ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತ್ನಾಳ ಹೇಳಿಕೆ ಉಲ್ಲೇಖಿಸಿದ್ದ ಜೈರಾಮ್ ರಮೇಶ್‌ಗೆ ಲಹರ್ ಸಿಂಗ್ ತಿರುಗೇಟು

Published 28 ಡಿಸೆಂಬರ್ 2023, 12:53 IST
Last Updated 28 ಡಿಸೆಂಬರ್ 2023, 12:53 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ನೀಡಿರುವ ಹೇಳಿಕೆಯನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಖಂಡಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಜೈರಾಮ್‌ ರಮೇಶ್‌ ಅವರು ಅತ್ಯಂತ ಸುಶಿಕ್ಷಿತ ವ್ಯಕ್ತಿ, ಕಾಂಗ್ರೆಸ್‌ನ ಸಂವಹನ ವಿಭಾಗದ ಮುಖ್ಯಸ್ಥರೂ ಆಗಿರುವ ಅವರು, ಸ್ಥಳೀಯ ಮಾಧ್ಯಮಗಳಲ್ಲಿ ಯತ್ನಾಳ್ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಮೊದಲನೆಯದಾಗಿ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಹಿಂದುತ್ವವನ್ನು ಯತ್ನಾಳರು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಎರಡನೆಯದಾಗಿ, ಯತ್ನಾಳ ಅವರು ನೆಹರೂ ಹಾಗೂ ಗಾಂಧಿ ಕುರಿತು ನಿಂದನೆಯನ್ನು ಎಂದಿಗೂ ನಿಲ್ಲಿಸಿಲ್ಲ. ಈಗ, ಯತ್ನಾಳ ಅವರು ಭ್ರಷ್ಟಾಚಾರದ ಬಗ್ಗೆ ಆರೋಪಿಸಿರುವುದು ನಿಜ ಎಂದಾದರೆ, ಅವರು ಆಗಾಗ್ಗೆ ಮಾಡುತ್ತಿರುವ ಇತರೆಲ್ಲ ಆರೋಪಗಳೂ ನಿಜವಿರಬೇಕಲ್ಲಾ, ದಯವಿಟ್ಟು ಮತ್ತೊಮ್ಮೆ ಯೋಚಿಸಿ ಎಂದು ಜೈರಾಮ್ ರಮೇಶ್‌ಗೆ ಲಹರ್ ಸಿಂಗ್ ನೆನಪಿಸಿದ್ದಾರೆ.

ಯತ್ನಾಳ ಆರೋಪದ ಬಗ್ಗೆ ಟ್ವೀಟ್‌ ಮಾಡಿದ್ದ ಕಾಂಗ್ರೆಸ್ ನಾಯಕ ಜೈರಾಮ್‌ ರಮೇಶ್‌, 'ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯುಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ವೇಳೆ ಕೋವಿಡ್ ಹೆಸರಿನಲ್ಲಿ ₹ 40 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ ಮಾಡಿದ್ದಾರೆ. ದಾಖಲೆಗಳನ್ನು ಹೊಂದಿರುವುದಾಗಿಯೂ ಹೇಳಿರುವ ಯತ್ನಾಳ, ಬಿಜೆಪಿ ಸರ್ಕಾರವು ಸತ್ತವರ ಹೆಸರಿನಲ್ಲಿ ಲಾಭ ಮಾಡಿಕೊಂಡಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ' ಎಂದಿದ್ದರು.

ಬಿಜೆಪಿಯ ಹಿರಿಯ ನಾಯಕರು ಭಾಗಿಯಾಗಿರುವ ಈ ಹಗರಣವು ಅತ್ಯಂತ ಭಯಾನಕ ಮತ್ತು ನಾಚಿಕೆಗೇಡಿನದ್ದು. ಬಿಜೆಪಿ ಸರ್ಕಾರ ದೇಶದಾದ್ಯಂತ ನಡೆಸಿರುವ ಇಂತಹ ಹಗರಣಗಳ ಸ್ವರೂಪವು ನೀರಿನ ಮೇಲೆ ತೇಲುವ ಮಂಜುಗಡ್ಡೆ ಇದ್ದಂತೆ. ಮೇಲೆ ಕಾಣುವುದು ಸ್ವಲ್ಪವೇ ಆದರೂ, ಒಳಗೆ ಭಾರಿ ‍ಪ್ರಮಾಣದಲ್ಲಿ ಅಡಗಿರುತ್ತದೆ ಎಂದು ಕಿಡಿಕಾರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT