ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಆಶಯವನ್ನು ಕೆ.ಎಸ್. ಈಶ್ವರಪ್ಪ ತಿಳಿದುಕೊಳ್ಳಲಿ: ಡಿ.ಕೆ. ಶಿವಕುಮಾರ್

Last Updated 30 ನವೆಂಬರ್ 2020, 11:16 IST
ಅಕ್ಷರ ಗಾತ್ರ

ದೇವನಹಳ್ಳಿ: 'ಬೆಳಗಾವಿ ಲೋಕಸಭೆ ಉಪಚುನಾವಣೆಗೆ ನಾವು ಮುಸಲ್ಮಾನರಿಗೆ ಟಿಕೆಟ್ ನೀಡುವುದಿಲ್ಲ ಎಂದಿರುವ ಈಶ್ವರಪ್ಪನವರು, ಸಂವಿಧಾನ ಓದಬೇಕು. ಅದರಲ್ಲಿರುವ ಆಶಯ ಏನು ಎಂದು ತಿಳಿದುಕೊಳ್ಳಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ದೇವನಹಳ್ಳಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಹಿರಿಯ ನಾಯಕರ ಸಭೆಯ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, 'ಬಿಜೆಪಿಯವರ ಸಿದ್ಧಾಂತವೇ ಅದು. ಅವರಿಗೆ ಸಂವಿಧಾನದ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಗೌರವವೂ ಇಲ್ಲ. ಅವರು ಸಂವಿಧಾನ ಸುಡಬೇಕು ಅಂತಲೇ ಕಾಯುತ್ತಿದ್ದಾರೆ. ಈಶ್ವರಪ್ಪ ಅವರಿಂದ ಸಂವಿಧಾನವನ್ನು ಓದಿಸಿ. ಅವರಿಗೆ ಅದರ ಆಶಯಗಳು ಅರ್ಥವಾಗಲಿ. ಬಿಜೆಪಿಯವರು ತಮ್ಮ ಪಕ್ಷದಲ್ಲಿರುವ ಅಲ್ಪಸಂಖ್ಯಾತರ ಘಟಕವನ್ನು ವಿಸರ್ಜಿಸುವುದು ಉತ್ತಮ' ಎಂದು ಟೀಕಿಸಿದರು.

ಜನರಿಗೆ ಅಧಿಕಾರ ಕೊಡಬೇಕು ಎಂಬುದು ನಮ್ಮ ಉದ್ದೇಶ: 'ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಬೇಕು ಎಂದು ನಾವು ನ್ಯಾಯಾಲಯದ ಮೆಟ್ಟಿಲೇರಿದ್ದೆವು. ನಮ್ಮ ನಿರೀಕ್ಷೆಯಂತೆ ಈಗ ಚುನಾವಣೆ ಘೋಷಣೆಯಾಗಿದೆ. ಜನರಿಗೆ ಅಧಿಕಾರ ಸಿಗಬೇಕು ಎಂಬುದು ನಮ್ಮ ಉದ್ದೇಶ. ಇದು ಪಕ್ಷಾತೀತವಾಗಿ ನಡೆಯುವ ಚುನಾವಣೆ ಇದು. ಈ ಚುನಾವಣೆ ನಡೆಯಬೇಕು ಎಂಬುದು ನಮ್ಮ ಚಿಂತನೆ. ಬೆಂಗಳೂರು ಪಾಲಿಕೆ ಚುನಾವಣೆಯೂ ನಡೆಯಬೇಕು ಎಂಬುದು ನಮ್ಮ ಬಯಕೆ’ ಎಂದರು.

‘ಈಗಾಗಲೇ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆದಿವೆ. ಹೀಗಾಗಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವುದರಲ್ಲಿ ಅಭ್ಯಂತರವಿಲ್ಲ. ಕೋವಿಡ್ ನಿಯಮ ಪಾಲನೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಹಾಗೂ ಅಧಿಕಾರಿಗಳು ನೋಡಿಕೊಳ್ಳಬೇಕು’ ಎಂದೂ ಹೇಳಿದರು.

ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ: ‘ರಾಜ್ಯದ ಸಮಸ್ಯೆ ಹಾಗೂ ಸರ್ಕಾರದ ಕೆಲವು ನಿರ್ಣಯಗಳನ್ನು ನಾವು ಗಮನಿಸಿದ್ದೇವೆ. ಈ ವಿಚಾರವಾಗಿ ನಾನೊಬ್ಬ ತೀರ್ಮಾನ ಮಾಡುವುದಿಲ್ಲ. ಎಲ್ಲ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳಲಾಗುವುದು. ನಾನು ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದು, ಹಿರಿಯ ನಾಯಕರೆಲ್ಲ ಸೇರಿ ಚರ್ಚಿಸಿ, ಅವರ ಸಲಹೆ ಪಡೆಯುತ್ತೇನೆ’ ಎಂದು ಶಿವಕುಮಾರ್ ಹೇಳಿದರು.

ತನಿಖೆಯಾದರೆ ತಾನೇ ಸತ್ಯಾಂಶ ಹೊರಬರುವುದು: ‘ಎನ್. ಆರ್‌. ಸಂತೋಷ್ ಅವರು ಈಗ ಯಾವ ಹೇಳಿಕೆ ಬೇಕಾದರೂ ನೀಡಲಿ. ತಮ್ಮ ಆಂತರಿಕ ವಿಚಾರ ಮುಚ್ಚಿಕೊಳ್ಳಲು ಏನಾದರೂ ಹೇಳಲಿ. ರಾಜಕೀಯ ಕಾರಣಕ್ಕಾಗಿ ಅವರಿಂದ ಈ ಹೇಳಿಕೆ ಕೊಡಿಸಲಾಗಿದೆ. ಸಂತೋಷ್ ಅವರು ಯಾಕೆ ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎಂಬುದರ ಬಗ್ಗೆಯೇ ಅವರ ಪತ್ನಿ ಶಂಕೆ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕಾದರೂ ತನಿಖೆ ನಡೆಯಬೇಕೋ ಬೇಡವೋ? ಅವರು ಯಾವುದೋ ಸಾಮಾನ್ಯ ಹುದ್ದೆಯಲ್ಲಿ ಇರುವವರಲ್ಲ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ. ಹೀಗಾಗಿ ಇವರ ಆತ್ಮಹತ್ಯೆ ಯತ್ನ ತನಿಖೆ ಆಗಬೇಕು’ ಎಂದು ಆಗ್ರಹಿಸಿದರು.

ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ: 'ಚುನಾವಣೆಗಳ ಗೆಲುವು, ಸೋಲಿನ ಫಲಿತಾಂಶದ ಬಗ್ಗೆ ನಾವು ಆತಂಕ ಪಡುವುದಿಲ್ಲ. ಉಪಚುನಾವಣೆಗಳೇ ಬೇರೆ, ಪ್ರಮುಖ ಚುನಾವಣೆಗಳೇ ಬೇರೆ. ನಾವು ಭವಿಷ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಉಪ ಚುನಾವಣೆ ಫಲಿತಾಂಶದಿಂದ ನಾವು ನಮ್ಮ ಪಕ್ಷದ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ನಮಗೆ ನಮ್ಮ ಸಿದ್ಧಾಂತಗಳೇ ಮುಖ್ಯ. ಬಿಜೆಪಿಯ ಆಂತರಿಕ ವಿಚಾರವಾಗಿ ನಾವು ಮಾತನಾಡುವುದಿಲ್ಲ’ ಎಂದೂ ಶಿವಕುಮಾರ್‌ ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT