂಸ್ಥೆಯ ಆರ್ಥಿಕ ಸ್ಥಿತಿಗತಿಯ ವರದಿ, ಸೌಲಭ್ಯ ಕಲ್ಪಿಸುವುದರಿಂದ ಉದ್ಯಮಗಳಿಗೆ ಆಗುವ ಲಾಭ, ಸಂಸ್ಥೆಯ ವಾರ್ಷಿಕ ಹಾಗೂ ಲೆಕ್ಕಪರಿಶೋಧನಾ ವರದಿ, ಯೋಜನೆಗೆ ಬೇಕಾದ ಜಮೀನಿನ ವಿಸ್ತೀರ್ಣ, ಸಂಸ್ಥೆಯ ಸಮಗ್ರ ಮಾಹಿತಿಯನ್ನೂ ಒದಗಿಸಲು ಸೂಚಿಸಲಾಗಿದೆ. ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.

‘ರಜೆ ದಿನ ಹೊರತುಪಡಿಸಿ ಸಿಗುವ 15 ದಿನಗಳಲ್ಲಿ ಈ ಎಲ್ಲವನ್ನೂ ಒದಗಿಸಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಈಗಾಗಲೇ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿರುವ ‘ಅರ್ಹ’ರಿಗೆ ಹಂಚಿಕೆ ಮಾಡುವ ಉದ್ದೇಶದಿಂದಷ್ಟೇ ಈ ರೀತಿಯ  ಮಾರ್ಗ ಹಿಡಿಯಲಾಗಿದೆ’ ಎಂದು ಪರಿಶಿಷ್ಟ ಸಮುದಾಯದ ಉದ್ಯಮಿಯೊಬ್ಬರು ತಮ್ಮ ಅಳಲು ತೋಡಿಕೊಂಡರು.

‘ಕೈಗಾರಿಕೆಗಳು ನೆಲೆ ಊರಿದ ಮೇಲೆ ಏರೋಸ್ಪೇಸ್‌ ಪಾರ್ಕ್‌ನಲ್ಲಿ ತಲಾ ಎಕರೆಗೆ ₹12 ಕೋಟಿ ಮಾರುಕಟ್ಟೆ ದರ ಇದ್ದರೆ, ಮಾರ್ಗಸೂಚಿ ದರ ₹6 ಕೋಟಿಯಷ್ಟಿದೆ. ಆದರೆ, ಜೋಧಾನಿ ಪೇಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ₹2.9 ಕೋಟಿ ದರದಲ್ಲಿ ಹಂಚಿಕೆ ಮಾಡಲಾಗಿದೆ. ಹೊಸದಾಗಿ ಅರ್ಜಿ ಕರೆದಿರುವ ಯೋಜನೆಯಡಿಯೂ ಮಾರ್ಗಸೂಚಿ ದರದ ಅರ್ಧದ‌ಷ್ಟು ಮೊತ್ತದಲ್ಲಿ ಹಂಚಿಕೆ ಮಾಡ‌ಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ದೊಡ್ಡ ಮಟ್ಟದ ನಷ್ಟವಾಗಲಿದೆ’ ಎಂದೂ ಅವರು ಹೇಳಿದರು.

ಡಿಪಿಆರ್‌ನಂಥ ದಾಖಲೆ ಗಳನ್ನು ಸಲ್ಲಿಸಿದ್ದರೆ ತಿರಸ್ಕರಿಸುವ ಪ್ರಶ್ನೆ ಬರುವುದಿಲ್ಲ. ಸಣ್ಣ–ಪುಟ್ಟ ದಾಖಲೆಗಳನ್ನು ನೀಡಲು ಸಮಯಾವಕಾಶ ನೀಡಲಾಗುವುದುಡಾ.
ಮಹೇಶ್, ಮುಖ್ಯಕಾರ್ಯನಿರ್ವಹಣಾಧಿಕಾರಿ, ಕೆಐಎಡಿಬಿ

ಪೇಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ವಸತಿ ಯೋಜನೆ!

ಸಿ.ಎ ಮತ್ತು ಅಮೆನಿಟಿಗಳಿಗೆ ಮೀಸಲಾದ ನಿವೇಶನಗಳನ್ನು ಹಂಚಿಕೆ ಮಾಡುವ ಮುನ್ನ ಅರ್ಜಿ ಸಲ್ಲಿಸಿದ ಸಂಸ್ಥೆಗಳಿಗೆ ನಿರ್ದಿಷ್ಟ ಕ್ಷೇತ್ರದಲ್ಲಿ ಎಷ್ಟು ವರ್ಷ ಅನುಭವ ಇದೆ, ಯೋಜನೆ ಜಾರಿ ಮಾಡುವ ಸಾಮರ್ಥ್ಯ ಇದೆಯೇ ಎಂದು ಪರಿಶೀಲನೆ ಮಾಡಿ ಹಂಚಿಕೆ ಮಾಡಲಾಗುತ್ತದೆ.

2023ರ ಮಾರ್ಚ್‌ 7ರಂದು ಅಂದರೆ ವಿಧಾನಸಭೆ ಚುನಾವಣೆಗೆ ಮೊದಲು ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯ ಸಭೆಯಲ್ಲಿ ಡಿಫೆನ್ಸ್‌ ಅಂಡ್ ಏರೋಸ್ಪೇಸ್‌ ಪಾರ್ಕ್‌(ಹಾರ್ಡ್‌ವೇರ್ ಸೆಕ್ಟರ್‌) ಕೈಗಾರಿಕಾ ವಸಾಹತುವಿನಲ್ಲಿ ಜೋಧಾನಿ ಪೇಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ 6.90 ಎಕರೆ ಜಾಗವನ್ನು ಹಂಚಿಕೆ ಮಾಡುವ ನಿರ್ಣಯ ಕೈಗೊಳ್ಳಲಾಗಿತ್ತು. ₹250 ಕೋಟಿ ಹೂಡಿಕೆಯನ್ನು ಕಂಪನಿ ಮಾಡಲಿದ್ದು, 10 ವರ್ಷ ಗುತ್ತಿಗ ಅಥವಾ ಕ್ರಯದ ಆಧಾರದ ಮೇಲೆ ಹಂಚಿಕೆ ಮಾಡಿ, 2023 ರ ಮೇನಲ್ಲಿ ಆದೇಶ ಹೊರಡಿಸಲಾಗಿದೆ.

ಭೂ ಬಳಕೆಯ ಉದ್ದೇಶ ಬದಲು

ಕೆಐಎಡಿಬಿಯ ಏರೋಸ್ಪೇಸ್ ಪಾರ್ಕ್‌ ನಿರ್ಮಾಣ ಮಾಡುವಾಗ(2018ರಲ್ಲಿ) ಕೈಗಾರಿಕೆ, ವಸತಿ, ನಾಗರಿಕ ಸೌಲಭ್ಯ ಹಾಗೂ ಇತರೆ ಸೌಲಭ್ಯ, ತಾಜ್ಯ ನಿರ್ವಹಣಾ ಘಟಕ ಹೀಗೆ ನಿರ್ದಿಷ್ಟ ಉದ್ದೇಶಕ್ಕಾಗಿ ಜಾಗವನ್ನು ಗೊತ್ತುಪಡಿಸಲಾಗಿತ್ತು.

ವಸತಿ ಸೌಕರ್ಯ ಕಲ್ಪಿಸಲು ಬಾಗಲೂರು–ವಿಮಾನ ನಿಲ್ದಾಣ ರಸ್ತೆಗೆ ಹೊಂದಿಕೊಂಡಂತೆ ಒಂದು ಸಾವಿರ ಎಕರೆಯಷ್ಟು ಜಮೀನನ್ನು ದೊಡ್ಡ ದೊಡ್ಡ ಬಿಲ್ಡರ್‌ಗಳಿಗೆ ಹಂಚಿಕೆ ಮಾಡಲಾಗಿದೆ. ವಸಾಹತು ಪ್ರದೇಶದ ಒಳಗೆ ಎಂಟು– ಹತ್ತು ಎಕರೆಗಳಷ್ಟು ವಿಸ್ತೀರ್ಣದ ಜಮೀನುಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಉಳಿಸಲಾಗಿತ್ತು. ಅವುಗಳನ್ನು ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ, ‘ವಸತಿ ಉದ್ದೇಶಕ್ಕಾಗಿನ ಜಾಗ’ ಎಂದು ಬದಲಾವಣೆ ಮಾಡಲಾಗಿದೆ ಎಂಬ ದೂರುಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT